Advertisement

ನೀರಿಗಾಗಿ ಪುರಸಭೆಗೆ ಮುತ್ತಿಗೆ

03:21 PM Sep 12, 2019 | Team Udayavani |

ಮುದಗಲ್ಲ: ಪಟ್ಟಣದ ವೆಂಕಟರಾಯನಪೇಟೆಯಲ್ಲಿ ಕುಡಿಯುವ ನೀರು, ಬೀದಿ ದೀಪಗಳ ವ್ಯವಸ್ಥೆಗೆ ಪುರಸಭೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ವಾರ್ಡ್‌ ನಿವಾಸಿಗಳು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

Advertisement

ಪಟ್ಟಣದ ವೆಂಕಟರಾಯನ ಪೇಟೆ ವಾರ್ಡ್‌ ನಂ. 13ರ ಪುರಸಭೆ ಸದಸ್ಯೆ ಪತಿ ಕರಿಯಪ್ಪ ಯಾದವ ಹಾಗೂ ಮಾಜಿ ಸದಸ್ಯೆ ಪತಿ ರಾಮು ಯಾದವ ನೇತೃತ್ವದಲ್ಲಿ ನಿವಾಸಿಗಳು ಪುರಸಭೆಗೆ ಮುತ್ತಿಗೆ ಹಾಕಿದರು.

ಮೊಹರಂ ನಿಮಿತ್ತ ಪುರಸಭೆ ಅಧಿಕಾರಿಗಳು ಎಲ್ಲೆಡೆ ಬೀದಿ ದೀಪ, ಕುಡಿಯುವ ನೀರು ಸೇರಿ ಅಗತ್ಯ ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆ. ಆದರೆ ನಮ್ಮ ವಾರ್ಡ್‌ನಲ್ಲಿ ಯಾವದೇ ರೀತಿಯ ಸಮಸ್ಯೆಗೆ ಪುರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪುರಸಭೆ ಮುಖ್ಯಾಧಿಕಾರಿ ಆಗಮಿಸಿ ಸಮಸ್ಯೆ ಆಲಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಈ ವೇಳೆ ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ, ಕಿರಿಯ ಅಭಿಯಂತರ ಕೃಷ್ಣಾ ಮತ್ತು ಕುಡಿಯುವ ನೀರು ಸರಬರಾಜು ಮುಖ್ಯಸ್ಥ ರಂಗನಾಥ ತಳವಾರ ಸ್ಥಳಕ್ಕೆ ಆಗಮಿಸಿ ಧರಣಿ ನಿರತರಿಗೆ ಸಮಜಾಯಿಸಿ ನೀಡಲು ಮುಂದಾದರು. ಆದರೆ ಧರಣಿ ನಿರತರು ಕಿರಿಯ ಅಭಿಯಂತರರ ಕಾರ್ಯವೇನು, ನೀವ್ಯಾಕೆ ತಾರತಮ್ಯ ನೀತಿ ಅನುಸರಿಸುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ನಂತರ ಮುಖ್ಯಾಧಿಕಾರಿ ಎನ್‌. ಮೂರ್ತಿ ಸದಸ್ಯೆಯ ಪತಿ ಕರಿಯಪ್ಪ ಯಾದವ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ ಒಂದು ದಿನ ಕಾಲಾವಕಾಶ ಕೊಡಿ ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಮುಖಂಡರಾದ ರಾಮು ಯಾದವ, ರಮೇಶ, ಗಂಗಾಧರ, ಕೃಷ್ಣಪ್ಪ, ಖಾಜಾಸಾಬ್‌, ಶಿವಪ್ಪ ಹುಲಗಿ, ಬಸವರಾಜ ಹಣಗಿ, ಭೀಮಣ್ಣ ದಾಸರ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next