Advertisement

ಫುಟ್‌ಪಾತ್‌ ಅತಿಕ್ರಮಣ ತೆರವು ಯಶಸ್ವಿ

11:53 AM Nov 21, 2019 | Naveen |

ಮುದ್ದೇಬಿಹಾಳ: ಬಸ್‌ ನಿಲ್ದಾಣ ಮುಂಭಾಗ, ಬಸವೇಶ್ವರ ವೃತ್ತ ಹಾಗೂ ಮುಖ್ಯ ಬಜಾರ್‌ನ ಮುಖ್ಯ ರಸ್ತೆ ಪಕ್ಕದ ಫುಟ್‌ಪಾತ್‌ ಅತಿಕ್ರಮಣ ತೆರವುಗೊಳಿಸುವಲ್ಲಿ ಯಶಸ್ವಿಯಾಗಿರುವ ಪುರಸಭೆ ಮತ್ತು ಪೊಲೀಸ್‌ ಅಧಿಕಾರಿಗಳು ಇದೀಗ ಆಯಾ ಸ್ಥಳಗಳಲ್ಲಿ ಮತ್ತೆ ಅತಿಕ್ರಮಣ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳತೊಡಗಿದ್ದಾರೆ.

Advertisement

ಬುಧವಾರ ಆಯಾ ಸ್ಥಳಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಮತ್ತೇ ಬೀದಿ ಬದಿ ತರಕಾರಿ ಮಾರಾಟಕ್ಕೆ ಯತ್ನಿಸುತ್ತಿರುವವರಿಗೆ ತಿಳಿವಳಿಕೆ ನೀಡಿ ಅಲ್ಲಿಂದ ತೆರುವುಗೊಳಿಸಿದರು. ಅತಿಕ್ರಮಣ ತೆರವುಗೊಳಿಸಿದ್ದರ ಪರಿಣಾಮ ಫುಟ್‌ಪಾತ್‌ ಮತ್ತು ಚರಂಡಿ ನಿರ್ಮಾಣ ಕಾರ್ಯಕ್ಕೆ ಅವಕಾಶ ದೊರಕಿದ್ದು ರಾಜ್ಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸಿದ್ದಾರೆ.

„ಹೂ-ಹಣ್ಣಿನವರಿಗೆ ಅವಕಾಶ: ಹೂ ಮತ್ತು ಹಣ್ಣು ಮಾರಾಟಗಾರರಿಗೆ ಹಳೇ ತಹಶೀಲ್ದಾರ್‌ ಕಚೇರಿ ಆವರಣದಲ್ಲಿನ ಸೈನಿಕ ಮೈದಾನದಲ್ಲಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಅಲ್ಲಿ ವ್ಯಾಪಾರ ಆಗುವುದಿಲ್ಲ. ಬಸ್‌ ನಿಲ್ದಾಣ ಬಳಿ ಮಾರಾಟ ನಡೆದರೆ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ಮತ್ತು ವ್ಯಾಪಾರಸ್ಥರಿಗೆ ಅನುಕೂಲ ಆಗುತ್ತದೆ ಎನ್ನುವುದನ್ನು ಅಧಿಕಾರಿಗಳ ಗಮನಕ್ಕೆ ತಂದು ಮನವೊಲಿಸುವ ಪ್ರಯತ್ನಗಳು ಯಶಸ್ವಿಯಾಗಿವೆ. ಇದರಿಂದಾಗಿ ಹೂ ಮತ್ತು ಹಣ್ಣು ಮಾರಾಟಗಾರರಿಗೆ ಬಸ್‌ ನಿಲ್ದಾಣ ಮುಂಭಾಗ ಇರುವ ಕಾಂಪೌಂಡ್‌ನ‌ ಕಟ್ಟೆ ಮೇಲೆ ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಯಾವುದೇ ಕಾರಣಕ್ಕೂ ಅಲ್ಲಿ ತಳ್ಳುಗಾಡಿ ಇಟ್ಟು ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ಎಚ್ಚರಿಕೆ ನೀಡಲಾಗಿದೆ.

