Advertisement
ಬಸರಕೋಡ ಸೇರಿ ಹಲವು ಗ್ರಾಮಗಳ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆ ವಿಮೆ ಹಂಚಿಕೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು, ತಪ್ಪಿತಸ್ಥರ ಅಮಾನತು ಮಾಡಲು ಒತ್ತಾಯಿಸಿ ಇಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ಮೂರು ದಿನಗಳಿಂದ ವಿಮೆ ವಂಚಿತ ರೈತರು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಬುಧವಾರ ರೈತರ ಬೇಡಿಕೆಯಂತೆ ತಹಶೀಲ್ದಾರ್ ವಿನಯ್‌ಕುಮಾರ ಪಾಟೀಲ ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡು ಅವರನ್ನು ಸ್ಥಳಕ್ಕೆ ಕರೆಸಿದ್ದರು.
Related Articles
Advertisement
ವಿಷದ ಬಾಟಲು ಪ್ರದರ್ಶನ: ಮದ್ಯಾಹ್ನ ತಹಶೀಲ್ದಾರ್, ಸಿಪಿಐ ಧರಣಿ ಸ್ಥಳಕ್ಕೆ ಬಂದು ರೈತರೊಂದಿಗೆ ಚರ್ಚಿಸುತ್ತಿದ್ದಾಗ ಗೌಡಪ್ಪಗೌಡ ಪಾಟೀಲ ಎನ್ನುವವರು ಕೀಟನಾಶಕದ ಬಾಟಲ್ ಪ್ರದರ್ಶಿಸಿ ಬೇಡಿಕೆ ಈಡೇರದಿದ್ದರೆ, ನ್ಯಾಯ ದೊರಕಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಒಡ್ಡಿ ಅಧಿಕಾರಿಗಳನ್ನು ದಂಗುಬಡಿಸಿದ್ದರು. ಇದರಿಂದ ಚಿಂತಿತರಾಗಿದ್ದ ಪೊಲೀಸ್ ಅಧಿಕಾರಿಗಳು ಡಿಸಿಯನ್ನು ಸ್ಥಳಕ್ಕೆ ಕರೆಸಲು ಹಿಂದೇಟು ಹಾಕಿದ್ದರು. ಆದರೆ ಪರಿಸ್ಥಿತಿ ಕೈ ಮೀರದಂತೆ ನಡೆದುಕೊಳ್ಳುವ ಭರವಸೆ ರೈತ ಮುಖಂಡರಿಂದ ದೊರೆತಿದ್ದರಿಂದ ಡಿಸಿಯನ್ನು ಕರೆಸಲು ಅವರು ಗ್ರೀನ್ ಸಿಗ್ನಲ್ ನೀಡಿದ್ದರು. ಹೀಗಾಗಿ ಸಂಜೆ ಡಿಸಿ, ಸಿಇಒ ಬಂದಾಗ ಹೆಚ್ಚಿನ ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹೆಣಗಬೇಕಾಯಿತು.
ಅಧಿಕಾರಿಗಳ ಮನವಿ ಮೇರೆಗೆ ಬುಧವಾರ ನಡೆಸಲು ಉದ್ದೇಶಿಸಿದ್ದ ಕೃಷಿ, ತಾಪಂ ಕಚೇರಿ ಮುತ್ತಿಗೆ, ಬೀಗ ಜಡಿಯುವುದನ್ನು ರೈತರು ಕೈ ಬಿಟ್ಟರು. ಗುರುವಾರ ನೀಡಿದ್ದ ಮುದ್ದೇಬಿಹಾಳ ಬಂದ್ ಕರೆಯನ್ನೂ ಹಿಂದಕ್ಕೆ ಪಡೆದುಕೊಂಡರು. ಸಮೀಕ್ಷೆಯಲ್ಲಿ ಆಗಿರುವ ಅನ್ಯಾಯ ತಿಳಿಸಿ ತಪ್ಪಿತಸ್ಥರ ವಿರುದ್ದ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇಲ್ಲಿನ ಪ್ರವಾಸಿ ಮಂದಿರಕ್ಕೆ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಆಗಮಿಸಿದ್ದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಗೆ ಲಿಖೀತ ದೂರು ಸಲ್ಲಿಸಿದರು.
ರೈತ ಮುಖಂಡರಾದ ಶ್ರೀಶೈಲ ಮೇಟಿ, ಗುರುನಾಥಗೌಡ ಬಿರಾದಾರ, ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಲ್ಲಿಕಾರ್ಜುನ ಸಿದರಡ್ಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ, ಸಂಗಣ್ಣ ಬಾಗೇವಾಡಿ, ವೈ.ಎಲ್. ಬಿರಾದಾರ, ಗೌಡಪ್ಪಗೌಡ ಪಾಟೀಲ, ನಾಗರಾಜ ತಂಗಡಗಿ, ಎಪಿಎಂಸಿ ನಿರ್ದೇಶಕ ವೈ.ಎಚ್. ವಿಜಯಕರ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.