ಮುದಗಲ್ಲ: ನಿರಂತರ ಜ್ಯೋತಿ ಯೋಜನೆಯಡಿ ಜೆಸ್ಕಾಂ ಅಧಿಕಾರಿಗಳು ತಾಂಡಾ ಮತ್ತು ಗ್ರಾಮಗಳ ಸೇರ್ಪಡೆಯಲ್ಲಿ ತಾರತಮ್ಯ ನೀತಿ ಅನುಸರಿಸಿದ್ದರಿಂದ ತಲೇಖಾನ ಗ್ರಾಪಂ ವ್ಯಾಪ್ತಿಯ ಹಲವು ತಾಂಡಾಗಳ ನಿವಾಸಿಗಳು ರಾತ್ರಿ ಕತ್ತಲಲ್ಲಿ ಕಾಲ ಕಳೆಯುವಂತಾಗಿದ್ದರೆ, ನಿರಂತರ ವಿದ್ಯುತ್ ಇಲ್ಲದೇ ಕುಡಿಯುವ ನೀರಿನ ಸಮಸ್ಯೆ, ಹಿಟ್ಟಿನ ಗಿರಣಿ ಬಂದ್‌ನಿಂದ ಹಲವು ಸಮಸ್ಯೆ ಎದುರಿಸುವಂತಾಗಿದೆ.
ಮಸ್ಕಿ ಜೆಸ್ಕಾಂ ವಲಯದ ವ್ಯಾಪ್ತಿಯ ತಲೇಖಾನ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರಂತರ ಜ್ಯೋತಿ ಯೋಜನೆ ಅನುಷ್ಠಾನ ಮಾಡಲಾಗಿದೆ. ಆದರೆ ಜೆಸ್ಕಾಂ ಅಧಿಕಾರಿಗಳು ಗ್ರಾಪಂ ವ್ಯಾಪ್ತಿಯ ಡಾಂಬರ್ ರಸ್ತೆ ಇರುವ ಮಾರ್ಗದಲ್ಲಿ ಮಾತ್ರ ಸಂಚರಿಸಿ ಕೆಲ ಗ್ರಾಮ, ತಾಂಡಾಗಳನ್ನು ಯೋಜನೆ ವ್ಯಾಪ್ತಿಗೆ ಸೇರಿಸಿದ್ದಾರೆ. ಮುಖ್ಯ ರಸ್ತೆಯಿಂದ ಒಳಬರುವ ಸಣ್ಣ ಸಣ್ಣ ತಾಂಡಾ, ಗೊಲ್ಲರಹಟ್ಟಿ, ದೊಡ್ಡಿಗಳಲ್ಲಿ ಸಂಚರಿಸದೇ ಬೇಕಾಬಿಟ್ಟಿ ವರದಿ, ಅಂದಾಜು ಪತ್ರಿಕೆ ತಯಾರಿಸಿದ್ದಾರೆ. ಅದರನ್ವಯ ಕೆಲ ಗ್ರಾಮ, ತಾಂಡಾಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ ವೇಣ್ಯಪ್ಪನ ತಾಂಡಾ, ರಾಮಪ್ಪನ ತಾಂಡಾ, ಲಿಂಬೆಪ್ಪನ ತಾಂಡಾ, ಮೀಸೆಖೀರೆಪ್ಪನ ತಾಂಡಾ, ಸೋಂಪುರ ಗೊಲ್ಲರಹಟ್ಟಿ, ದೇಸಾಯಿ ಭೋಗಾಪುರ ನಾಯಕರ ಹಟ್ಟಿ, ರೂಪಚಂದ್ರಪ್ಪನ ತೋಟಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಇಲ್ಲದಾಗಿದೆ. ಪಕ್ಕದ ಗ್ರಾಮ, ತಾಂಡಾಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ 24 ಗಂಟೆ ವಿದ್ಯುತ್ ನೀಡಿದರೆ, ಇಲ್ಲಿನ ಕೆಲ ತಾಂಡಾಗಳಿಗೆ ವಿದ್ಯುತ್ ಇಲ್ಲದೇ ಕತ್ತಲಲ್ಲಿ ಜೀವಿಸುವಂತಾಗಿರುವ
