Advertisement

ಸಮಸ್ಯೆಗಳ ಸುಳಿಯಲ್ಲಿ ತಲೆಕಟ್ಟು ಗ್ರಾಮ!

12:28 PM Mar 12, 2020 | Naveen |

ಮುದಗಲ್ಲ: ಸಮೀಪದ ಹೂನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲೆಕಟ್ಟು ಗ್ರಾಮದಲ್ಲಿ ಶುದ್ಧ ಕುಡಿವ ನೀರು, ಸಾರಿಗೆ ಸೌಲಭ್ಯ, ಸ್ವಚ್ಛತೆ, ರಸ್ತೆ, ಪಡಿತರ ಸೌಲಭ್ಯ, ಆರೋಗ್ಯ ಸೇವೆ ಸೇರಿದಂತೆ ಅನೇಕ ಸಮಸ್ಯೆ ತಾಂಡವವಾಡುತ್ತಿವೆ.

Advertisement

ಲಿಂಗಸುಗೂರು ತಾಲೂಕು ಕೇಂದ್ರದಿಂದ 33 ಕಿ.ಮೀ. ದೂರದಲ್ಲಿರುವ ತಲೆಕಟ್ಟು ಗ್ರಾಮದಲ್ಲಿ ಶುದ್ಧ ಕುಡಿವ ನೀರಿಲ್ಲ. ಹೀಗಾಗಿ ಗ್ರಾಮಸ್ಥರು ಪಕ್ಕದ ಮಾಕಾಪುರ ಗ್ರಾಮಕ್ಕೆ ಹೋಗಿ ಶುದ್ಧ ನೀರು ತರುತ್ತಾರೆ. ಪಕ್ಕದ ಗ್ರಾಮಕ್ಕೆ ಹೋಗಿ ನೀರು ತರಲಾಗದವರು ಗ್ರಾಮದಲ್ಲಿಯೇ ಇರುವ ಕೊಳವೆಬಾವಿಗಳಲ್ಲಿನ ಫ್ಲೋರೈಡ್‌ ಅಂಶವಿರುವ ನೀರು ಸೇವಿಸಿ ಅನೇಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಗ್ರಾಮಸ್ಥ ಸಿದ್ದಪ್ಪ ದೂರಿದರು.

ಸಾರಿಗೆ ಸೌಲಭ್ಯವಿಲ್ಲ: ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷವಾದರೂ ತಲೆಕಟ್ಟು ಗ್ರಾಮಕ್ಕೆ ಸಾರಿಗೆ ಬಸ್‌ ಸೌಲಭ್ಯ ಕಲ್ಪಿಸಿಲ್ಲ. ಗ್ರಾಮಸ್ಥರು ಬೇರೆ ಊರಿಗೆ ಹೋಗಬೇಕೆಂದರೆ ಅಂಕಲಗಿಮಠಕ್ಕೆ ಬಂದು ಬಸ್‌ ಹತ್ತಬೇಕು. ಬಸ್‌ ಸೌಲಭ್ಯ ಕೊರತೆಯಿಂದ ರೋಗಿಗಳು, ವಯೋವೃದ್ಧರು ತೊಂದರೆ ಅನುಭವಿಸುವಂತಾಗಿದೆ. ಯಾರು ಶಾಸಕರಾದರೇನು ನಮ್ಮೂರಿಗೆ ಬಸ್‌ ಬಿಡಿಸಿಲ್ಲ. ನಾವು ನಡೆದಾಡುವುದು ತಪ್ಪಿಲ್ಲ ಎಂದು ಗ್ರಾಮದ ಲಲಿತಮ್ಮ ಅಳಲು ತೋಡಿಕೊಂಡಿದ್ದಾರೆ.

ಮೂಲ ಸೌಲಭ್ಯವಿಲ್ಲ: ಗ್ರಾಮದಲ್ಲಿ ಚರಂಡಿ, ಸಿಸಿ ರಸ್ತೆ ನಿರ್ಮಿಸಿಲ್ಲ, ರಸ್ತೆಯಲ್ಲೇ ನಲ್ಲಿ ಹಾಗೂ ಮನೆ ಬಳಕೆ ಕೊಳಚೆ ನೀರು ಹರಿಯುತ್ತದೆ. ಗ್ರಾಮದ ಓಣಿಗಳ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ರಸ್ತೆಯಲ್ಲಿ ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿ ಆಗಿ ಸೊಳ್ಳೆ ಹಾವಳಿ ಹೆಚ್ಚಿದೆ.

