ಬೆಂಗಳೂರು: ಮಾಜಿ ಸಂಸದರಾದ ಮುದ್ದಹನುಮೇಗೌಡ ಮತ್ತು ನಟ ಶಶಿಕುಮಾರ್ ಅವರು ಇಂದು ರಾಜ್ಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
ಬಳಿಕ ಮಾತನಾಡಿದ ಮುದ್ದಹನುಮೇಗೌಡರು, ಬಿಜೆಪಿ ಪ್ರಮುಖರು, ಸಚಿವರ ಜೊತೆ ನಾನು ಕೆಲಸ ಮಾಡಿದ್ದೇನೆ. ತುಮಕೂರಿನ ಕಾರ್ಯಕರ್ತರ ಜೊತೆಗೂ ನನಗೆ ನಿಕಟ ಸಂಬಂಧವಿತ್ತು. ಈ ಪಕ್ಷದಲ್ಲಿ ಕಾರ್ಯಕರ್ತನಾಗಿ ಸುಲಲಿತವಾಗಿ ಕೆಲಸ ಮಾಡುವ ವಿಶ್ವಾಸವಿದೆ. ಅತ್ಯಂತ ಆತ್ಮೀಯವಾಗಿ ನನ್ನನ್ನು ಬರ ಮಾಡಿಕೊಂಡಿದ್ದಾರೆ. ನಾನು ಎಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದರು.
ಪ್ರಧಾನಿಗಳ ಕಾರ್ಯವೈಖರಿ ಯನ್ನು ನಾನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ. ಅವರ ನೇತೃತ್ವದಲ್ಲಿ ಕೇಂದ್ರ ಹಾಗೂ ಬೊಮ್ಮಾಯಿ ನೇತೃತ್ವದ ಜನಪರ ಯೋಜನೆಗಳು ನನಗೆ ಮೆಚ್ಚುವಂತಾಗಿದೆ.ಭಾರತದ ಘನತೆಯನ್ನು ಪ್ರಪಂಚದಲ್ಲಿ ಅತ್ಯಂತ ಎತ್ತರಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ಪ್ರಧಾನಿಗಳು ಮಾಡುತ್ತಿದ್ದಾರೆ. ಪಕ್ಷ ಎಲ್ಲ ನೀತಿ ನಿಯಮ ಸಿದ್ದಾಂತವನ್ನು ನಾನು ಬಲ್ಲೆ. ಹೊಂದಾಣಿಕೆ ಮಾಡಿಕೊಂಡು ಹೋಗುವ ವಿಶ್ವಾಸವಿದೆ. ಪಕ್ಷದ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡು ಹೋಗುತ್ತೇನೆ ಎಂದು ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ಸ್ವಲ್ಪವೂ ಪ್ರಸ್ತಾಪಿಸದ ತುಮಕೂರಿನ ಮಾಜಿ ಸಂಸದ ಮುದ್ದಹನುಮೇಗೌಡರು ಕೇಂದ್ರ ಹಾಗೂ ರಾಜ್ಯ ಸರ್ಕಾರ ವನ್ನು ಹೊಗಳಿದರು.
ಇದನ್ನೂ ಓದಿ:ತೀರ್ಥಹಳ್ಳಿ: ಕಾರ್ಮಿಕರಿಗೆ ಕೆಲಸಕ್ಕೆ ಅವಕಾಶ ಮಾಡಿಕೊಡದಿದ್ದಲ್ಲಿ ಉಗ್ರ ಹೋರಾಟ; ಪಿ.ಮಂಜುನಾಥ್
ಇದೇ ವೇಳೆ ಮಾತನಾಡಿದ ಶಶಿಕುಮಾರ್, ಬಿಜೆಪಿ ಪಕ್ಷಕ್ಕೆ ನಾನು ಹೊಸಬನಲ್ಲ. ಜೆಡಿಯುನಲ್ಲಿದ್ದಾಗ ಎನ್‌ಡಿಎ ಭಾಗವಾಗಿದ್ದೆ. ವಾಜಪೇಯಿ ಸಮಯದಲ್ಲಿ ಅವರ ಜೊತೆಗೆ ಕೆಲಸ ಮಾಡಿದ್ದೇನೆ. ಕೆಲವೊಂದು ಏಳುಬೀಳು ಆಗುತ್ತದೆ, ಜೀವನದಲ್ಲಿ ಕೆಲವೊಂದು ಸುರಳಿಯಾಗುತ್ತದೆ. ಕೆಲವೊಂದು ಆಸೆ, ನೀರಿಕ್ಷೆಗಳಿಂದ ಕೆಲವೊಂದು ತಪ್ಪುಗಳಾಗುತ್ತದೆ. ನಾನು ಎಸ್ ಟಿ ಸಮುದಾಯದವನಾದರೂ, ನಾನೊಬ್ಬ ನಟ. ಎಲ್ಲಾ ಸಮುದಾಯಗಳಿಗೆ ನ್ಯಾಯ ಸಿಗುವಂತೆ ಕೆಲಸ ಮಾಡುತ್ತೇನೆ. ಪಕ್ಷ ಸೇರ್ಪಡೆಗೆ ಅವಕಾಶ ಮಾಡಿಕೊಟ್ಟ ಎಲ್ಲಾ ಬಿಜೆಪಿ ನಾಯಕರಿಗೆ ಧನ್ಯವಾದಗಳು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ಮಾತನಾಡಿ, ಹಿಂದೆ ನಾನು ಮುದ್ದಹನುಮೇಗೌಡ ಅವರನ್ನು ಪಕ್ಷಕ್ಕೆ ಕರೆದಿದ್ದೆ. ಆದರೆ ಅವಾಗ ಅವರು ಬಂದಿರಲಿಲ್ಲ. ಕೊನೆಗೆ ಅವರನ್ನು ಕಾಂಗ್ರೆಸ್ ಹೊರಗೆ ಹಾಕಿದೆ. ಇವಾಗಲಾದರೂ ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಬಣ್ಣ ಏನೆಂದು ಗೊತ್ತಾಯ್ತಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿಯ ಎರಡು ನಾಟಕ ಕಂಪನಿಗಳಿವೆ. ಹೀಗಾಗಿ ಕಲ್ಬುರ್ಗಿಯ ಸಮಾವೇಶ ನೋಡಿ ಕಾಂಗ್ರೆಸ್ ನವರಿಗೆ ಸೋಲುವ ಭಯ ಶುರುವಾಗಿದೆ ಎಂದು ಟಾಂಗ್ ನೀಡಿದರು.