ಮೂಡಲಗಿ: ನೆರೆ ಸಂತ್ರಸ್ತರ ವಾಸಕ್ಕೆ ಶಾಶ್ವತ ಮನೆ ನಿರ್ಮಿಸಿಕೊಡಲು ಸರಕಾರ 5 ಲಕ್ಷ ರೂ. ಪರಿಹಾರ ನೀಡುತ್ತಿದೆ. ಈಗಾಗಲೇ ಸಂತ್ರಸ್ತರ ಕುಟುಂಬಗಳಿಗೆ ಒಂದು ಲಕ್ಷ ರೂ. ಅನುದಾನವನ್ನು ಸಂತ್ರಸ್ತರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಗೋಕಾಕ ಮತ್ತು ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶನಿವಾರ ಮಾತನಾಡಿ, ಬಾಕಿ ಉಳಿದ ಪರಿಹಾರ ಮೊತ್ತವನ್ನು ಡಿಸೆಂಬರ ಅಂತ್ಯದೊಳಗೆ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಸಮೀಕ್ಷೆ ಮಾಡಿದಂತೆ ಎ. ಹಾಗೂ ಬಿ ಕೆಟಗರಿಯ ಸಮೀಕ್ಷೆಯಲ್ಲಿ ಯಾವುದೇ ಸಮಸ್ಯೆಗಳು ಉಂಟಾಗಿಲ್ಲ. ಆದರೆ ಸಿ. ಕೆಟಗರಿಯಲ್ಲಿ ಸಮಸ್ಯೆಗಳು ಉದ್ಭವಿಸಿದ್ದು, ಇದರ ಮನೆಗಳ ಯಾದಿಯನ್ನು ಪ್ರತ್ಯೇಕ ಮಾಡಬೇಕು. ಯಾರ ಒತ್ತಾಯಕ್ಕೂ ಮಣಿಯದೇ ಗುಪ್ತ ಸಮೀಕ್ಷೆಯನ್ನು ಮಾಡಿ ತಹಶೀಲ್ದಾರ್ ಮೂಲಕ ಬೈಲಹೊಂಗಲ ಉಪವಿಭಾಗಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಈಗಾಗಲೇ ಸಿ ಕೆಟಗರಿ ಹೊಂದಿದವರಿಗೆ ಸರಕಾರ 50 ಸಾವಿರ ರೂ. ನೀಡುತ್ತಿದೆ ಆದರೆ ಈ ಹಣ ಸಾಲದ್ದರಿಂದ ಸಂತ್ರಸ್ತರಿಗೆ ಪರ್ಯಾವಾಗಿ ಬಸವ ವಸತಿ ಯೋಜನೆ ಅಡಿ ಮನೆ ಮಂಜೂರು ಮಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಧಾರಾಕಾರ ಮಳೆಯಿಂದಾಗಿ ಮನೆ ಕುಸಿದಿದ್ದು, ಅಂತಹ ಮನೆಗಳ ಸಮೀಕ್ಷೆ ಕಾರ್ಯ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನದಿ ತೀರದ ಗ್ರಾಮಗಳ ರೈತರಿಗೆ ಸಮರ್ಪಕ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಅವರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದ್ದು, ವಾರದೊಳಗೆ ವಿದ್ಯುತ್ ಸಂಪರ್ಕವನ್ನು ರೈತ ಸಮುದಾಯಕ್ಕೆ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಧರ್ಮಟ್ಟಿ ಹಳ್ಳದ ಸೇತುವೆ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ಅರಭಾವಿ ಕ್ಷೇತ್ರದಲ್ಲಿ ಹದಗೆಟ್ಟ ರಸ್ತೆಗಳ ಸುಧಾರಣೆಗಾಗಿ ಅನುದಾನ ಬಂದಿದ್ದು, ಕಾಲ ಮಿತಿಯೊಳಗೆ ರಸ್ತೆ ಅಭಿವೃದ್ಧಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮೂಡಲಗಿ ಪಟ್ಟಣದಲ್ಲಿ ಶೀಘ್ರದಲ್ಲಿಯೇ ಮಿನಿ ವಿಧಾನ ಸೌಧ ಕಟ್ಟಡ, ಬಸ್ ಘಟಕ ಹಾಗೂ ಬಡ ಕುಟುಂಬಗಳಿಗೆ ಆಶ್ರಯ ಮನೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಮೂಡಲಗಿ ಪುರಸಭೆಗೆ ಮಂಜೂರಾದ ಎರಡು ಕೋಟಿ ರೂ. ಅನುದಾನದಲ್ಲಿ ರಸ್ತೆ ಹಾಗೂ ಒಳಚರಂಡಿ ನಿರ್ಮಿಸಲಾಗುವುದು ಎಂದು ಹೇಳಿದರು. ಜನವರಿ 10ರೊಳಗೆ ಸಂತ್ರಸ್ತ ಕುಟುಂಬಗಳಿಗೆ
ಮೂಲ ಸೌಕರ್ಯ ಕಲ್ಪಿಸಿಕೊಡಬೇಕು. ಧೈರ್ಯದಿಂದ ಕೆಲಸ ಮಾಡಿ. ಯಾರ ಪ್ರಭಾವಕ್ಕೂ ಒಳಗಾಗಬೇಡಿ. ತಿಂಗಳೊಳಗೆ ಸಂತ್ರಸ್ತರ ಕುಟುಂಬಗಳ ನೆರವಿಗೆ ಧಾವಿಸದಿದ್ದಲ್ಲಿ ಅದಕ್ಕೆ ಅಧಿಕಾರಿಗಳನ್ನೇ ನೇರ ಹೊಣೆಗಾರನ್ನಾಗಿ ಮಾಡಲಾಗುವುದೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಎಚ್ಚರಿಕೆ ನೀಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ತಹಶೀಲ್ದಾರ್ ದಿಲ್‌ಶಾದ ಮಹಾಂತ ಸೇರಿದಂತೆ ಮೂಡಲಗಿ ಮತ್ತು ಗೋಕಾಕ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.