6 ತಾಸು ಮಾತ್ರ ವಿದ್ಯುತ್: ವೇಣ್ಯಪ್ಪನ ತಾಂಡಾ, ರಾಮಪ್ಪನ ತಾಂಡಾ, ಲಿಂಬೆಪ್ಪನ ತಾಂಡಾ ಹಾಗೂ ಸೋಂಪುರ ಗೊಲ್ಲರಹಟ್ಟಿಗಳಿಗೆ ಸರಕಾರ ಕಿರು ನೀರು ಸರಬರಾಜು ಯೋಜನೆಯಡಿ ಬೋರವೆಲ್ ಕೊರೆದು ವಿದ್ಯುತ್ ಮೋಟಾರು ಅಳವಡಿಸಿ ಗುಮ್ಮಿಗಳಿಗೆ ನೀರು ಸರಬರಾಜು ಮಾಡಿರುವದಲ್ಲದೇ, ಎಲ್ಲೆಡೆ ಬೀದಿದೀಪ ಅಳವಡಿಸಿ ಬೇಳಕಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಕಳೆದ ಕಲವು ದಿನಗಳಿಂದ ಹಗಲಲ್ಲಿ ಬೆಳಗ್ಗೆ 7 ಗಂಟೆಯಿಂದ 10ರವರೆಗೆ 3 ತಾಸು, ರಾತ್ರಿ 7 ಗಂಟೆಯಿಂದ 10 ಗಂಟೆವರೆಗೆ ಮೂರು ತಾಸು ಮಾತ್ರ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ನಂತರ ವಿದ್ಯುತ್ ಸ್ಥಗಿತಗೊಂಡು ನಿವಾಸಿಗಳು ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ರಾತ್ರಿ ಗ್ರಾಮದಲ್ಲಿ ಕಗ್ಗತ್ತಲು ಆವರಿಸುವುದರಿಂದ ಕಳ್ಳರು, ವಿಷಜಂತುಗಳ ಭಯ ಗ್ರಾಮಸ್ಥರನ್ನು ಕಾಡುತ್ತಿದೆ.
ನೀರಿನ ಸಮಸ್ಯೆ: ಇನ್ನು ನಿರಂತರ ವಿದ್ಯುತ್ ಇಲ್ಲದ್ದರಿಂದ ಕಿರುನೀರು ಸರಬರಾಜು ಯೋಜನೆಗಳು ಸ್ಥಗಿತಗೊಂಡಿದ್ದರೆ, ಹಿಟ್ಟಿನ ಗಿರಣಿಗಳು ಬಂದ್ ಆಗುತ್ತಿವೆ. ಬೀದಿದೀಪ ಉರಿಯುತ್ತಿಲ್ಲ. ಪಕ್ಕದ ಗ್ರಾಮ, ತಾಂಡಾಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ 24 ಗಂಟೆ ವಿದ್ಯುತ್ ನೀಡಿದರೆ, ಇಲ್ಲಿನ ಕೆಲ ತಾಂಡಾಗಳಿಗೆ ವಿದ್ಯುತ್ ಇಲ್ಲದೇ ಕತ್ತಲಲ್ಲಿ ಜೀವಿಸುವಂತಾಗಿದೆ.
