Advertisement

ಸರ್ಕಾರಿ ಸೌಲಭ್ಯ ದೊರಕಿಸಲು ವಿಕಲಚೇತನರ ಆಗ್ರಹ

04:47 PM Jan 01, 2020 | Naveen |

ಮುದ್ದೇಬಿಹಾಳ: ವಿಕಲಚೇತನರಿಗೆ ಸರ್ಕಾರದಿಂದ ಲಭ್ಯ ಇರುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ದೊರಕಿಸಿಕೊಡಲು ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲೂ ಪ್ರತ್ಯೇಕ ವ್ಯವಸ್ಥೆ ಮಾಡುವುದರಿಂದ ಹೆಚ್ಚು ಅನುಕೂಲ ಆಗುತ್ತದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಆಸಕ್ತಿ ತೋರಿಸಬೇಕು ಎಂದು ವಿಕಲಚೇತನರು ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Advertisement

ಮಂಗಳವಾರ ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್‌ ಜಿ.ಎಸ್‌.ಮಳಗಿ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ವಿಕಲಚೇತನರ ಕುಂದು ಕೊರತೆ ಸಭೆಯಲ್ಲಿ ಈ ಆಗ್ರಹ ಕೇಳಿ ಬಂದಿದೆ.

ವಿಕಲಚೇತನರಿಗೆ ಕಂದಾಯ ಇಲಾಖೆಯಿಂದ ಪಿಂಚಣಿ ಸರಿಯಾಗಿ ದೊರಕುತ್ತಿಲ್ಲ. ಅನೇಕರಿಗೆ ಮಾಸಾಶನ ಬಟವಡೆ ಆಗುತ್ತಿಲ್ಲ. ಅರ್ಹರು ಮಾಸಾಶನ ಮಾಡಿಸಲು ಸಾಕಷ್ಟು ಬಾರಿ ಅಲೆದಾಡುವ ಪರಿಸ್ಥಿತಿ ಇದೆ. ತಹಶೀಲ್ದಾರ್‌ ಕಚೇರಿಯಲ್ಲಿದ್ದ ಆಧಾರ್‌ ಕೇಂದ್ರ ಬಂದ್‌ ಆಗಿದ್ದು ವಿಕಲಚೇತನರಿಗೆ ಸಮಸ್ಯೆ ಆಗಿದೆ. ಹಳೇ ಕಾರ್ಡ್‌ ತಿದ್ದುಪಡಿ ಮಾಡಲೂ ಆಗುತ್ತಿಲ್ಲ, ಹೊಸ ಕಾರ್ಡ್‌ ಮಾಡಿಸುವುದೂ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ತಕ್ಷಣವೇ ಕ್ರಮ ಕೈಕೊಂಡು ಆಧಾರ ಕೇಂದ್ರ ಮೊದಲಿನಂತೆ ಕೆಲಸ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್‌ ಅವರನ್ನು ಒತ್ತಾಯಿಸಿದರು.

ಢವಳಗಿ ಹೋಬಳಿ ಕೇಂದ್ರದಲ್ಲಿರುವ ನಾಡಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕಂಪ್ಯೂಟರ್‌ ಆಪರೇಟರ್‌ ವಿಕಲಚೇತನರ ಸೌಲಭ್ಯ ದೊರಕಿಸಿಕೊಡಲು ಸಾಕಷ್ಟು ಸತಾಯಿಸುತ್ತಿದ್ದು ಆತನನ್ನು ಕೂಡಲೇ ಬದಲಾವಣೆ ಮಾಡಬೇಕು ಎಂದು ತಹಶೀಲ್ದಾರ್‌ ಅವರನ್ನು ಒತ್ತಾಯಿಸಿದಾಗ ಈ ಕುರಿತು ಪರಿಶೀಲಿಸುವ ಭರವಸೆಯನ್ನು ತಹಶೀಲ್ದಾರ್‌ ಮಳಗಿ ನೀಡಿದರು.

ಮುದ್ದೇಬಿಹಾಳ ಪಟ್ಟಣದಲ್ಲಿ ವಿಕಲಚೇತನರಿಗೆ ಸಮುದಾಯ ಭವನಕ್ಕೆ ನಿವೇಶನ ದೊರಕಿಸಿಕೊಡಲು ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಬೇಕು ಮತ್ತು ತಹಶೀಲ್ದಾರ್‌ ಕಚೇರಿಯಲ್ಲಿ ವಿಕಲಚೇತನ ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಕೋರಿದಾಗ ನಿವೇಶನ ಬಗ್ಗೆ ಮುಖ್ಯಾಧಿಕಾರಿಗೆ ಪತ್ರ ಬರೆಯುವುದಾಗಿ, ಶೌಚಾಲಯ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಹಶೀಲ್ದಾರ್‌ ಭರವಸೆ ನೀಡಿದರು.

Advertisement

ಬಸವನಬಾಗೇವಾಡಿ ಬಸ್‌ ನಿಲ್ದಾಣದಲ್ಲಿ ವಿಕಲಚೇತನರಿಗಾಗಿ ಸ್ನೇಹಜೀವಿ ಸುಲಭ ಶೌಚಾಲಯ ವ್ಯವಸ್ಥೆ ಕಲ್ಪಿಸಿದ್ದು ಅದೇ ಮಾದರಿಯ ಶೌಚಾಲಯವನ್ನು ಮುದ್ದೇಬಿಹಾಳದ ಬಸ್‌ ನಿಲ್ದಾಣದಲ್ಲೂ ಕಲ್ಪಿಸಬೇಕು. ಶಿಕ್ಷಣ ಇಲಾಖೆ ಆದೇಶ ಹೊರಡಿಸಿ ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿ 14 ವರ್ಷದ ವಿಕಲಚೇತನ ಮಕ್ಕಳಿಗೆ ಗುರುತಿನ ಕಾರ್ಡ್‌ ಮಾಡಿಸಿಕೊಡುವಂತೆ ಸೂಚಿಸಬೇಕು ಎಂದು ಕೋರಿದರು.

