Advertisement

Mudbidri: 6 ತಿಂಗಳ ಶ್ರಮ, 3 ಲಕ್ಷ ಹೂವುಗಳ ನಂದನವನ!

03:23 PM Dec 12, 2024 | Team Udayavani |

ಮೂಡುಬಿದಿರೆ: ಕಣ್ಣೆರಡು ಕಮಲಗಳಂತೆ.. ಮುಂಗುರುಳು ದುಂಬಿಗಳಂತೆ, ನಾಸಿಕವು ಸಂಪಿಗೆಯಂತೆ.. ನೀ ನಗಲು ಹೂ ಬಿರಿದಂತೆ” ಎಂಬ ಕವಿರತ್ನ ಕಾಳಿದಾಸ ಸಿನೆಮಾದ ಹಾಡನ್ನು ನೆನಪು ಮಾಡಿ. ಅಥವಾ ಮಲ್ಲಿಗೆ ಹೂವಿನಂತ ಅಂದ ನಿನ್ನಲ್ಲಿ… ತಾವರೆ ಹೂವಿನಂತೆ ಚಂದ ಕಣ್ಣಲ್ಲಿ” ಎಂಬ ಒಂದು ಮುತ್ತಿನ ಕಥೆ ಸಿನೆಮಾದ ಹಾಡನ್ನಾದರೂ ನೆನಪಿಸಿಕೊಳ್ಳಿ. ಅಲ್ಲವಾದರೆ, ನೀ ಮುಡಿದ ಮಲ್ಲಿಗೆ ಹೂವೆ…”, ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ…”: ಹೀಗೆ ಹೂಗಳನ್ನು ನೆನಪಿಸಿಕೊಂಡು ಯಾವ ಹಾಡನ್ನಾದರೂ ಗುನುಗುನಿಸುವುದಾದರೆ ನೀವೊಮ್ಮೆ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಕಂಗೊಳಿಸುತ್ತಿರುವ ಆಳ್ವಾಸ್‌ ವಿರಾಸತ್‌ನ ಪುಷ್ಪಲೋಕವನ್ನು ಕಣ್ತುಂಬಿಕೊಳ್ಳಲೇಬೇಕು!

Advertisement

ಇದು ಮಾತಿಗೆ ನಿಲುಕದ, ಕಣ್ಣಿಗೆ ಎಟುಕದ, ಮನಸಿಗೆ ಮುದ ನೀಡುವ ಹೂವಿನ ಲೋಕ. ಸಂಗೀತ ಸಂಭ್ರಮದ ವಿರಾಸತ್‌ನಲ್ಲಿ ಹೂವಿನ ನೂರಾರು ಗೆಳತಿಯರು ಇದ್ದಾರೆ! ಪರಿಚಿತ ಹೂಗಳು ಸ್ವಲ್ಪ ಕಡಿಮೆ ಇದ್ದರೆ, ಅಪರಿಚಿತ ಹೂವಿನ ಲೋಕ ಇಲ್ಲಿ ಯಥೇತ್ಛವಿದೆ. ನಮ್ಮ ನೆಲದ ಚೆಂಡು, ಮಲ್ಲಿಗೆ, ಹೂಗಳ ಜತೆಗೆ ಅಪರೂಪಕ್ಕೆ ಸಿಗುವ ಹೂ ಗಿಡಗಳಾದ ಪಾಯಿಂಸೆಟ್ಟಿ, ಪೆಟುನಿಯಾ, ಸಾಲ್ವಿಯಾ, ಅಗ್ಲೋನಿನ, ಫಿಲಿಡೊಡ್ರಾನ್‌, ಟೊರ್ನಿಯ, ಕಲೆನಚೋ, ಸಹಿತ ವಿವಿಧ ಬಗೆಯ ಫಲಪುಷ್ಪಗಳು ಇಲ್ಲಿವೆ. ಒಂದಕ್ಕಿಂತ ಒಂದು ಭಿನ್ನ, ಒಂದಕ್ಕಿಂತ ಒಂದು ಕಲರ್‌ ಫುಲ್‌ ಹಾಗೂ ಒಂದಕ್ಕಿಂತ ಒಂದು ಆಕರ್ಷಕ.

ಸದಾಪುಷ್ಪ, ಸೇವಂತಿಗೆ, ಜೀನಿಯಾ, ಗೌರಿ, ಡಾಲಿ, ಲಿಲ್ಲಿ, ಕೇಪುಳ, ಸಿಲ್ವರ್‌, ಡಸ್ಟ್‌, ಲ್ಯಾವೆಂಡರ್‌, ಅನೆಸೊಪ್ಪು, ಅಂಥೋರಿಯಂ, ಮಲ್ಲಿಗೆ, ಸಲ್ವಿಯ, ಸೆಲೋಶಿಯ, ಚೈನೀಶ್‌ ಫ್ರಿಂಚ್‌, ವೀಪಿಂಗ್‌ ಫಿಗ್‌ ಸೇರಿದಂತೆ ನಂದನ ವನವೇ ಧರೆಗಿಳಿದಂತೆ ಭಾಸವಾಗುತ್ತಿದೆ.

ಔಷಧೀಯ ಸಸ್ಯಗಳಾದ ಆಮ್ರ, ನಂದಿ, ಬಕುಲಾ, ಶಾಲ್ಮಲಿ, ಜಂಬೂ, ತಿಲಕ, ತಾರೇಕಾಯಿ, ಸರಳ, ಪ್ರಿಯಂಗು, ಕದಂಬ, ತೆಂದುಕ, ಅಶ್ವತ್ಥ, ಶಿರೀಶ, ಸಪ್ತ ಪರ್ಣಿ, ದೇವದಾರು, ಸಂಪಿಗೆ, ಅಶೋಕ, ಕಪಿತ, ಶಾಲವೃಕ್ಷ, ನಾಗಕೇಸರ, ಪಾಲಶ ಗಿಡ ಸಹಿತ ನೂರಾರು ಸಸ್ಯ ಸಂಕುಲವಿದೆ.

