Advertisement

ಹೆಚ್ಚಿನ ದರಕ್ಕೆ ಯೂರಿಯಾ ಮಾರಾಟ?

01:46 PM Aug 10, 2019 | Naveen |

ಮುದಗಲ್ಲ: ತಾಲೂಕಿನಲ್ಲಿ ಕೃಷಿಗೆ ಅಗತ್ಯ ಯೂರಿಯಾ ಗೊಬ್ಬರ ಅಭಾವ ತಲೆದೋರಿದ್ದು, ಗೊಬ್ಬರ ಸಿಗದೆ ರೈತರು ಪರದಾಡುವಂತಾಗಿದೆ. ಈ ನಡುವೆ ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

Advertisement

ಇತ್ತ ಕೃಷಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ರೈತರನ್ನು ಕೆರಳಿಸಿದೆ. ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಬೇಡಿಕೆ ಇದ್ದಾಗ ಯೂರಿಯಾ ಗೊಬ್ಬರ ಕೊರತೆಯಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಪಟ್ಟಣದ ಕೆಲವು ರಸಗೊಬ್ಬರ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರವೊಂದನ್ನೇ ಕೇಳಿದರೆ ಸ್ಟಾಕ್‌ ಇಲ್ಲ ಎಂಬ ಉತ್ತರ ಬರುತ್ತಿದೆ. ಬೇರೆ ಗೊಬ್ಬರ, ಕಳೆನಾಶಕ, ಕೀಟನಾಶಕ ಖರೀದಿಸಿದರೇ ಮಾತ್ರ ಯೂರಿಯಾ ಗೊಬ್ಬರ ಸಿಗುತ್ತದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಬೀಜ, ಗೊಬ್ಬರವನ್ನು ನಿಗದಿತ ದರದಲ್ಲಿಯೇ ಮಾರಾಟ ಮಾಡಬೇಕು, ಚೀಲದ ಮೇಲೆ ನಮೂದಿಸಿರುವ ಬೆಲೆಗೆ ಮಾರಾಟ ಮಾಡಿ ರೈತರಿಗೆ ರಸೀದಿ ನೀಡಬೇಕು. ತಪ್ಪಿದರೇ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕೃಷಿ ಅಧಿಕಾರಿಗಳು ಪ್ರತಿ ವರ್ಷ ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಆದರೆ ವಾಸ್ತವದಲ್ಲಿ ಸೂಚನೆ ಪಾಲನೆಯಾಗಿಲ್ಲ. ಯಾವ ವರ್ತಕನಿಗೆ ನೋಟಿಸ್‌ ನೀಡಿ ದಂಡ ಹಾಕಿದ ಉದಾಹರಣೆಯೇ ಇಲ್ಲ. 50 ಕೆಜಿ ಯೂರಿಯಾ ಗೊಬ್ಬರ ಚೀಲಕ್ಕೆ ಸರಕಾರ ನಿಗದಿ ಮಾಡಿದ ದರ 267 ರೂ.ಇದೆ. ಹಮಾಲಿ, ಸಾರಿಗೆ ವೆಚ್ಚ ಸೇರಿ 290 ಅಥವಾ 300ಕ್ಕೆ ಮಾರಾಟ ಮಾಡಿದರೇ ಪರವಾಗಿಲ್ಲ. ಆದರೆ ಪಟ್ಟಣದಲ್ಲಿ ಕೆಲ ವರ್ತಕರು 350 ರೂ.ಗಳಂತೆ ಮಾರಾಟ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಒಂದೂವರೇ ತಿಂಗಳು ತಡವಾಗಿ ಆರಂಭವಾದ ಮುಂಗಾರಿಗೆ ರೈತರು ಸಜ್ಜೆ, ತೊಗರಿ, ಹೆಸರು, ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ಈಗ ಬೆಳೆಗಳಿಗೆ ಮೇಲ್ಗೊಬ್ಬರ ಹಾಕಲು ಉತ್ತಮ ತತಿ ಇದೆ. ಆದರೆ ಅಭಾವ ಪರಿಸ್ಥಿತಿ ಮನಗಂಡ ಕೆಲ ಮಾರಾಟಗಾರರು ತಮ್ಮಲ್ಲಿರುವ ಗೊಬ್ಬರವನ್ನು ನಿಗದಿತ ದರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮಾರುತ್ತಿದ್ದಾರೆ. ಇನ್ನು ಕೆಲವರು ಬೇರಡೆ ದಾಸ್ತಾನು ಮಾಡಿ ಅಭಾವ ಸೃಷ್ಟಿಯಾಗುವಂತೆ ಮಾಡಿದ್ದಾರೆ ಎಂಬ ಆರೋಪ ಪಟ್ಟಣ ಸೇರಿದಂತೆ ತಾಲೂಕಿನ್ಯಾದಂತ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಗ್ರಾಮೀಣ ಭಾಗದಲ್ಲಿ ಅಂಗಡಿಗಳನ್ನು ತೆರೆದು ಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರುತ್ತಿದ್ದಾರೆ. ರೈತರಿಗೆ ಜಿಎಸ್‌ಟಿ ರಸೀದಿ ನೀಡುತ್ತಿಲ್ಲ ಎಂದು ರೈತರಾದ ಗ್ಯಾನಪ್ಪ, ಮಲ್ಲಪ್ಪ, ದುರುಗಪ್ಪ, ಭೀಮಪ್ಪ ಆರೋಪಿಸಿದ್ದಾರೆ.