ಒಂದು ವೇಳೆ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಆಗುತ್ತಿರುವುದು ಕಂಡು ಬಂದಲ್ಲಿ ಎತ್ತಂಗಡಿ ಮಾಡಿಸುವುದಾಗಿ ಅ ಧಿಕಾರಿಗಳು ಹೂ ಹಣ್ಣು ಮಾರಾಟಗಾರರಿಗೆ ಕಟ್ಟೆಚ್ಚರ ನೀಡಿದ್ದಾರೆ. ಇದನ್ನು ಪಾಲಿಸುತ್ತಿರುವ ಮಾರಾಟಗಾರರು ಬಸ್‌ ನಿಲ್ದಾಣದ ಮುಂದೆ ಸಂಚಾರಕ್ಕೆ ತೊಂದರೆ ಆಗದ ರೀತಿಯಲ್ಲಿ ವ್ಯಾಪಾರ ಪ್ರಾರಂಭಿಸಿದ್ದಾರೆ.

„ನಿಲ್ದಾಣದೊಳಕ್ಕೆ ಆಟೋ: ಬಸ್‌ ನಿಲ್ದಾಣ ಎದುರಿಗಿನ ಫುಟ್‌ಪಾತ್‌ ಅತಿಕ್ರಮಿಸಿ ಆಟೋ ನಿಲ್ಲಿಸುವುದಕ್ಕೆ ಪೊಲೀಸರು ಕಡಿವಾಣ ಹಾಕಿದ್ದು ಸಾರಿಗೆ ಘಟಕದ ಮೇಲಧಿಕಾರಿಗಳ ಜೊತೆ ಮಾತನಾಡಿ ಎಲ್ಲ ಆಟೋಗಳನ್ನು ಬಸ್‌ ನಿಲ್ದಾಣದ ಕಾಂಪೌಂಡಿನೊಳಕ್ಕೆ ನಿಲ್ಲಿಸಿ ಕಾರ್ಯಾಚರಣೆ ನಡೆಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ರಸ್ತೆ ಮೇಲೆ ಬೇಕಾಬಿಟ್ಟಿಯಾಗಿ ಆಟೋ ನಿಲ್ಲಿಸದಂತೆ ಎಚ್ಚರಿಕೆ ನೀಡಲಾಗಿದೆ.

Advertisement

„ಚರ್ಮ ಕುಟೀರಕ್ಕೆ ಅವಕಾಶ: ಬಸವೇಶ್ವರ ವೃತ್ತದಿಂದ ಮುಖ್ಯ ಬಜಾರ್‌ಗೆ ಹೋಗುವ ಮುಖ್ಯ ರಸ್ತೆಯ ಒಂದು ಬದಿ ಸರ್ಕಾರಿ ಶಾಲೆಗೆ ಕಾಂಪೌಂಡ್‌ಗೆ ಹೊಂದಿಕೊಂಡು ಫುಟ್‌ಪಾತ್‌ ನಿರ್ಮಿಸಿದ್ದು ಅಲ್ಲಿ 8-10 ಚರ್ಮ ಕುಟೀರಗಳನ್ನು ಇಡಲು ಪುರಸಭೆಯವರು ಮೊದಲು ಅನುಮತಿ ನೀಡಿದ್ದರು.

ಹೀಗಾಗಿ ಅತಿಕ್ರಮಣ ತೆರುವು ವೇಲೆ ಈ ಕುಟೀರಗಳನ್ನು ತೆರುವುಗೊಳಿಸುವುದು ಸಾಧ್ಯವಾಗಿರಲಿಲ್ಲ. ಇದಲ್ಲದೆ ಈ ಕುಟೀರಗಳಿಂದ ಅಷ್ಟೇನೂ ಸಮಸ್ಯೆ ಸದ್ಯಕ್ಕೆ ಕಂಡು ಬರುತ್ತಿಲ್ಲ ಎನ್ನುವುದನ್ನು ಮನನ ಮಾಡಿಕೊಂಡ ಪುರಸಭೆಯವರು ಸದ್ಯ 8-10 ಚರ್ಮ ಕುಟೀರಗಳನ್ನು ಮೊದಲಿದ್ದ ಸ್ಥಳದಲ್ಲೇ ಇರಲು ತಾತ್ಕಾಲಿಕ ಅವಕಾಶ ಮಾಡಿಕೊಟ್ಟಿದ್ದಾರೆ. ಇವುಗಳಿಂದ ತೊಂದರೆ ಆಗುತ್ತಿರುವುದು ಕಂಡು ಬಂದಲ್ಲಿ ಅವುಗಳನ್ನೂ ಸ್ಥಳಾಂತರಿಸುವ ಮುಕ್ತ ಅವಕಾಶವನ್ನು ಕಾಯ್ದಿರಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next