Advertisement

ಶಿಕ್ಷಕರ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ

03:12 PM Sep 16, 2019 | Naveen |

ಮುದ್ದೇಬಿಹಾಳ: ಖಾಸಗಿ ಅನುದಾನಿತ ಶಿಕ್ಷಕರ ಕಾಲ್ಪನಿಕ ವೇತನ ಬಡ್ತಿ ಕುರಿತು ಮಾಜಿ ಸಚಿವ ಬಸವರಾಜ ಹೊರಟ್ಟಿ ನೇತೃತ್ವದ ಐವರ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ ಕರ್ನಾಟಕ ರಾಜ್ಯ ಖಾಸಗಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಡಾ| ಕೆ.ಹನುಮಂತಪ್ಪ ಅವರು ಸರ್ಕಾರ ಸ್ಪಂದಿಸದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Advertisement

ಪಟ್ಟಣದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ರವಿವಾರ ಏರ್ಪಡಿಸಿದ್ದ ಶಿಕ್ಷಕರ ದಿನೋತ್ಸವ-2019, ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಅನುದಾನಿತ ಶಿಕ್ಷಕರಿಗೂ ಸರ್ಕಾರಿ ಶಿಕ್ಷಕರಿಗೆ ಕೊಡುವ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಎನ್‌ಪಿಎಸ್‌ ರದ್ದು ಪಡಿಸಬೇಕು. ಅವೈಜ್ಞಾನಿಕ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಮರು ಪರಿಶೀಲಿಸಿ ಒಬ್ಬ ಶಿಕ್ಷಕರಿಗೆ 30 ವಿದ್ಯಾರ್ಥಿ ಅನುಪಾತ ಪಾಲಿಸಬೇಕು. ಜ್ಯೋತಿ ಸಂಜೀವಿನಿ ಸೌಲಭ್ಯ ಈ ಶಿಕ್ಷಕರಿಗೂ ವಿಸ್ತರಿಸಬೇಕು. ಖಾಸಗಿ ಶಾಲೆ ಮಕ್ಕಳಿಗೂ ಸರ್ಕಾರಿ ಶಾಲೆ ಮಕ್ಕಳಂತೆ ಸಮವಸ್ತ್ರ, ಪಠ್ಯಪುಸ್ತಕ, ಕರ್ನಾಟಕ ದರ್ಶನ ಪ್ರವಾಸ ಸೌಲಭ್ಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಅನುದಾನಿತ ಶಿಕ್ಷಕರಿಗೆ ಸರ್ಕಾರಿ ಶಿಕ್ಷಕರಿಗೆ ಇರುವ ಎಲ್ಲ ಸೌಲಭ್ಯಗಳು ಇಲ್ಲವಾದರೂ ಉತ್ತಮ ಪಾಠ ಬೋಧನೆಯಲ್ಲಿ ತೊಡಗಿಸಿಕೊಂಡಿರುವುದು ಸ್ತುತ್ಯರ್ಹ. ಇವರ ಸಮಸ್ಯೆಗಳನ್ನು ಸರ್ಕಾರ ಆದ್ಯತೆ ಮೇಲೆ ಬಗೆಹರಿಸಲು ಮುಂದಾಗಬೇಕು ಎಂದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ, ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಉಮರಾಣಿ, ದಿವ್ಯ ಸಾನ್ನಿಧ್ಯ ವಹಿಸಿದ್ದ ಶಿರೂರು ಮಹಾಂತತೀರ್ಥ ಮಠದ ಡಾ| ಬಸವಲಿಂಗ ಸ್ವಾಮೀಜಿ ಮಾತನಾಡಿದರು. ವಿಜಯಪುರ ಲೋಯೋಲಾ ಪಿಯು ಕಾಲೇಜು ಉಪನ್ಯಾಸಕ ರಾಜೇಂದ್ರಕುಮಾರ ಬಿರಾದಾರ ಉಪನ್ಯಾಸ ನೀಡಿದರು.

ರೈಲ್ವೆ ಸಲಹಾ ಸಮಿತಿ ಸದಸ್ಯ ಎಂ.ಎಸ್‌. ಪಾಟೀಲ, ಸೋಮನಗೌಡ ಪಾಟೀಲ ನಡಹಳ್ಳಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ಎಲ್. ಕರಡ್ಡಿ, ಸಂಘದ ರಾಜ್ಯ ಉಪಾಧ್ಯಕ್ಷ ಗೋಪಾಲ ಹೂಗಾರ, ಸಂಘದ ರಾಜ್ಯ ಸಮಿತಿ ಸದಸ್ಯ ಎಂ.ಎಸ್‌. ಬಿರಾದಾರ, ಜಿಲ್ಲಾ ಘಟಕ ಉಪಾಧ್ಯಕ್ಷ ಬಿ.ಬಿ. ಗಡ್ಡದ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುರುಗೇಶ ಹೊಕ್ರಾಣಿ, ಗಣ್ಯರಾದ ಪ್ರಭು ಕಡಿ, ಕೆ.ವೈ. ಬಿರಾದಾರ, ಶ್ರೀಶೈಲ ಮೇಟಿ ವೇದಿಕೆಯಲ್ಲಿದ್ದರು.

Advertisement

ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಮುದ್ದೇಬಿಹಾಳದ ಸಂಗನಗೌಡ ಬಿರಾದಾರ, ಇಂಡಿಯ ಸಿ.ಸಿ. ಬಿರಾದಾರ, ವಿಜಯಪುರ ನಗರದ ವೇಣು ಲಮಾಣಿ, ವಿಜಯಪುರ ಗ್ರಾಮೀಣದ ನಾನಾಗೌಡ ಪಾಟೀಲ, ಚಡಚಣದ ಲವಕುಶ ಹೂಗಾರ, ಬಸವನಬಾಗೇವಾಡಿಯ ಎಸ್‌.ಎಂ. ಹೆಬ್ಟಾಳ, ಸಿಂದಗಿಯ ಮಹಾದೇವಪ್ಪ ಹರಿಜನ ಅವರಿಗೆ ಹಾಗೂ ಮುದ್ದೇಬಿಹಾಳ ತಾಲೂಕು ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಎಲ್.ಎಸ್‌. ಬೊಮ್ಮನಳ್ಳಿ, ಶಂಕರಲಿಂಗ ಚಿತ್ತರಗಿ, ಶಾಂತಪ್ಪ ಬಳವಾಟ, ಧರ್ಮಪ್ಪ ಕಟ್ಟಿಮನಿ ಅವರಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಡಾ| ಎಸ್‌.ರಾಧಾಕೃಷ್ಣನ್‌ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಲಾಯಿತು. ನಿವೃತ್ತ ಶಿಕ್ಷಕರು ಮತ್ತು ತಾಲೂಕು ಘಟಕಗಳ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಸಂಗಮೇಶ ಶಿವಣಗಿ ಪ್ರಾರ್ಥಿಸಿದರು. ಗಿರೀಶ ಬಿರಾದಾರ ಸ್ವಾಗತಿಸಿದರು. ಎಂ.ವೈ. ಗೌಂಡಿ ಪ್ರಾಸ್ತಾವಿಕ ಮಾತನಾಡಿದರು. ಪಿ.ಬಿ. ಹಾದಿಮನಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next