ಅಧಿಕಾರಿ ವಿರುದ್ಧ ಆರೋಪ: ಈ ಮಸ್ಕಿ ಜೆಸ್ಕಾಂ ಕಾರ್ಯಪಾಲಕ ಅಭಿಯಂತರ ಪ್ರಭಾಕರರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವಿದ್ಯುತ್ ನೀಡುವಂತೆ ಮನವಿ ಮಾಡಿದರೆ ನಿಮ್ಮ ಲಂಬಾಣಿ ತಾಂಡಾಗಳಲ್ಲಿ ವಿದ್ಯುತ್ ಮೀಟರ್ ಖರೀದಿಸಿಲ್ಲ, ಮೀಟರ್ ಖರೀದಿಸಿದರೆ ವಿದ್ಯುತ್ ಸಂಪರ್ಕ ನೀಡುವುದಾಗಿ ಹೇಳುತ್ತಾರೆ. ತಾಲೂಕಿನಲ್ಲಿ ಯಾವುದೇ ಗ್ರಾಮ, ತಾಂಡಾ, ಹಟ್ಟಿ, ದೊಡ್ಡಿಗಳಲ್ಲಿ ಎಲ್ಲಿಯೂ ಮೀಟರ್ ಅಳವಡಿಸಿಲ್ಲ ಆದರೆ ತಾಂಡಾಗಳಿಗೆ ವಿದ್ಯುತ್ ನೀಡಲು ಮೀಟರ್ ಕೇಳಿರುವ ಅಧಿಕಾರಿ ವರ್ತನೆ ಹಲವು ಅನುಮಾನಗಳಿಗೆ ದಾರಿ ಮಾಡಿದೆ ಎಂದು ತಾಂಡಾ ನಿವಾಸಿಗಳು ಆರೋಪಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ತಾಂಡಾಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಇಲ್ಲದಿದ್ದರೆ ಗ್ರಾಪಂ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ತಾಂಡಾ ನಿವಾಸಿಗಳು ಎಚ್ಚರಿಸಿದ್ದಾರೆ.
ವಿದ್ಯುತ್ ಶುಲ್ಕ ಪಾವತಿಸಿಕೊಳ್ಳುವ ಅಧಿಕಾರಿಗಳು ಮೀಟರ್ ಅಳವಡಿಸಿಕೊಳ್ಳದಿರುವ ರೈತರ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಿ ಆದರೆ ಬೀದಿದೀಪದ ವ್ಯವಸ್ಥೆ ಕಲ್ಪಿಸಬೇಕು. ಚುನಾಯಿತ ಪ್ರತಿನಿಧಿಗಳು ದೂರವಾಣಿ ಮೂಲಕ ಜೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅಸಭ್ಯವಾಗಿ ವರ್ತಿಸುತ್ತಾರೆ. ಹೀಗೇ ಮುಂದುವರಿದರೆ ಜನರೊಂದಿಗೆ ಹೋರಾಟಕ್ಕಿಳಿಯಬೇಕಾಗುತ್ತದೆ.
••ಶಾರದಾ ರಾಠೊಡ,
ತಾಪಂ ಸದಸ್ಯರು ಹಡಗಲಿ ಕ್ಷೇತ್ರ.
ವಿದ್ಯುತ್ ಇಲ್ಲದೇ ಮನೆಗಳಲ್ಲಿ ಮಲಗಲು ಆಗುತ್ತಿಲ್ಲ, ಹೊರಗಡೆ ಮಲಗಿದರೆ ವಿಷ ಜಂತುಗಳ ಉಪಟಳ. ಒಟ್ಟಿನಲ್ಲಿ ಭಯದಲ್ಲೇ ರಾತ್ರಿ ಕಳೆಯಬೇಕಿದೆ.
••ದುರುಗಪ್ಪ
ರಾಮಪ್ಪನ ತಾಂಡಾ ನಿವಾಸಿ.
ಹಿರಿಯ ಅಧಿಕಾರಿಗಳ ಆದೇಶ ಪಾಲಿಸಲು ನಿರಂತರ ಜ್ಯೋತಿ ಯೋಜನೆಗೆ ಚಾಲನೆ ನೀಡಲಾಗಿದೆ. ಯೋಜನೆಗೆ ಒಳಪಡದ ತಾಂಡಾಗಳು ಕತ್ತಲಲ್ಲಿವೆ.
••ಪ್ರಭಾಕರ,
ಜೆಸ್ಕಾಂ ಕಾರ್ಯಪಾಲನಾ ಅಭಿಯಂತರರು ಮಸ್ಕಿ.