Advertisement

ಗುಡುಗು ಮಿಶ್ರಿತ ಮಳೆಗೆ ಅಲ್ಪ ಸ್ವಲ್ಪ ಹಾನಿ

01:03 PM Jun 09, 2019 | Team Udayavani |

ಮುದ್ದೇಬಿಹಾಳ: ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಶುಕ್ರವಾರ ಮಧ್ಯರಾತ್ರಿ ಸಿಡಿಲು, ಗುಡುಗು ಮಿಶ್ರಿತ ಮಳೆಯಾಗಿದ್ದು ಈ ವೇಳೆ ಬೀಸಿದ ಭಾರಿ ಗಾಳಿಗೆ ಅಲ್ಲಲ್ಲಿ ಅಲ್ವ ಸ್ವಲ್ಪ ಹಾನಿ ಆದ ವರದಿಯಾಗಿದೆ. ಅಬ್ಬಿಹಾಳ ಗ್ರಾಮದಲ್ಲಿ ಸಿಡಿಲು, ಮಳೆಗೆ ಎರಡು ಮನೆಗಳಿಗೆ ಹಾನಿ ಆಗಿದ್ದು ಭಾಗಶಃ ಕುಸಿದಿವೆ.

Advertisement

ಮುದ್ದೇಬಿಹಾಳ ಪಟ್ಟಣದ ನೇತಾಜಿ ನಗರದಲ್ಲಿ ಚರಂಡಿ ಮೇಲೆ ಉಕ್ಕಿದ ಕೊಳಚೆ ನೀರು ರಸ್ತೆಯನ್ನೆಲ್ಲಾ ಕೆಸರುಮಯ ಮಾಡಿದ್ದೂ ಅಲ್ಲದೆ ಕೆಲ ಮನೆಗಳ ಬಾಗಿಲವರೆಗೂ ಕಸ ಕಡ್ಡಿ ಕೊಳಚೆ ತಂದು ಬಿಟ್ಟಿದೆ. ಬೆಳಗ್ಗೆ ಅಲ್ಲಿನ ನಿತ್ಯದ ಜನಜೀವನಕ್ಕೆ ಸಾಕಷ್ಟು ತೊಂದರೆ ಆಗಿದ್ದು ಕಂಡು ಬಂತು. ಉಳಿದಂತೆ ಹುಡ್ಕೋ ಪ್ರವೇಶ ದ್ವಾರ, ಕೊಳಚೆ ಪ್ರದೇಶವಾದ ಪಿಲೇಕೆಮ್ಮ ನಗರ, ಇಂದಿರಾ ನಗರ, ಕಿಲ್ಲಾ ಸೇರಿ ಹಲವೆಡೆ ಚರಂಡಿ ನೀರು ರಸ್ತೆ ಮೇಲೆಲ್ಲಾ ಹರಿದು ಸಾಕಷ್ಟು ಸಂಚಾರ ಸಮಸ್ಯೆ ಉಂಟು ಮಾಡಿತ್ತು. ಹಲವೆಡೆ ವಿದ್ಯುತ್‌ ಕಂಬಗಳು ಮುರಿದಿದ್ದರೆ ಮತ್ತೇ ಕೆಲವೆಡೆ ಉರುಳಿ ಬಿದ್ದಿವೆ.

ರಾತ್ರಿ ಗ್ರಾಮೀಣ ಭಾಗ ಸೇರಿದಂತೆ ಪಟ್ಟಣದ ಪ್ರದೇಶಗಳಲ್ಲಿ ವಿದ್ಯುತ್‌ ಕಡಿತಗೊಳಿಸಲಾಗಿತ್ತು. ಇದರಿಂದಾಗಿ ಯಾವುದೇ ಅವಘಡ ಸಂಭವಿಸಿಲ್ಲ. ಕೆಲವೆಡೆ ಮನೆಗಳ ಮೇಲ್ಛಾವಣಿಗೆ ಹೊದಿಸಿದ್ದ ಪತ್ರಾಸ್‌ಗಳು ಹಾರಿ ಹೋಗಿವೆ. ಮತ್ತೆ ಕೆಲವೆಡೆ ಹೊಲಗಳಲ್ಲಿ ದನಗಳಿಗೆ ಆಶ್ರಯ ಕಲ್ಪಿಸಲು ಹಾಕಿದ್ದ ಗುಡಿಸಲು ನಾಶವಾಗಿವೆ ಎನ್ನಲಾಗಿದೆ.

ಕರೆ ಸ್ವೀಕರಿಸದ ತಹಶೀಲ್ದಾರ್‌: ಮಧ್ಯರಾತ್ರಿ ಬಿದ್ದ ಸಿಡಿಲಿಗೆ ಎಲ್ಲೆಲ್ಲಿ ಹಾನಿ ಆಗಿದೆ ಅನ್ನುವ ಮಾಹಿತಿ ಪಡೆಯಲು ತಾಲೂಕಿನ ಪ್ರಭಾರ ತಹಶೀಲ್ದಾರ್‌ ಆಗಿರುವ ತಾಳಿಕೋಟೆ ತಹಶೀಲ್ದಾರ್‌ ನಿಂಗಪ್ಪ ಬಿರಾದಾರ ಅವರ ಮೊಬೈಲ್ ನಂಬರಿಗೆ ಶನಿವಾರ ಬೆಳಗ್ಗೆ, ಮಧ್ಯಾಹ್ನ ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ. ಹೀಗಾಗಿ ಎಲ್ಲೆಲ್ಲಿ ಅನಾಹುತ ಸಂಭವಿಸಿದೆ ಎನ್ನುವ ಮಾಹಿತಿ ತಕ್ಷಣಕ್ಕೇ ಲಭ್ಯವಾಗಿಲ್ಲ. ಆದರೆ ಇಲ್ಲಿನ ಕಂದಾಯ ಇಲಾಖೆ ಮೂಲಗಳ ಪ್ರಕಾರ ಯಾವುದೇ ಜೀವ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next