Advertisement

ಪ್ರವಾಹ ಭೀತಿ: 20 ಕುಟುಂಬ ಸ್ಥಳಾಂತರ

01:35 PM Aug 10, 2019 | Naveen |

ಮುದ್ದೇಬಿಹಾಳ: ಕೃಷ್ಣಾ ನದಿಯ ಪ್ರವಾಹ ನಿರೀಕ್ಷಿತ ಹಾನಿ ತಂದೊಡ್ಡುವ ಸಂಭವ ಅರಿತ ಅಧಿಕಾರಿಗಳ ತಂಡ ತಾಲೂಕಿನ ಕೃಷ್ಣಾ ನದಿ ದಂಡೆಯ ತಂಗಡಗಿ, ಕುಂಚಗನೂರ, ಕಮಲದಿನ್ನಿ, ಮುದೂರ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ ಪ್ರವಾಹದ ಮುನ್ನೆಚ್ಚರಿಕೆ ಕ್ರಮವಾಗಿ ಒಟ್ಟು 20 ಕುಟುಂಬಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಂಡಿದ್ದಾರೆ. ಸ್ಥಳಾಂತರಗೊಂಡವರಿಗೆಲ್ಲ ಆಯಾ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ವಸತಿ ಹೂಡಲು ವ್ಯವಸ್ಥೆ ಮಾಡಿದ್ದು ಇವರಿಗೆಲ್ಲ ಶಾಲೆಯ ಬಿಸಿಯೂಟ ಕೊಡಲು ಸೂಚಿಸಲಾಗಿದೆ.

Advertisement

ಶುಕ್ರವಾರ ಸಂಜೆ ವಿಜಯಪುರ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ನೇತೃತ್ವದ ಅಧಿಕಾರಿಗಳ ತಂಡ ತಂಗಡಗಿ, ಕುಂಚಗನೂರ, ಕಮಲದಿನ್ನಿ ಗ್ರಾಮಕ್ಕೆ ವಸ್ತುಸ್ಥಿತಿ ಅವಲೋಕಿಸಲು ಆಗಮಿಸಿತ್ತು. ಮೊದಲಿಗೆ ಕುಂಚಗನೂರ ಗ್ರಾಮಕ್ಕೆ ತೆರಳಿ ಅಧಿಕಾರಿಗಳು ಪರಿಶೀಲಿಸಿ ಅಲ್ಲಿ ಜನವಸತಿಗೆ ಪ್ರವಾಹದಿಂದ ಯಾವುದೇ ಸಮಸ್ಯೆ ಇಲ್ಲ ಎನ್ನುವುದನ್ನು ಮನಗಂಡರು. ನಂತರ ಕಮಲದಿನ್ನಿಗೆ ತೆರಳಬೇಕಾದರೆ ಕುಂಚಗನೂರ-ಕಮಲದಿನ್ನಿ ರಸ್ತೆ ನಡುವೆ ಒಂದು ಭಾಗದಲ್ಲಿ ಪ್ರವಾಹದ ನೀರಿನಿಂದ ಭರ್ತಿ ಆಗಿತ್ತು. ಹೀಗಾಗಿ ಗ್ರಾಮಸ್ಥರೊಬ್ಬರ ಟ್ರ್ಯಾಕ್ಟರ್‌ ಏರಿದ ಅಧಿಕಾರಿಗಳು ಪ್ರವಾಹದ ನೀರಲ್ಲೆ ಸಾಗಿ ಬಂದರು. ಕಮಲದಿನ್ನಿಯಲ್ಲಿ ಅಂದಾಜು 6 ಮನೆಗಳು ನದಿಗೆ ಸಮೀಪ ಇದ್ದು ಈ ಮನೆಗಳ ಗೋಡೆಗಳಿಗೆ ಪ್ರವಾಹದ ನೀರು ಅಪ್ಪಳಿಸುತ್ತಿರುವುದನ್ನು ತಿಳಿದು ಖುದ್ದು ಪರಿಶೀಲಿಸಲು ಮೀನುಗಾರರ ಬೋಟ್‌ನಲ್ಲಿ ಕುಳಿತು ಪರಿಸ್ಥಿತಿ ಅವಲೋಕಿಸಿದರು. ಈ ಮನೆಗಳಿಗೆ ಧಕ್ಕೆ ಆಗುವುದನ್ನು ಮನಗಂಡು ಆ ಕೂಡಲೇ ಅವರೆಲ್ಲರನ್ನೂ ಸ್ಥಳೀಯ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲು ಕ್ರಮ ಕೈಗೊಂಡರು.