ತಾಲೂಕು ಆರೋಗ್ಯಾಧಿಕಾರಿಯವರು ಸಭೆಗೆ ಬಂದಿಲ್ಲ. ಅವರ ಪ್ರತಿನಿಧಿಯನ್ನು ಕಳಿಸಿದ್ದಾರೆ. ಜನೇವರಿ 28ರಂದು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್‌ ಕ್ಯಾಂಪ್‌ ಇದ್ದು ಅಲ್ಲಿ ವಿಕಲಚೇತನರ ಗುರುತಿನ ಪತ್ರ ಮಾಡಿಸಿಕೊಡಲು ಅವಕಾಶ ಮಾಡಿಕೊಡಲು ಆರೋಗ್ಯ ಇಲಾಖೆಯವರಿಗೆ ಸೂಚಿಸಬೇಕು. ಸಿಡಿಪಿಓ ಅವರೂ ಸಭೆಗೆ ಬಂದಿಲ್ಲ. ಪ್ರತಿನಿಧಿಯನ್ನು ಕಳಿಸಿದ್ದಾರೆ. ಅವರ ಜೊತೆ ಭಾಗ್ಯಲಕ್ಷ್ಮೀ ಬಾಂಡ್‌ ಕುರಿತು ಚರ್ಚೆ ನಡೆಸಿ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಪ್ರತಿ ಗ್ರಾಪಂನಲ್ಲಿರುವ ಗ್ರಾಮೀಣ ವಿವಿಧೋದ್ದೇಶ ಕಾರ್ಯಕರ್ತರ (ವಿಆರ್‌ಡಬ್ಲ್ಯೂ) ನೇಮಕ ಕುರಿತು ಸಭೆಯಲ್ಲಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಕಾಂತ ಶಿವಪುರೆ ಅವರ ಜೊತೆ ಚರ್ಚಿಸಲಾಯಿತು. ವಿಕಲಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ವಿಜಯಪುರ ಜಿಲ್ಲಾ ಅಧಿಕಾರಿ ವಿ.ಜಿ.ಉಪಾಧ್ಯೆ ಅವರು ವಿಕಲಚೇತನರ ಸೌಲಭ್ಯಗಳ ಕುರಿತು ಮಾತನಾಡಿದರು. ವಿಕಲಚೇತನ ಶಾಲಾ ಮಕ್ಕಳ ಸ್ಕಾಲರ್‌ಶಿಪರ್‌, ಮದುವೆಯ ನೆರವಿನ ಅನುದಾನ ಮತ್ತಿತರ ಸೌಲಭ್ಯಗಳ ಬಗ್ಗೆ ತಿಳಿಹೇಳಿದರು.

ತಾಳಿಕೋಟೆ ತಹಶೀಲ್ದಾರ್‌ ಅನಿಲಕುಮಾರ ಢವಳಗಿ, ದೈಹಿಕ ಶಿಕ್ಷಣಾಧಿಕಾರಿ ಎಚ್‌.ಎಲ್‌.ಕರಡ್ಡಿ, ಟ್ರೇಜರಿ ಅಧಿಕಾರಿ ಚಂದ್ರಶೇಖರ, ಡಾ| ಪಿ.ಎಚ್‌. ಸುಣಕಲ್‌, ಸಮಾಜ ಕಲ್ಯಾಣ ಇಲಾಖೆಯ ಎಡಿ ಎನ್‌. ಆರ್‌.ಉಂಡಿಗೇರಿ, ಗ್ರೇಡ್‌-2 ತಹಸೀಲ್ದಾರ್‌ ಡಿ.ಜೆ. ಕಳ್ಳಿಮನಿ, ಉಪ ತಹಶೀಲ್ದಾರ್‌ ಜಿ.ಎನ್‌.ಕಟ್ಟಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಎಂಆರ್‌ಡಬ್ಲ್ಯೂ ಎಸ್‌. ಕೆ.ಘಾಟಿ, ವಿಆರ್‌ಡಬ್ಲ್ಯೂ ಗಳಾದ ಈರಯ್ಯ ಹಿರೇಮಠ, ಪಾವಡೆಪ್ಪ ಚಲವಾದಿ, ಅಡಿವೆಪ್ಪ ಕೊಡಗಾನೂರ, ರಾಜಾಭಕ್ಷ ಮೊಕಾಶಿ, ಪ್ರಭುಗೌಡ ಚಿಂಚೊಳ್ಳಿ, ರಾಜು ರಾಠೊಡ, ಯಮನಪ್ಪ ಚಲವಾದಿ, ಸಂಗಮ್ಮ ಜಂಬಗಿ ಸೇರಿದಂತೆ ಮುದ್ದೇಬಿಹಾಳ, ತಾಳಿಕೋಟೆ, ಢವಳಗಿ, ನಾಲತವಾಡ ಹೋಬಳಿ ವ್ಯಾಪ್ತಿಯ 150ಕ್ಕೂ ಹೆಚ್ಚು ವಿಕಲಚೇತನರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next