ಹಳ್ಳಕ್ಕಿಲ್ಲ ಸೇತುವೆ: ಅಂಕಲಗಿ ಮಠ ಹಾಗೂ ತಲೆಕಟ್ಟು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದಲ್ಲಿ ಹಳ್ಳ ಇದ್ದು, ಹಳ್ಳಕ್ಕೆ ಸೇತುವೆ ನಿರ್ಮಿಸಿಲ್ಲ. ಮಳೆಗಾಲದಲ್ಲಿ ಹಳ್ಳ ತುಂಬಿ ಹರಿದರೆ ವಾರಗಟ್ಟಲೇ ಸಂಪರ್ಕ ಕಡಿತಗೊಳ್ಳುತ್ತದೆ. ಇದರಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಾರೆ. ಈ ರಸ್ತೆಯಲ್ಲಿ ಕಂಕರ್‌ ಎದ್ದು ಸಂಚಾರಕ್ಕೆ ತೊಂದರೆ ಉಂಟಾಗಿದೆ.

Advertisement

ನ್ಯಾಯಬೆಲೆ ಅಂಗಡಿ ಇಲ್ಲ: ತಲೆಕಟ್ಟು ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಇಲ್ಲದ್ದಕ್ಕೆ ಗ್ರಾಮಸ್ಥರು ಪಡಿತರ ಧಾನ್ಯ ತರಲು ಪಕ್ಕದ ಮಾಕಾಪುರ ಗ್ರಾಮದಲ್ಲಿನ ನ್ಯಾಯಬೆಲೆ ಅಂಗಡಿಗೆ ತೆರಳಬೇಕು. ತಲೆಕಟ್ಟು ಗ್ರಾಮಕ್ಕೆ ಪ್ರತ್ಯೇಕ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿ ಸಾಕಾಗಿದೆ. ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಆಸ್ಪತ್ರೆ ಇಲ್ಲ: ಗ್ರಾಮದಲ್ಲಿ ಆರೋಗ್ಯ ಕೇಂದ್ರವಿಲ್ಲ. ಹೀಗಾಗಿ ಅನಾರೋಗ್ಯಕ್ಕೊಳಗಾದರೆ ಗ್ರಾಮಸ್ಥರು ಮಾಕಾಪುರ ಇಲ್ಲವೇ ಮುದಗಲ್ಲ ಪಟ್ಟಣಕ್ಕೆ ತೆರಳಬೇಕು. ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಸಹ ಭೇಟಿ ನೀಡುತ್ತಿಲ್ಲ. ಗರ್ಭೀಣಿಯರು, ವೃದ್ಧರು ಹಾಗೂ ರೋಗಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇನ್ನು ಅರ್ಹ ಬಡವರಿಗೆ ಆಶ್ರಯ ಮನೆಗಳು ದೊರೆತ್ತಿಲ್ಲ. ರಾಜಕೀಯ ಹಿಂಬಾಲಕರ ಪಾಲಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ವೋಟ್‌ ಕೇಳಾಕ್‌ ಬಂದಾಗ ಅದು ಮಾಡ್ತೀನಿ.. ಇದು ಮಾಡ್ತೀನಿ ಎಂದು ಹೇಳ್ತಾರ್‌. ಆರಿಸಿ ಬಂದ ಮೇಲೆ ಊರ ಕಡೆ ಮುಖ ಕೂಡ ಹಾಕುವುದಿಲ್ಲ ಲಲಿತಮ್ಮ, ಗ್ರಾಮಸ್ಥೆ.

14ನೇ ಹಣಕಾಸು ಹಾಗೂ ನರೇಗಾದಡಿ ಸಾಕಷ್ಟು ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ. ಬೀದಿದೀಪ, ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ದೊಡ್ಡಮಟ್ಟದ ಕಾಮಗಾರಿಗಳಿಗೆ ಜಿಪಂ ಅಧಿಕಾರಿಗಳು, ಶಾಸಕರು ಸ್ಪಂದಿಸಬೇಕು. ಅಮರಗುಂಡನಗೌಡ, ಅಧ್ಯಕ್ಷರು ಗ್ರಾಪಂ ಹೂನೂರು.

„ದೇವಪ್ಪ ರಾಠೋಡ

Advertisement

Udayavani is now on Telegram. Click here to join our channel and stay updated with the latest news.

Next