Advertisement

Mudbidri: ಚರಂಡಿ ವ್ಯವಸ್ಥೆ ಇಲ್ಲದೆ ಕುಸಿದ ಆವರಣ ಗೋಡೆಗಳು

04:17 PM Sep 29, 2024 | Team Udayavani |

ಮೂಡುಬಿದಿರೆ: ಪಡುಮಾರ್ನಾಡು ಗ್ರಾ.ಪಂ. ವ್ಯಾಪ್ತಿಯ ಕೃಷಿ ಪ್ರಧಾನ ವಲಯವಾಗಿರುವ ಕೇಂಪುಲು ಪ್ರದೇಶ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ಬಹಳ ಸಮಸ್ಯೆ ಎದುರಿಸುತ್ತಿದೆ. ಇಲ್ಲಿನ ಹಲವು ಮನೆಗಳ ಆವರಣ ಗೋಡೆಗಳು ಕುಸಿದಿವೆ, ಕೃಷಿಗೆ ಹಾನಿಯಾಗಿದೆ.

Advertisement

ಎತ್ತರದ ಗುಡ್ಡ ಪ್ರದೇಶದಿಂದ ನೇರ ಹರಿದು ಬರುವ ಮಳೆ ನೀರು ಪಶ್ಚಿಮ ದಿಕ್ಕಿನ ಚರಂಡಿಯಲ್ಲಿ ಸಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ತೋಡನ್ನು ಸೇರಿದರೆ ಯಾವುದೇ ಸಮಸ್ಯೆ ಉಂಟಾಗದು. ಆದರೆ, ಪೂರ್ವಕ್ಕಿಂತ ಪಶ್ಚಿಮವೇ ಸ್ವಲ್ಪ ಎತ್ತರವಾಗಿರುವ ಕಾರಣ ಮಳೆ ನೀರು ಮಾರ್ಗವನ್ನು ಹಾದು ದಕ್ಷಿಣಕ್ಕೆ ಹರಿದು ಹಲವರ ಮನೆಯಂಗಳಕ್ಕೆ ನುಗ್ಗಿ ಮುನ್ನುಗ್ಗುವುದು ನಿವಾಸಿಗಳನ್ನು ಕಂಗೆಡಿಸಿದೆ.

ಮಳೆಗಾಲದ ಅಬ್ಬರ ಕಾಲದಲ್ಲಿ ಲಕ್ಷ್ಮೀ ನಾರಾಯಣ ಭಟ್ಟರ ಮನೆಯಂಗಳಕ್ಕೆ ನುಗ್ಗಿದ ನೀರು ಮನೆಯ ಆವರಣ ಗೋಡೆ ಕುಸಿಯುವಂತೆ ಮಾಡಿದೆ. ಇದೀಗ ರಕ್ಷಣೆಗಾಗಿ ಗೋಡೆಯನ್ನು ಸ್ವಂತ ಖರ್ಚಿನಲ್ಲಿ ಮರು ನಿರ್ಮಿಸಬೇಕಾಗಿದೆ. ಹತ್ತಿರವ ನವೀನ ಅವರ ಮನೆಯ ಆವರಣ ಗೋಡೆಯೂ ಕುಸಿದು ಬಿದ್ದಿದೆ, ಇನ್ನೂ ಹಾಗೆಯೇ ಇದೆ. ಶಾರದಾ ಶೆಟ್ಟಿ ಅವರ ಮನೆಯ ಆವರಣ ಗೋಡೆ ಇನ್ನೇನು ಕುಸಿಯುವ ಸ್ಥಿತಿಯಲ್ಲಿದೆ.

ಹೀಗೆ ಎಲ್ಲೆ ಮೀರಿ ಹರಿಯುವ ಮಳೆ ನೀರು ಹತ್ತಿರದ ತೋಟಗಳಿಗೆ ನುಗ್ಗಿ ಮತ್ತಷ್ಟು ಸಮಸ್ಯೆ ಉಂಟುಮಾಡುತ್ತಿದೆ. ಪಂಚಾಯತ್‌ ವತಿಯಿಂದ ಚರಂಡಿಯ ಒಂದಿಷ್ಟು ಮಣ್ಣು ಹೆರೆದು ತೆಗೆಯಲಾಗಿದೆಯಾದರೂ ಅದು ಸಮಸ್ಯೆಗೆ ಪರಿಹಾರವಾಗುವ ಸಾಧ್ಯತೆ ಇಲ್ಲ. ಚರಂಡಿಯನ್ನು ಇನ್ನಷ್ಟು ಆಳ ಮಾಡಿ ಪಶ್ಚಿಮಕ್ಕೆ ಹರಿಸಿದರೆ ಮಾತ್ರ ಪರಿಹಾರ ಸಿಗಬಹುದು.

Advertisement

ರಸ್ತೆಯೂ ಜೀರ್ಣಾವಸ್ಥೆಯಲ್ಲಿ
ಇದರ ಜತೆಗೆ ಕೇಂಪುಲ ರಸ್ತೆಯು ಜೀರ್ಣವಾಗಿದೆ. ಹೊಂಡ ಗುಂಡಿಗಳಿಂದ ತುಂಬಿದೆ. ಡಾಮರ್‌ ಕಿತ್ತು ಕಿತ್ತು ಹೋಗಿದೆ. ಇದಕ್ಕೂ ಚರಂಡಿ ವ್ಯವಸ್ಥೆ ಸರಿ ಇಲ್ಲದಿರುವುದೇ ಪ್ರಮುಖ ಕಾರಣವಾಗಿದೆ.

ಗಮನ ಹರಿಸಲಾಗುವುದು
ಸಂಬಂಧಪಟ್ಟ ಸಂತ್ರಸ್ತರು ದೂರು ನೀಡಿ, ವಾರ್ಡ್‌ ಸದಸ್ಯರು ಬೇಡಿಕೆ ಮುಂದಿಟ್ಟರೆ ಮುಂದಿನ ಕ್ರಿಯಾಯೋಜನೆಯಲ್ಲಿ ಈ ಬಗ್ಗೆ ಗಮನ ಹರಿಸಲಾಗುವುದು.
-ವಾಸುದೇವ ಭಟ್‌, ಅಧ್ಯಕ್ಷರು, ಪಡುಮಾರ್ನಾಡು ಗ್ರಾ.ಪಂ.

ಕ್ರಮ ಜರಗಿಸಲಾಗುವುದು
ಮುರಕಲ್ಲು ಇರುವುದರಿಂದ ಸ್ವಲ್ಪ ಹೆಚ್ಚಿನ ಮೊತ್ತ ಬೇಕಾಗಬಹುದು. ಆದರೂ ಮುಂದೆ ಈ ಬಗ್ಗೆ ಕ್ರಮ ಜರಗಿಸಲಾಗುವುದು.
-ಸಾಯೀಶ್‌ ಚೌಟ, ಪಿಡಿಒ

-ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next