Advertisement

ಕಳಪೆ ಆಹಾರ ಧಾನ್ಯ ಪೂರೈಕೆ

01:25 PM Jan 15, 2020 | Naveen |

ಮುದ್ದೇಬಿಹಾಳ: ತಾಲೂಕಿನ ಕೆಲವು ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಆಹಾರ ಧಾನ್ಯ ಪೂರೈಕೆ ಆಗುತ್ತಿರುವುದು ಕೆಲ ಕೇಂದ್ರ ಭೇಟಿ ಮಾಡಿದಾಗ ತಿಳಿದು ಬಂದಿದೆ. ಈ ಬಗ್ಗೆ ತಾಪಂ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತೇನೆ ಎಂದು ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ ತಿಳಿಸಿದ್ದಾರೆ.

Advertisement

ಸೋಮವಾರ ಮುದ್ದೇಬಿಹಾಳ ಪಟ್ಟಣದ ಮಹೆಬೂಬ ನಗರದಲ್ಲಿರುವ, ಸರೂರ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಆಹಾರ ಧಾನ್ಯ ಪರಿಶೀಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರೂರ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಸ್ಟಾಕ್‌ ಇದ್ದ ತೊಗರಿ ಬೇಳೆ ಮತ್ತು ಹೆಸರು ಕಾಳನ್ನು ಪರಿಶೀಲಿಸಿದಾಗ ಕಳಪೆ ಗುಣಮಟ್ಟ ಖಚಿತಗೊಂಡಿದೆ. ಈ ಧಾನ್ಯಗಳು ಹುಳ ಹತ್ತಿ ತೂತು ಬಿದ್ದಿವೆ. ಧಾನ್ಯಗಳು ಹಿಟ್ಟಾಗಿ ಕೆಟ್ಟು ಹೋಗಿವೆ. ಕಾಳುಗಳ ಒಳಗೆ ಇನ್ನೂ ಬುರಬುರಿ ಹುಳಗಳು ಇರುವುದು ಕಂಡು ಬಂತು. ಅಂತಹ ಕಳಪೆ ಗುಣಮಟ್ಟದ ಧಾನ್ಯಗಳನ್ನು ಅಡುಗೆಗೆ ಬಳಸದಂತೆ ಅಂಗನವಾಡಿ ಸಿಬ್ಬಂದಿಗೆ ಸೂಚಿಸಿದ್ದಾಗಿ ತಿಳಿಸಿದರು.

ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಆಹಾರ ಧಾನ್ಯ ಪೂರೈಕೆ ಆಗುವಂತೆ
ನೋಡಿಕೊಳ್ಳುವ ಹೊಣೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾ ಧಿಕಾರಿಗಳದ್ದಾಗಿದೆ. ಅವರು ಕೇಂದ್ರಗಳ ಪರಿಶೀಲನೆ ನಡೆಸದೆ ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡುತ್ತಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಅವರು ಕ್ರಿಯಾಶೀಲರಾಗಿ ಕೆಲಸ ಮಾಡಿದ್ದರೆ ಇಂಥ ಕಳಪೆ ಬೇಳೆ ಕಾಳುಗಳ ಪೂರೈಕೆ ಆಗುತ್ತಿರಲಿಲ್ಲ ಎಂದು ಅಸಮಾಧಾನ ತೋಡಿಕೊಂಡ ಅವರು, ಇಂಥ ಹುಳ ಹತ್ತಿದ ಕಾಳುಗಳನ್ನೇ ಮಕ್ಕಳಿಗೆ ಅಡುಗೆ ಮಾಡಿ ಹಾಕಿ ಬಡಿಸಿದರೆ ಮಕ್ಕಳ ಆರೋಗ್ಯ ಏನಾಗಬೇಡ ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ ಮಹೆಬೂಬನಗರದ ಸರ್ಕಾರಿ ಉರ್ದು ಪ್ರೌಢಶಾಲೆ, ಸರ್ಕಾರಿ
ಉರ್ದು ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿ ಮಧ್ಯಾಹ್ನದ ಬಿಸಿಯೂಟ ಪರಿಶೀಲಿಸಿದರು. ಮಕ್ಕಳೊಂದಿಗೆ ತಾವೂ ಬಿಸಿಯೂಟ ಸವಿದು ಗುಣಮಟ್ಟ ಖಚಿತಪಡಿಸಿಕೊಂಡರು. ನಂತರ ಗೊಲ್ಲರ ಓಣಿಯಲ್ಲಿನ ಅಂಗನವಾಡಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ಪರಿಶೀಲಿಸಿದರು. ನೇರವಾಗಿ ಸರೂರ ಗ್ರಾಮಕ್ಕೆ ತೆರಳಿ ಅಲ್ಲಿನ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳನ್ನು ಪರಿಶೀಲಿಸಿ ಸಲಹೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next