Advertisement

ಹೂವಿನ ಚೆಲುವಿಗೆ ಕಲಾಕೃತಿಗಳ ಸೊಬಗು
ಪುಷ್ಪ ಲೋಕದ ಮಧ್ಯೆಯೇ ಅಲ್ಲಲ್ಲಿ ಪುಷ್ಪಗಳಿಂದ ರಚಿಸಿದ ಆನೆ, ಕುದುರೆ, ಜಿರಾಫೆ, ನವಿಲಿನ ಕಲಾಕೃತಿಯಿದೆ. ಕೊಯಂಬತ್ತೂರಿನಲ್ಲಿರುವ ಈಶ ಫೌಂಡೇಶನ್‌ನ ಈಶ್ವರ ಪ್ರತಿಮೆಯ ಮಾದರಿಯಲ್ಲಿ ಫಲಪುಷ್ಪ ಪ್ರದರ್ಶನದಲ್ಲಿ ವಿಭಿನ್ನ ಅನುಭವ ನೀಡುವ ಈಶ್ವರ ಪ್ರತಿಮೆಯಿದೆ. ಜಗಜ್ಯೋತಿ ಬಸವೇಶ್ವರ ವೃತ್ತದ ಸುತ್ತ ಹೂವಿನದ್ದೇ ಲೋಕವಿದೆ. ಇಲ್ಲಿ ರಾಮನಿದ್ದಾನೆ, ದನವಿದೆ. ಜಿಂಕೆ ಮೊಲ, ಎತ್ತು, ಮಂಗ, ಹುಲಿ, ಸಿಂಹ, ಚಿರತೆ… ಹೀಗೆ ವಿವಿಧ ಆಕರ್ಷಕ ಚಿತ್ರರೂಪಕವು ಹೂ-ಗಿಡಗಳ ಮಧ್ಯೆ ನೆಲೆ ನಿಂತಂತೆ ಭಾಸವಾಗುತ್ತಿದೆ. ನೀರಿನ ಕಾರಂಜಿ ಅಂತು ಹೂ-ಗಿಡಗಳ ಸೊಬಗಿಗೆ ದೃಷ್ಟಿ ಬೊಟ್ಟು ಇದ್ದಂತಿದೆ. ಶೋಭಾಯಮಾನ, ಯಶೋಕಿರಣ, ಜಗನ್ಮೋಹನ ಕಟ್ಟಡದ ಮುಂಭಾಗ ಹೂ ಗಿಡಗಳ ಚೆಲುವು ಕಣ್ತುಂಬಿಕೊಳ್ಳುವುದೇ ಹೊಸ ಅನುಭವ.

ಹೂವುಗಳ ಲೋಕ ಸೃಷ್ಟಿಗೆ ಕೋಟಿ ಖರ್ಚು!
ಡಾ| ಎಂ. ಮೋಹನ ಅಳ್ವರು ಆಳ್ವಾಸ್‌ ವಿರಾಸತ್‌ ಸಂಭ್ರಮವನ್ನು ಕೇವಲ ಸಾಂಸ್ಕೃತಿಕ ಚಟುವಟಿಕೆ ಎಂದು ಪರಿಗಣಿಸಿಲ್ಲ. ಬದಲಾಗಿ ಇಲ್ಲಿಗೆ ಬರುವ ವಿವಿಧ ಮನಸುಗಳಿಗೆ ಹೂವಿನ ಸೌಂದರ್ಯ ಆಸ್ವಾದಿಸಿ ಮನಸು ಅರಳಿಸುವ ಕಾರ್ಯವನ್ನು ಸದ್ದಿಲ್ಲದೆ ನಡೆಸುತ್ತಿದ್ದಾರೆ. ಆಳ್ವಾಸ್‌ ಕ್ಯಾಂಪಸ್‌ ನಲ್ಲಿ  ಎಲ್ಲಿ ನೋಡಿದರಲ್ಲಿ ಹೂಗಳು ಕಾಣಸಿಗುತ್ತವೆ. ಹೂವಿನ ಚೆಲುವು ನಿಮ್ಮ ಮನಸು ಮುಟ್ಟುತ್ತದೆ. ಜತೆಗೆ ಪ್ರತ್ಯೇಕವಾಗಿ ಜೋಡಿಸಿಟ್ಟ ಹೂವುಗಳು ಇಲ್ಲಿ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಇವೆ.

ಕೆಲವು ಹೂಗಳನ್ನು 6 ತಿಂಗಳ ಸಮಯದಲ್ಲಿ ಕ್ಯಾಂಪಸ್‌ನಲ್ಲೇ ಬೆಳೆದು ಸಿದ್ಧಪಡಿಸಲಾಗಿದೆ. 250 ಮಂದಿ ಇದಕ್ಕಾಗಿ ಕೆಲಸ ಮಾಡಿದ್ದಾರೆ. ಉಳಿದ ಹೂಗಳನ್ನು ಪೂನಾ, ಹಾಸನ, ಧಾರವಾಡ, ಬೆಂಗಳೂರಿನಿಂದ ತರಿಸಲಾಗಿದೆ. ವಿಶೇಷವೆಂದರೆ, ಈ ಹೂವಿನ ಪ್ರದರ್ಶನಕ್ಕೆ ಆಳ್ವರು ಬರೋಬ್ಬರಿ 1 ಕೋ.ರೂ.ಗಳಷ್ಟು ಖರ್ಚು ಮಾಡುತ್ತಾರೆ.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next