Advertisement

ಪ್ರವಾಹ ಪೀಡಿತ ಸ್ಥಳಕ್ಕೆ ಜನಪ್ರತಿನಿಧಿಗಳ ದಂಡು

12:46 PM Aug 18, 2019 | Naveen |

ಮುದ್ದೇಬಿಹಾಳ: ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಪ್ರವಾಹ ಪೀಡಿತ ಗ್ರಾಮಗಳಿಗೆ ಮಾಜಿ ಗೃಹ ಮಂತ್ರಿ, ಶಾಸಕ ಎಂ.ಬಿ.ಪಾಟೀಲ, ಸಿ.ಎಸ್‌. ನಾಡಗೌಡ, ಜೆಡಿಎಸ್‌ ರಾಜ್ಯ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಮಂಗಳಾದೇವಿ ಬಿರಾದಾರ ಸೇರಿದಂತೆ ಸಮಿಶ್ರ ಪಕ್ಷದ ಮುಖಂಡರು ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿ ನಿರಾಶ್ರಿತರ ಅಹವಾಲು ಸ್ವೀಕರಿಸಿ ಹಾನಿಯಾದ ಬಗ್ಗೆ ರಾಜ್ಯ ಸರಕಾರದ ಮೇಲೆ ಒತಡ ಹೇರಲಾಗುವುದು ಎಂಬ ಭರವಸೆ ನೀಡಿದರು.

Advertisement

ತಾಲೂಕಿನ ತಂಗಡಗಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ನಿರಾಶ್ರಿತರ ಕೆಲ ಬೇಡಿಕೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಮಾಜಿ ಗೃಹ ಸಚಿವರು ನಿರಾಶ್ರಿತರು ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ. ರಾಜ್ಯ ಸರಕಾರ ಸೂಕ್ತವಾಗಿ ಪ್ರವಾಹ ನಿರ್ವಹಣೆ ಮಾಡಲಿದೆ. ಇಲ್ಲವಾದಲ್ಲಿ ನಿಮ್ಮೊಂದಿಗೆ ನಾವೂ ಕೂಡಾ ಹೋರಾಟ ನಡೆಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳೊನ ಎಂದು ಹೇಳಿದರು.

ನೀರಲ್ಲೇ ನುಗ್ಗಿದ ಕಾರುಗಳು: ಪ್ರವಾಹ ಪೀಡಿತ ಕುಂಚಗನೂರ ಗ್ರಾಮಕ್ಕೆ ಭೇಟಿ ನೀಡಿದ ನಂತರ ಕಮಲದಿನ್ನಿ ಗ್ರಾಮಕ್ಕೆ ಹೋಗಬೇಕಿತ್ತು. ಆದರೆ ಎರಡೂ ಗ್ರಾಮಗಳನ್ನು ಸಂಪರ್ಕಿಸುವ ಮುಖ್ಯರಸ್ತೆಯ ಒಂದು ಕಡೆ ಮೊಳಕಾಲ ಮಟ್ಟದವರೆಗೂ ಪ್ರವಾಹದ ನೀರು ತುಂಬಿತ್ತು. ಅಲ್ಲಿ ವಾಹನ ಸಂಚರಿಸಲು ಪ್ರಯಾಸ ಪಡುವ ಸ್ಥಿತಿ ಇತ್ತು.

ಆದರೂ ಮಾಜಿ ಸಚಿವ ನಾಡಗೌಡರ ಸೂಚನೆ ಮೇರೆಗೆ ಎಂ.ಬಿ. ಪಾಟೀಲ ಮತ್ತು ಕಾಂಗ್ರೆಸ್‌ ಧುರೀಣರು ಇದ್ದ ಕಾರುಗಳನ್ನು ಚಾಲಕರು ನೀರಲ್ಲೇ ವೇಗವಾಗಿ ಚಲಾಯಿಸಿಕೊಂಡು ಈ ಕಡೆಯಿಂದ ಆ ಕಡೆಗೆ, ಮರಳಿ ಆ ಕಡೆಯಿಂದ ಈ ಕಡೆಗೆ ಬಂದರು. ಈ ವೇಳೆ ಪ್ರವಾಹದ ನೀರು ವಿಂಡ್‌ಶೀಲ್ಡ್ ಎತ್ತರಕ್ಕೂ ಚಿಮ್ಮಿ ಕಾರಂಜಿಯಂತೆ ಪುಟಿಯುತ್ತಿದ್ದು ನೋಡುಗರಿಗೆ ಮನರಂಜನೆ ಒದಗಿಸಿತು.

ಈ ವೇಳೆ ಶಾಸಕರ ಧೈರ್ಯವನ್ನು ಕಾಂಗ್ರೆಸ್ಸಿಗರು ಕೊಂಡಾಡಿದರು. ಆದರೆ ಮಾಜಿ ಸಚಿವ ನಾಡಗೌಡರ ಕಾರು ಮಾತ್ರ ನೀರಲ್ಲಿ ಸಿಕ್ಕಿಹಾಕಿಕೊಂಡು ಏರ್‌ಫಿಲ್ಟರ್‌ನಲ್ಲಿ ನೀರು ನುಗ್ಗಿ ಏಕಾಏಕಿ ಬಂದ್‌ ಆಯಿತು. ಮರಳಿ ಎಷ್ಟೇ ಪ್ರಯತ್ನಿಸಿದರೂ ಚಾಲೂ ಆಗಲಿಲಲ್ಲ. ಆಗ ಅದರಲ್ಲಿದ್ದ ಎಂ.ಬಿ. ಪಾಟೀಲರ ಆಪ್ತ ಸಹಾಯಕ ಮಹಾಂತೇಶ ಬಿರಾದಾರ, ನಾಡಗೌಡರ ಆಪ್ತ ಸಹಾಯಕ ಮಲ್ಲಿಕಾರ್ಜುನ ಬಾಗೇವಾಡಿ, ಕಾಂಗ್ರೆಸ್‌ ಧುರೀಣ ರಾಯನಗೌಡ ತಾತರಡ್ಡಿ ಮತ್ತಿತರರು ಕೆಳಗಿಳಿದು ಕಾರನ್ನು ಹಿಂದಿನಿಂದ ತಳ್ಳಿ ನೀರು ದಾಟಿಸಿದರು. ನಂತರ ಹೇಗೋ ಕಾರನ್ನು ತಂಗಡಗಿ ಗ್ರಾಮದವರೆಗೆ ಇನ್ನೊಂದು ವಾಹನದ ಸಹಾಯದಿಂದ ತಂದು, ಅಲ್ಲಿ ದುರಸ್ತಿ ಮಾಡಿಸಿಕೊಂಡು ನಂತರ ಮುದ್ದೇಬಿಹಾಳಕ್ಕೆ ತರಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next