Advertisement

ಸಾಹಿತ್ಯಕ್ಕೂ ಸಮಾಜಕ್ಕೂ ನಿಕಟ ಸಂಬಂಧ

10:33 AM Feb 03, 2019 | Team Udayavani |

ಮುಂಡಗೋಡ: ಸಾಹಿತ್ಯಕ್ಕೂ ಸಮಾಜಕ್ಕೂ ನಿಕಟವಾದ ಸಂಬಂಧಗಳಿವೆ. ಬಹಳಷ್ಟು ಸಾಹಿತ್ಯ ಪರಕರಗಳಲ್ಲಿ ಸಮಾಜದ ಆಗು ಹೋಗುಗಳನ್ನೇ ವಸ್ತು ವಿಷಯವನ್ನಾಗಿ ಆರಿಸಿ ಬರೆಯಲಾಗುತ್ತದೆ. ಆದ್ದರಿಂದ ಇಂದು ಸಮಾಜಮುಖೀ ಸಾಹಿತ್ಯದ ಅವಶ್ಯಕತೆ ನಮ್ಮಲ್ಲಿ ಎದ್ದು ಕಾಣುತ್ತದೆ ಎಂದು ಸಾಹಿತಿ, ಪತ್ರಕರ್ತ ರಾಜಶೇಖರ ನಾಯ್ಕ ಹೇಳಿದರು.

Advertisement

ಅವರು ಶನಿವಾರ ಕಾಳಗನಕೊಪ್ಪದಲ್ಲಿ ನಡೆದ ಮುಂಡಗೋಡ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ನಾವಿಂದು ಇಂಗ್ಲಿಷ್‌ ಮಾಧ್ಯಮ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದೇವೆ. ಕಾರಣ ಆ ಮಾಧ್ಯಮವು ಮಕ್ಕಳನ್ನು ವಿದ್ವಾಂಸರನ್ನಾಗಿ ಮಾಡುತ್ತದೆ ಎಂಬ ಭ್ರಮೆ. ಅದು ಸುಳ್ಳು. ಜಗತ್ತಿನಾದ್ಯಂತ ಬಹಳಷ್ಟು ಜನರು ಇಂಗ್ಲಿಷ್‌ ಓದದೇ ಉದ್ದಾರವಾದ ಎಷ್ಟೋ ಉದಾಹರಣೆಗಳಿವೆ. ಕನ್ನಡವನ್ನು ಕಲಿಸಲು ಪಾಲಕರು ಕೂಡ ಸಹಕರಿಸಿದರೆ ಒಳ್ಳೆಯದು. ನಾವೀಗ ಕನ್ನಡ ಭಾಷೆ, ಕನ್ನಡ ನಾಡನ್ನು ರಕ್ಷಿಸಿ ಬೆಳೆಸುವ ಅಥವಾ ಏಕೀಕರಣಗೊಳಿಸುವ ಕಾಯಕಕ್ಕೆ ಅಣಿಯಾಗಬೇಕಾಗಿದೆ. ನಮ್ಮ ನಾಡು, ನುಡಿ, ನೆಲ, ಜಲದ ಬಗ್ಗೆ ಸತ್‌ ಸಂಕಲ್ಪ ಮಾಡಬೇಕು ಎಂದರು.

ಕನ್ನಡಿಗರಾದ ನಾವು ಏಕತೆಯನ್ನು ತೋರಿಸಬೇಕಾಗಿದೆ. ನಮ್ಮಲ್ಲಿಯ ಸಣ್ಣಪುಟ್ಟ ಭೇದಭಾವಗಳನ್ನು ತೊರೆದು ಒಗ್ಗಟ್ಟಿನಿಂದ ಬಾಳುವುದನ್ನು ಕಲಿಯಬೇಕು ಎಂದರು.

ಶಾಸಕ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಶಿವರಾಮ ಹೆಬ್ಟಾರ್‌ ಉದ್ಘಾಟಿಸಿ, ಕನ್ನಡ ನೆಲ, ಜಲ, ಭಾಷೆಗಳನ್ನು ಗೌರವಿಸಬೇಕು. ಕನ್ನಡವನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತೆ ಎಂದರು.

Advertisement

ಜಿಪಂ ಸದಸ್ಯ ಎಲ್‌.ಟಿ. ಪಾಟೀಲ ಮಾತನಾಡಿ ನಿಜಕ್ಕೂ ಇಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ. ಇಂತಹ ಕಾರ್ಯಕ್ರಮಗಳನ್ನು ಪಟ್ಟಣಗಳಲ್ಲಿ ಮಾಡುವುದಕ್ಕಿಂತ ಹಳ್ಳಿಗಳಲ್ಲಿ ಮಾಡುವುದು ಉತ್ತಮ ಎಂದರು.