ಮರಳಿ ತಂಗಡಗಿ ಗ್ರಾಮಕ್ಕೆ ಬರುವಾಗ ಅಲ್ಲಿನ ಹರಿಜನ ಕಾಲೋನಿಯ 4 ಕುಟುಂಬಗಳ ಮನೆಗಳು ಪ್ರವಾಹದ ನೀರಿಗೆ ತೀರ ಹತ್ತಿರದಲ್ಲಿರುವುದನ್ನು ಕಂಡರು. ಯಾವುದೇ ಕ್ಷಣದಲ್ಲಿ ಪ್ರವಾಹದ ನೀರು ಹೆಚ್ಚಳವಾಗಬಹುದು ಎನ್ನುವುದನ್ನು ಅರಿತು ಮುನ್ನೆಚ್ಚರಿಕೆ ಕ್ರಮವಾಗಿ ಆ ಕುಟುಂಬಗಳನ್ನೂ ಸಹಿತ ಸ್ಥಳೀಯ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲು ಕ್ರಮ ಕೈಗೊಂಡರು.

ಈ ಮಧ್ಯೆ ಕಮಲದಿನ್ನಿ ಭಾಗದಲ್ಲಿ ಪ್ರವಾಹದ ಹಾನಿ ಹೆಚ್ಚಾಗುವ ಸಂಭವ ಇದ್ದುದನ್ನು ಖುದ್ದು ಪರಿಶೀಲಿಸಿ ಖಚಿತಪಡಿಸಿಕೊಂಡಿದ್ದ ಉಪ ವಿಭಾಗಾಧಿ ಕಾರಿ ಗೆಣ್ಣೂರ ಅವರು ಜಿಲ್ಲಾ ನೋಡಲ್ ಅಧಿಕಾರಿಯೂ ಆಗಿರುವ ಕೃಷಿ ಇಲಾಖೆ ಅಧಿಕಾರಿ ಪ್ರಸಾದ್‌, ತಂಗಡಗಿ ಪಿಡಿಒ ಖೂಬಾಸಿಂಗ್‌ ಜಾಧವ, ಆ ಭಾಗದ ಗ್ರಾಮ ಲೆಕ್ಕಾಧಿಕಾರಿಗಳ ತಂಡವನ್ನು ಮುಂದಿನ ಬೆಳವಣಿಗೆ ಗಮನಿಸಿ ವರದಿ ಸಲ್ಲಿಸಲು ನೇಮಿಸಿದರು. ಅದೇ ರೀತಿ ಮುದೂರಕ್ಕೆ ಇಒ ಶಶಿಕಾಂತ, ಪಿಡಿಒ ಮುದಗಲ್ಲ, ಗ್ರಾಮ ಲೆಕ್ಕಾಧಿಕಾರಿ ತಂಡವನ್ನು ನೇಮಿಸಿ ಪರಿಸ್ಥಿತಿ ನಿಯಂತ್ರಿಸಲು ಕ್ರಮಕ್ಕೆ ಸೂಚಿಸಿದರು.

ಸ್ಥಳಾಂತರ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಉಪ ವಿಭಾಗಾಕಾರಿ ಸೋಮಲಿಂಗ ಗೆಣ್ಣೂರ, ಕಮಲದಿನ್ನಿ, ಗಂಗೂರ, ಕುಂಚಗನೂರ, ತಂಗಡಗಿ, ಮುದೂರ ಗ್ರಾಮಗಳಿಗೆ ಮಾತ್ರ ಸಮಸ್ಯೆ ಎದುರಾಗುವ ಸಂಭವ ಇದೆ. ಕೆಳಹಂತದ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಸಿಬ್ಬಂದಿ ಕೂಡಾ ಸಾಂಕ್ರಾಮಿಕ ರೋಗ ತಡೆಗಟ್ಟಲು ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಎಲ್ಲರ ಸಾಂಘಿಕ, ಒಗ್ಗಟ್ಟಿನ ಪ್ರಯತ್ನದಿಂದ ಪ್ರವಾಹದ ಗಂಭೀರ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲು ಜಿಲ್ಲಾಡಳಿತ ಎಲ್ಲ ತಯಾರಿ ಮಾಡಿಕೊಂಡಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next