Advertisement

Mudalagi: ಗ್ಯಾರಂಟಿಗೆ ಹಣ-ಅಭಿವೃದ್ಧಿಗಿಲ್ಲ ಅನುದಾನ-ಬಾಲಚಂದ್ರ ಜಾರಕಿಹೊಳಿ

05:52 PM Oct 31, 2023 | Team Udayavani |

ಮೂಡಲಗಿ: ನಮ್ಮ ಸರ್ಕಾರವು ಆಡಳಿತದಲ್ಲಿದ್ದಾಗ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದೆವು. ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದೆವು. ಆದರೀಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅಸಮಧಾನ ವ್ಯಕ್ತಪಡಿಸಿದರು.

Advertisement

ತಾಲೂಕಿನ ಶಿವಾಪೂರ(ಹ) ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗೆ ಸರ್ಕಾರದ ಅನುದಾನ ಹೋಗುತ್ತಿರುವುದರಿಂದ ನಮ್ಮ ಅಭಿವೃದ್ಧಿ ಕಾರ್ಯಗಳು ವಿಳಂಬವಾಗುತ್ತಿವೆ ಎಂದು ಹೇಳಿದರು.

ಈ ಭಾಗದ ರೈತರಿಗೆ ಅನುಕೂಲವಾಗಲು ಹಿಡಕಲ್‌ ಜಲಾಶಯದಿಂದ ನೀರನ್ನು ಹರಿಸಲಾಗುತ್ತಿದೆ. ಈಗಾಗಲೇ ಮಳೆಯು ನಿರೀಕ್ಷಿತ ಪ್ರಮಾಣದಲ್ಲಿ ಆಗದೇ ಇರುವುದರಿಂದ ಮೂಡಲಗಿ ತಾಲೂಕನ್ನು ಬರಪೀಡಿತ ತಾಲೂಕನ್ನಾಗಿ ಸರ್ಕಾರ ಘೋಷಿಸಿದೆ.

ಜನ ಹಾಗೂ ಜಾನುವಾರುಗಳಿಗೆ ಪ್ರಸಕ್ತ ಸನ್ನಿವೇಶದಲ್ಲಿ ಕುಡಿಯುವ ನೀರಿಗೆ ತೊಂದರೆ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಮಳೆರಾಯನ ಆಗಮನ ಅವಶ್ಯವಾಗಿದೆ. ವರುಣನ ಆಶೀರ್ವಾದಕ್ಕಾಗಿ ನಾವೆಲ್ಲರೂ ಪ್ರಾರ್ಥನೆ ಮಾಡೋಣ ಎಂದು ತಿಳಿಸಿದರು.

ಸಾರ್ವಜನಿಕರ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರಸ್ತೆಗಳ ನಿರ್ಮಾಣ, ಆಸ್ಪತ್ರೆ, ಕುಡಿಯುವ ನೀರು, ವಿದ್ಯುತ್‌ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹೊಸ ಕಾಮಗಾರಿಗಳಿಗೆ ಸರ್ಕಾರವು ಅನುಮೋದನೆ ನೀಡುತ್ತಿಲ್ಲವಾದ್ದರಿಂದ ಕಳೆದ ಚುನಾವಣೆಯಲ್ಲಿ ಜನತೆಗೆ ನೀಡಿರುವ ಎಲ್ಲ ಆಶ್ವಾಸನೆಗಳನ್ನು ಹಂತ-ಹಂತವಾಗಿ ಈಡೇರಿಸಲು ಬದ್ಧನಿದ್ದೇನೆ ಎಂದು ಹೇಳಿದರು.

Advertisement

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಹಳ್ಳೂರ ಜಿಪಂ ವ್ಯಾಪ್ತಿಯ ಸಾರ್ವಜನಿಕರನ್ನು ಭೇಟಿ ಮಾಡಿ ಅವರ ಕುಂದು-ಕೊರತೆಗಳನ್ನು ವಿಚಾರಿಸಿದರು. ಹಾಗೂ ನಾಗರೀಕ ಸನ್ಮಾನವನ್ನು ಸ್ವೀಕರಿಸಿದರು.

ಮುಖಂಡರಾದ ಮಲ್ಲನಗೌಡ ಪಾಟೀಲ, ಶಂಕರಗೌಡ ದುಂ. ಪಾಟೀಲ, ಘಟಪ್ರಭಾ ಜೆಜಿಕೋ ನಿರ್ದೇಶಕ ಶಿವನಗೌಡ ಪಾಟೀಲ, ಪ್ರಭಾಶುಗರ್‌ ನಿರ್ದೇಶಕರಾದ ಕೆಂಚನಗೌಡ ಪಾಟೀಲ, ಮಲ್ಲಿಕಾರ್ಜುನ ಕಬ್ಬೂರ, ಶಿವಾಪೂರ(ಹ) ಗ್ರಾಪಂ ಅಧ್ಯಕ್ಷೆ ಯಮನವ್ವ ಗಿಡ್ಡವ್ವಗೋಳ, ಉಪಾಧ್ಯಕ್ಷ ಮಲ್ಲಪ್ಪ ಜುಂಜರವಾಡ, ಜಿಪಂ ಮಾಜಿ ಸದಸ್ಯ ಭೀಮಶಿ ಮಗದುಮ್ಮ, ಶಿವಬಸು ಜುಂಜರವಾಡ, ಕೆಂಪಣ್ಣಾ ಮುಧೋಳ, ಟಿಎಪಿಸಿಎಂಎಸ್‌ ನಿರ್ದೇಶಕ ವೆಂಕನಗೌಡ ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಸಾಯನ್ನವರ, ಸುರೇಶ ಕತ್ತಿ, ಲಕ್ಷ್ಮಣ ಕತ್ತಿ, ಬಿ.ಎಸ್‌. ಸಂತಿ, ಬಿ.ಜಿ. ಸಂತಿ, ಅಡಿವೆಪ್ಪ ಪಾಲಭಾವಿ, ಚೇತನ ರಡ್ಡೇರಟ್ಟಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next