ಕಸಾಪ ತಾಲೂಕಾಧ್ಯಕ್ಷ ಡಾ| ನಾಗೇಶ ಪಾಲನಕರ ಪ್ರಾಸ್ತಾವಿಕ ಮಾತನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಹದೇವ ನಡಿಗೇರಿ ಧ್ವಜ ಹಸ್ತಂತರಿಸಿದರು. ಪ್ರಿಯಾ ನಾಯ್ಕ ಸಮ್ಮೆಳನಾಧ್ಯಕ್ಷರ ಪರಿಚಯ ಮಾಡಿದರು. ಸಾಹಿತಿ ಎಸ್‌.ಬಿ. ಹೂಗಾರ ಅವರ ಶುಭ ನುಡಿ ಸಂಗ್ರಹ ಪುಸ್ತಕವನ್ನು ಬಿಇಒ ಡಿ.ಎಂ. ಬಸವರಾಜಪ್ಪ ಬಿಡುಗಡೆ ಮಾಡಿದರು. ಪ.ಪಂ. ಸದಸ್ಯ ಹಾಗೂ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶಿವರಾಜ ಸುಬ್ಟಾಯವರ ಸ್ವಾಗತಿಸಿದರು. ವಿನಯ ಪಾಲನಕರ, ದಯಾನಂದ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಬಾಲಚಂದ್ರ ಹೆಗಡೆ ವಂದಿಸಿದರು.

ಮೊದಲಿಗೆ ತಹಶೀಲ್ದಾರ್‌ ಅಶೋಕ ಗುರಾಣಿ ರಾಷ್ಟ್ರ ಧ್ವಜಾರೋಹಣ ಮತ್ತು ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಕನ್ನಡ ಧ್ವಜಾರೋಹಣ ನೆರವೇರಿಸಿದರು. ನಂತರ ಡೊಳ್ಳು ಕುಣಿತ, ಮಹಿಳೆಯರ ಕುಂಭಮೇಳದೊಂದಿಗೆ ಎತ್ತಿನಗಾಡಿ ಮತ್ತು ಪಾದಯಾತ್ರೆ ಮೂಲಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಕಸಾಪ ಮಾಜಿ ಅಧ್ಯಕ್ಷೆ ರಮಾಬಾಯಿ ಕುದಳೆ ಉದ್ಘಾಟಿಸಿದರು. ಮಹಾದ್ವಾರವನ್ನು ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಜಯಮ್ಮ ಹಿರೇಹಳ್ಳಿ, ಮುಖ್ಯ ದ್ವಾರವನ್ನು ಜಿಪಂ ಸದಸ್ಯ ಎಲ್‌.ಟಿ. ಪಾಟೀಲ ಮತ್ತು ಪುಸ್ತಕ ಮಳಿಗೆಯನ್ನು ತಾಪಂ ಅಧ್ಯಕ್ಷೆ ದಾಕ್ಷಾಯಣಿ ಸುರಗಿಮಠ ಉದ್ಘಾಟಿಸಿದರು. ಟಿಎಪಿಸಿಎಂ ಸೊಸೈಟಿ ಅಧ್ಯಕ್ಷ ಪಿ.ಎಸ್‌. ಸಂಗೂರಮಠ, ತಾಪಂ ಇಒ ಮಂಜುನಾಥ ಸಾಳುಂಕೆ, ಕಾಳಗನಕೊಪ್ಪದ ಧುರಿಣ ನಾಗರಾಜ ಚಿಗಳ್ಳಿ, ಪ್ರಾಥಮಿಕ ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷ ಪರಶುರಾಮ ಉಪ್ಪಾರ, ಎಚ್.ಎಂ. ನಾಯ್ಕ, ಎಸ್‌.ಕೆ. ರೇವಣಕರ, ಶಾರದಾ ಭಟ್, ವೇಣುಗೋಪಾಲ ಮದ್ಗುಣಿ, ಜಂಪಾ ಲಾಮಾ, ಉಪೇಂದ್ರ ಘೋರ್ಪಡೆ, ಜಯಚಂದ್ರನ, ಬಾಬಣ್ಣ ಕೋಣನಕೇರಿ, ಶ್ರೀಕಾಂತ ಸಾನು, ಮಂಜುನಾಥ ವರ್ಣೇಕರ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next