Advertisement

ಮುಡಾರು: ಡಾಮರುಗೊಳ್ಳದ ಹೆಪೆಜಾರು-ಐಡಿಯಲ್‌ ರಸ್ತೆ

11:29 PM Oct 17, 2019 | Sriram |

ಬಜಗೋಳಿ: ಮುಡಾರು ಗ್ರಾ. ಪಂ. ವ್ಯಾಪ್ತಿಯ ಹೆಪೆಜಾರು ಐಡಿಯಲ್‌ ಸಂಪರ್ಕ ರಸ್ತೆ ಸುಮಾರು 20 ವರ್ಷಗಳಿಂದ ಡಾಮರನ್ನೇ ಕಾಣದೆ ಹೊಂಡಗುಂಡಿಗಳಿಂದ ಸಂಚಾರಕ್ಕೆ ದುಸ್ತರವಾಗಿದೆ. 2002ರಲ್ಲಿ ಮಣ್ಣಿನ ರಸ್ತೆಗೆ ಜಲ್ಲಿಕಲ್ಲು ಅಳವಡಿಸಿದ ಬಳಿಕ ಯಾವುದೇ ರೀತಿಯ ಪ್ರಗತಿಯಾಗಿಲ್ಲ.

Advertisement

ಈ ರಸ್ತೆಯ ಭಾಗದಲ್ಲಿ ಸುಮಾರು 100ಕ್ಕೂ ಅಧಿಕ ಮನೆಗಳಿದ್ದು, ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಇಲ್ಲಿಯ ಗ್ರಾಮಸ್ಥರು ತಮ್ಮ ದೈನಂದಿನ ಚಟುವಟಿಕೆಗೆ ಬಜಗೋಳಿ ಪೇಟೆಯನ್ನು ಅವಲಂಬಿಸಿದ್ದು, ಈ ರಸ್ತೆ ಮೂಲಕವೇ ಸಂಚರಿಸಬೇಕಾಗಿದೆ. ಮುಡಾರು ಗ್ರಾಮ ಪಂಚಾಯತ್‌, ಗ್ರಾಮಕರಣಿಕರ ಕಚೇರಿ, ಆರೋಗ್ಯ ಇಲಾಖೆ, ಅಂಗನವಾಡಿ, ಶಾಲೆ, ಅಂಚೆ ಕಚೇರಿ, ಬಜಗೋಳಿ ಪರಿಸರದಲ್ಲಿಯೇ ಇದ್ದು, ಪಂಚಾಯತ್‌ ವ್ಯಾಪ್ತಿಯ ಗ್ರಾಮಸ್ಥರು ಈ ರಸ್ತೆ ಮೂಲಕವೇ ದೈನಂದಿನ ಕಾರ್ಯಗಳಿಗಾಗಿ ಪ್ರತಿನಿತ್ಯ ಸಂಚರಿಸಬೇಕಾಗಿದೆ. ರಸ್ತೆಯುದ್ದಕ್ಕೂ ಜಲ್ಲಿಕಲ್ಲುಗಳ ರಾಶಿಯೇ ಬಿದ್ದಿದ್ದು ವಾಹನ ಸವಾರರು ನಿರಂತರ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ.

ಇಲ್ಲಿಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಬಜಗೋಳಿ, ಕಾರ್ಕಳ ನಗರಕ್ಕೆ ತೆರಳಲು ಈ ರಸ್ತೆಯನ್ನು ಬಳಸುತ್ತಾರೆ. ಮಳೆಗಾಲದಲ್ಲಿ ಇಲ್ಲಿಯ ರಸ್ತೆ ಕೆಸರುಮಯವಾದರೆ ಬೇಸಗೆಯಲ್ಲಿ ದೂಳಿನಿಂದ ಆವೃತವಾಗುತ್ತದೆ.

ರಿಕ್ಷಾ ಚಾಲಕರ ಹಿಂದೇಟು
ಈ ರಸ್ತೆಯ ದುಸ್ಥಿತಿಯಿಂದ ರಿಕ್ಷಾ ಚಾಲಕರು ಇಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಾರೆ. ತುರ್ತು ಸಂದರ್ಭ ಹಾಗೂ ದಿನಬಳಕೆಯ ವಸ್ತುಗಳನ್ನು ಮನೆಗೆ ಕೊಂಡೊಯ್ಯಲು ಇಲ್ಲಿಯವರಿಗೆ ಅನನುಕೂಲವಾಗಿದೆ.

ಹಲವು ಬಾರಿ ಆಶ್ವಾಸನೆ
ಜನಪ್ರತಿನಿಧಿಗಳು ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆಗೊಂಡಿದ್ದು, ಶೀಘ್ರ ಕಾಮಗಾರಿ ನಡೆಯಲಿದೆ ಎಂದು ಭರವಸೆ ನೀಡಿದ್ದರೂ ಇದುವರೆಗೂ ಯಾವುದೇ ಪ್ರಗತಿಯಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.ಜನಪ್ರತಿನಿಧಿಗಳು, ಅಧಿಕಾರಿಗಳು ಸಮಸ್ಯೆಗೆ ಶೀಘ್ರ ಸ್ಪಂದಿಸಬೇಕಾಗಿದೆ.

Advertisement

ಟೆಂಡರ್‌ ಪ್ರಕ್ರಿಯೆಯಲ್ಲಿ ವಿಳಂಬ
ಈ ರಸ್ತೆ ಬಗ್ಗೆ ಕೇಂದ್ರ ರಸ್ತೆ ನಿಧಿ ಯೋಜನೆಯಡಿ 1 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಹಿಂದಿನ ಸರಕಾರ ಟೆಂಡರ್‌ ಪ್ರಕ್ರಿಯೆ ನಡೆಸುವಲ್ಲಿ ವಿಳಂಬ ನೀತಿ ತೋರಿರುವುದರಿಂದ ಕಾಮಗಾರಿ ಕುಂಠಿತಗೊಂಡಿದೆ. ಈ ಬಗ್ಗೆ ಶಾಸಕರ ಗಮನ ಸೆಳೆದು ತತ್‌ಕ್ಷಣ ಡಾಮರು ಕಾಮಗಾರಿಗೆ ಪ್ರಯತ್ನಿಸಲಾಗುವುದು.
ರಜತ್‌ರಾಮ್‌ ಮೋಹನ್‌,
ವಾರ್ಡ್‌ನ ಗ್ರಾಮ ಪಂಚಾಯತ್‌ ಸದಸ್ಯರು

ಬೇಡಿಕೆ ಈಡೇರಿಸಿ
ಶೀಘ್ರ ರಸ್ತೆ ಡಾಮರುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡು ಈ ಭಾಗದ ಸ್ಥಳೀಯರ ಬಹು ದಿನಗಳ ಬೇಡಿಕೆ ಈಡೇರಿಸಬೇಕಿದೆ.
-ಅನಿಲ್‌ ಶೆಟ್ಟಿ ,ಗ್ರಾಮಸ್ಥರು

Advertisement

Udayavani is now on Telegram. Click here to join our channel and stay updated with the latest news.

Next