Advertisement

ಬೇಡಿಕೆ ಈಡೇರಿಕೆಗೆ ಒತ್ತಾಯ

05:32 PM Jul 08, 2019 | Naveen |

ಮುದ್ದೇಬಿಹಾಳ: ತಮ್ಮ 9 ಪ್ರಮುಖ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸೇವಾ ಸಂಘದ ನೂರಾರು ಸದಸ್ಯರು ಪಟ್ಟಣದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ತಹಶೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷೆ ನೀಲಮ್ಮ ಬೋರಾವತ್‌ ಅವರು, ಜೂ. 24ರಂದು ಸಮಸ್ಯೆ ಬಗೆಹರಿಸುವಂತೆ ಕೋರಿ ಸಿಡಿಪಿಒಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿದ್ದ ಮತ್ತು ಸೂಕ್ತ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಸಿಡಿಪಿಒ ಅವರು ತಮ್ಮ ನಡವಳಿಕೆ ತಿದ್ದಿಕೊಳ್ಳಬೇಕು ಎಂದು ಹರಿಹಾಯ್ದರು.

ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ 4 ತಿಂಗಳಿಂದ ಆಗದಿರುವ ಗೌರವ ಧನ ಕೂಡಲೇ ಬಿಡುಗಡೆ ಮಾಡಿ ಅವರ ಖಾತೆಗೆ ಜಮಾ ಮಾಡಬೇಕು. ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ, ಬಾಣಂತಿಯರಿಗೆ ಒದಗಿಸಿದ ಮೊಟ್ಟೆ, ತರಕಾರಿ ಬಿಲ್ 3 ತಿಂಗಳದ್ದು ಮಾತ್ರ ಮಾಡಿದ್ದು ಇನ್ನೂ 9 ತಿಂಗಳ ಬಿಲ್ ಮಾಡಬೇಕು.

ಮಕ್ಕಳಿಗೆ ನೀಡುವ ಮೊಟ್ಟೆಯ 2 ವರ್ಷದ ಬಿಲ್ ಮಾಡಿ ಮಕ್ಕಳಿಗೆ ಮೊಟ್ಟೆ ಕೊಡುವಲ್ಲಿ ಆಗುತ್ತಿರುವ ಸಮಸ್ಯೆ ತಪ್ಪಿಸಬೇಕು. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ 2 ವರ್ಷದ ಬಾಡಿಗೆ ಹಣವನ್ನು ಸಂಬಂಸಿದ ಕಟ್ಟಡ ಮಾಲಿಕರಿಗೆ ಸಂದಾಯ ಮಾಡಬೇಕು ಎಂದರು.

ಕೆಲವು ಮೇಲ್ವಿಚಾರಕಿಯರು ಅಂಗನವಾಡಿ ಕೇಂದ್ರಕ್ಕೆ ಬರುವ ಕಟ್ಟಿಗೆ ಹಣದಲ್ಲಿ 400 ರೂ., 500 ರೂ.ದಂತೆ ಸಹಾಯಕಿಯರಿಂದ ಅಕ್ರಮವಾಗಿ ವಸೂಲಿ ಮಾಡುತ್ತಿರುವುದನ್ನು ತಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಿಡಿಪಿಒ ಕಚೇರಿಯಲ್ಲಿ ಫೈಲ್ ಮಾಡುವುದಾಗಿ ಹೇಳಿ ಕೆಲ ಮೇಲ್ವಿಚಾರಕಿಯರು ಕಾರ್ಯಕರ್ತೆಯರಿಂದ ತಲಾ 1000 ರೂ. ಹಣ ಪಡೆದಿದ್ದು ಈ ಬಗ್ಗೆ ಸ್ಪಷ್ಟನೆ ನೀಡುವುದರ ಜೊತೆಗೆ ಇಂಥವರ ಮೇಲೆ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

Advertisement

ಸಂಘದ ಪದಾಧಿಕಾರಿಗಳ ಜೊತೆ ಸಂಬಂಧಪಟ್ಟ ತಾಲೂಕುಗಳಲ್ಲಿ 3 ತಿಂಗಳಿಗೊಮ್ಮೆ ಜಂಟಿ ಸಭೆ ಕರೆಯುವಂತೆ ಆಯಾ ಸಿಡಿಪಿಒಗಳಿಗೆ ಸೂಚಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪ್ರಮುಖರಾದ ಶೋಭಾ ಘಾಟಗೆ, ಎಂ.ಬಿ. ಬಾಗಲಕೋಟ, ಎಸ್‌.ಎಸ್‌. ಕಾಖಂಡಕಿ, ಎಸ್‌.ಎಂ. ಅಂಗಡಗೇರಿ, ಅಯ್ಯಮ್ಮ ವಣಕಿಹಾಳ, ಹುಲಿಗೆಮ್ಮ ಕಂದಗಲ್ಲ, ನಾಗಮ್ಮ ನಾಟೀಕಾರ, ಚಂದ್ರಕಲಾ ಜೋಶಿ, ಸರೋಜಾ ನಾಯ್ಕೋಡಿ, ಶಶಿಕಲಾ ನಾಗರಾಳ, ಸುನಂದಾ ಸೈಲರ್‌, ಗುರುಬಾಯಿ ಲಮಾಣಿ, ಯಮನಕ್ಕ ವಡ್ಡರ ಸೇರಿ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next