ಮುದಗಲ್ಲ: ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿತ ಒಂದೆಡೆಯಾದರೆ, ಇತ್ತೀಚೆಗೆ ಸುರಿದ ಮಳೆಗೆ ಕೆಲವೆಡೆ ಹೊಲದಲ್ಲಿಯೇ ಈರುಳ್ಳಿ ಕೊಳೆಯುತ್ತಿದೆ. ಪರಿಣಾಮ ಈರುಳ್ಳಿ ಬೆಳೆದ ರೈತರು ಕಣ್ಣೀರು ಸುರಿಸುವಂತಾಗಿದೆ.
Advertisement
ಬೇರೆ ಬೆಳೆಯತ್ತ ಚಿತ್ತ ಹರಿಸದ ಕೆಲ ರೈತರು ಇದ್ದ ಸ್ವಲ್ಪ ಬೋರ್‌ವೆಲ್ ನೀರು ಹಾಯಿಸಿ ಈರುಳ್ಳಿ ಬೆಳೆದಿದ್ದಾರೆ. ನಾಲ್ಕೈದು ತಿಂಗಳು ಕಷ್ಟಪಟ್ಟು ಬೆಳೆದ ಈರುಳ್ಳಿ ಕೈಗೆ ಬಂದಿದೆ. ಈರುಳ್ಳಿಯನ್ನು ಕಟಾವು ಮಾಡಿ ಹೊಲದಲ್ಲಿಯೇ ಆರಿಸಲು ಹಾಕಿದ್ದಾರೆ. ಆದರೆ ಸತತ 15 ದಿನಗಳಿಂದ ಆಗಾಗ ಸುರಿಯುತ್ತಿರುವ ಬೆಳೆಗೆ ಒಣಹಾಕಿದ ಈರುಳ್ಳಿ ನೆನೆದು ಕೊಳೆತಿದ್ದು, ರೈತರು ಕಂಗಾಲಾಗುವಂತಾಗಿದೆ.
ಇಂತಹ ಪರಿಸ್ಥಿತಿಯಲ್ಲೂ ಕೆಲ ರೈತರು ಧೈರ್ಯ ಮಾಡಿ ಈರುಳ್ಳಿಯನ್ನು ಲಾರಿಯಲ್ಲಿ ತುಂಬಿ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಈ ಮುಂಚೆ ಕ್ವಿಂಟಲ್‌ಗೆ 2500 ರೂಪಾಯಿಯಿಂದ 3500ರೂ.ವರೆಗೆ
ಈರುಳ್ಳಿ ಮಾರಾಟವಾಗುತ್ತಿತ್ತು. ಆದರೆ ಕೇಂದ್ರ ಸರಕಾರ ಈರುಳ್ಳಿ ರಫ್ತಿನ ಮೇಲೆ ನಿರ್ಬಂಧ ಹೇರಿದ್ದರಿಂದ ಈರುಳ್ಳಿ ದರ ಕುಸಿದಿದೆ. ಹೈದ್ರಾಬಾದ ಮಾರುಕಟ್ಟೆಗೆ 1 ಕ್ವಿಂಟಲ್ ಈರುಳ್ಳಿ ಸಾಗಿಸಿದರೆ 350 ರೂ. ಖರ್ಚು ತಗಲುತ್ತಿದೆ ಎಂದು ಈರುಳ್ಳಿ ವ್ಯಾಪಾರಿ ಕಲಿಂ ಸಾಬ್ ಗಂಗಾವತಿ ತಿಳಿಸಿದ್ದಾರೆ. ವಾಣಿಜ್ಯ ಬೆಳೆಯಾದ ಈರುಳ್ಳಿ ದರ ನಂಬಿ ಬೆಳೆದ ರೈತರು ಈಗ ನಷ್ಟ ಅನುಭವಿಸುವಂತಾಗಿದೆ ಎಂದು ರೈತರಾದ ಮಾನಪ್ಪ, ಬಾಲಚಂದ್ರ, ಗ್ಯಾನಪ್ಪ, ಕುಪ್ಪಣ್ಣ ಅಳಲು ತೋಡಿಕೊಂಡರು.
Related Articles
Advertisement