Advertisement

ಯೂರಿಯಾ ಗೊಬ್ಬರ ಅಭಾವ ಇಲ್ಲ . ರಸ್ತೆ ರಿಪೇರಿ ಇರುವುದರಿಂದ ಸಾರಿಗೆ ಸಮಸ್ಯೆಯಾಗಿದೆ. ರೈತರು ಹೆಚ್ಚಿಗೆ ಯೂರಿಯಾ ಬಳಕೆ ನಿಲ್ಲಿಸಿ ಬೇರೆ ಗೊಬ್ಬರ ಬಳಸುವುದರಿಂದ ಉತ್ತಮ ಇಳುವರಿ ಪಡೆಯಬಹುದಾಗಿದೆ. ಯೂರಿಯಾ ಬಳಕೆಯಿಂದ ಬೆಳೆಗಳಿಗೆ ಕೋಳೆ ಮತ್ತು ಕೀಟ ಬಾಧೆ ಕಾಡುತ್ತದೆ. ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಬಗ್ಗೆ ಇಲಾಖೆಗೆ ಲಿಖೀತ ದೂರುಗಳು ಬಂದಿಲ್ಲ.
ಡಾ| ಚೇತನಾ ಪಾಟೀಲ,
ಜಂಟಿ ನಿರ್ದೇಶಕರು, ಕೃಷಿ ಇಲಾಖೆ

ಯೂರಿಯಾ ಗೊಬ್ಬರ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ರೈತರಿಂದ ದೂರವಾಣಿ ಮೂಲಕ ದೂರುಗಳು ಬಂದಿವೆ. ಆದರೆ ರೈತರು ಮಾರಾಟಗಾರರಿಂದ ಪಡೆದ ರಸೀದಿ ನೀಡುತ್ತಿಲ್ಲ. ಈಗಾಗಲೇ ಮೂರು-ನಾಲ್ಕು ಅಂಗಡಿಗಳ ಮಾಲೀಕರಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದೇನೆ. ಯೂರಿಯಾ ಗೊಬ್ಬರ ಹೆಚ್ಚಿನ ದರಲ್ಲಿ ಮಾರಾಟ ಮಾಡುವುದು ಅಪರಾಧ.
ಮಹಾಂತೇಶ ಹವಾಲ್ದಾರ,
 ಸಹಾಯಕ ಕೃಷಿ ನಿರ್ದೇಶಕರು

ಯೂರಿಯಾ ಬೇಡಿಕೆ ಇರುವುದರಿಂದ ಕೃತಕ ಅಭಾವ ಸೃಷ್ಟಿ ಮಾಡಿದ ಅಧಿಧಿಕೃತ ಮಾರಾಟಗಾರರು ರಾಜರೋಷವಾಗಿ ರೈತರಿಗೆ 350 ರೂ. ಗಳಂತೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಕೃಷಿ ಅಧಿಕಾರಿಗಳಿಗೆ ದೂರು ನೀಡಿದಾಗ ಡೀಲರಗಳ ಸಭೆ ಕರೆದು ಸೂಚಿಸುವುದಾಗಿ ಹೇಳಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಅಮರಣ್ಣ ಗುಡಿಹಾಳ,
ರೈತ ಹೋರಾಟಗಾರ

Advertisement

Udayavani is now on Telegram. Click here to join our channel and stay updated with the latest news.

Next