Advertisement

ಅಧ್ಯಕ್ಷ್ಯ -ಉಪಾಧ್ಯಕ್ಷ್ಯರ ಗಾದಿಗೆ ಕಸರತ್ತು

11:39 AM Mar 16, 2020 | Naveen |

ಮುದಗಲ್ಲ: ಕಳೆದ ಒಂದೂವರೆ ವರ್ಷಗಳಿಂದ ಅಧಿಕಾರ ಇಲ್ಲದೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಪುರಸಭೆ ಸದಸ್ಯರಲ್ಲಿ ಅಧ್ಯಕ್ಷ-ಉಪಾಧ್ಯಕ್ಷೆ ಹುದ್ದೆ ಮೀಸಲಾಗಿದ್ದು ಪಟ್ಟಣದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

Advertisement

ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ 18 ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ 23 ವಾರ್ಡ್‌ಗಳಲ್ಲಿ 14 ಜನ ಕಾಂಗ್ರೆಸ್‌, 8 ಜನ ಜೆಡಿಎಸ್‌, ಮತ್ತು ಒಬ್ಬರು ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿದ್ದರಿಂದ 18 ತಿಂಗಳಿಂದ ಪುರಸಭೆಗೆ ಆಡಳಿತ ಮಂಡಳಿ ರಚನೆ ಆಗಿದ್ದಿಲ್ಲ.

ರಾಜ್ಯದಲ್ಲಿ ಈ ಹಿಂದಿನ ಮೈತ್ರಿ ಸರ್ಕಾರ ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ಮಾಡಿ ಆದೇಶ ಹೊರಡಿಸಿತ್ತು. ಈಗಿನ ಸರ್ಕಾರ ಇದನ್ನು ರದ್ದು ಮಾಡಿ ಅಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ) ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಿರಿಸಿ ಹೊಸ ಆದೇಶ ಹೊರಡಿಸಿದೆ. ಇದರಿಂದ ಆಕಾಂಕ್ಷಿಗಳಲ್ಲಿ ಪೈಪೋಟಿ ಶುರುವಾಗಿದ್ದರೆ, ಸಾರ್ವಜನಿಕರಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಯಾರಾಗಬಹುದೆಂಬ ಕುತೂಹಲ ಮೂಡಿದೆ.

ಒಟ್ಟು 23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್‌ 14 ಸದಸ್ಯರ ಬಲದೊಂದಿಗೆ ಬಹುಮತ ಹೊಂದಿದೆ. ಇದರಲ್ಲಿ 7 ಜನ ಮಹಿಳಾ ಸದಸ್ಯರಿದ್ದಾರೆ. ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನ ಯಾರ ಮುಡಿಗೇರಬಹುದೆಂಬ ಕುತೂಹಲ ಮೂಡಿಸಿದೆ. ಆದರೆ ಕ್ಷೇತ್ರದ ಶಾಸಕ ಡಿ.ಎಸ್‌.ಹೂಲಗೇರಿ ನಿರ್ಣಯವೇ ಅಂತಿಮವೆನ್ನಲಾಗುತ್ತಿದೆ.

ಏಳು ಜನ ಮಹಿಳೆಯರು: ಕಾಂಗ್ರೆಸ್‌ನಿಂದ ಆಯ್ಕೆಯಾದ 14 ಜನ ಸದಸ್ಯರಲ್ಲಿ ಏಳು ಜನ ಮಹಿಳೆಯರಿದ್ದಾರೆ. ಅದರಲ್ಲಿ ಹಳೆಪೇಟೆಯ 3ನೇ ವಾರ್ಡ್‌ನ ಅಮೀನಾಬೇಗಂ ಸೈಯ್ಯದ್‌ ಸಾಬ್‌, 4ನೇ ವಾರ್ಡ್‌ನ ರಂಜಾನ್‌ಬೀ ಅಜ್ಮಿàರಸಾಬ್‌, ಕಿಲ್ಲಾ ವಾರ್ಡ್‌ ನಂ 17ರ ಕಾಸಿಂಬೀ ಅಬ್ದುಲ್‌ ಖೈಯಿಮ್‌ ಹಾಗೂ ವಾರ್ಡ್‌ ನಂ.8ರ ರಭಿಯಾಬೇಗಂ ಹುಸೇನಲಿ ಮುಸ್ಲಿಂ ಸಮಾಜದಿಂದ ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗಿದೆ.

Advertisement

ಸೋಮವಾರ ಪೇಟೆ 23ನೇ ವಾರ್ಡ್‌ನ ಜಯಶ್ರೀ ಶಂಕ್ರಪ್ಪ ಜೀಡಿ ಹಾಗೂ 15ನೇ ವಾರ್ಡ್‌ನ ಮಹಾದೇವಮ್ಮ ಗುತ್ತೇದಾರ ಸಾಮಾನ್ಯ ವರ್ಗದಿಂದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಪುರಸಭೆ ಅಧ್ಯಕ್ಷರ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಿರಿಸುವುದು ಅಪರೂಪ. ಆದ್ದರಿಂದ ಸಾಮಾನ್ಯ ವರ್ಗಕ್ಕೆ ನೀಡಬೇಕು. ಮುಸ್ಲಿಂ ಸಮಾಜದ ಆಕಾಂಕ್ಷಿಗಳಿಗೆ ಬಿಸಿಎಂ ಎ. ವರ್ಗದಲ್ಲಿ ಅವಕಾಶಗಳು ಸಿಗುತ್ತವೆ ಎಂಬುದು ಪ್ರಜ್ಞಾವಂತರ ಅನಿಸಿಕೆ. ಮಾಜಿ ಮಂತ್ರಿ ಮಲ್ಲಿಕಾರ್ಜುನ ಸಂಬಂಧಿಯಾದ ಜಯಶ್ರೀ ಶಂಕ್ರಪ್ಪ ಜೀಡಿ ಸಹ ಅಧ್ಯಕ್ಷ ಗಾ ದಿಗೆ ತೀವ್ರ ಪೈಪೋಟಿ ನಡೆಸಲಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ ಕಸರತ್ತು: ಮುದಗಲ್ಲ ಪುರಸಭೆ ಅಧಿಕಾರ ಹಿಡಿಯಲು ಕಾಂಗ್ರೆಸ್‌ ಗೆ ಸ್ಪಷ್ಟ ಬಹುಮತ ಇದ್ದರೂ ಕೂಡ ಅಧಿಕಾರ ಕೈ ತಪ್ಪಿಸಲು ಜೆಡಿಎಸ್‌ನ ಕೆಲ ಸದಸ್ಯರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆನ್ನಲಾಗಿದೆ. ಕಾಂಗ್ರೆಸ್‌ನಲ್ಲಿ ಭಿನ್ನಮತ ಏರ್ಪಟ್ಟರೆ ಅದರ ಲಾಭ ಪಡೆಯಲು ಕಾಯುತ್ತಿದ್ದಾರೆಂಬ ಮಾತು ಕೇಳಿಬರುತ್ತಿವೆ. ಕೇವಲ 8 ಸದಸ್ಯರ ಬಲ ಇರುವ ಜೆಡಿಎಸ್‌ಗೆ ಬಹುಮತಕ್ಕೆ ಇನ್ನೂ 4 ಸ್ಥಾನದ ಅವಶ್ಯಕತೆ ಇದೆ. ಆದರೆ ಸರಳ ಬಹುಮತ ಇರುವ ಕಾಂಗ್ರೆಸ್‌ ಪಕ್ಷದ ಸದಸ್ಯರನ್ನು ತನ್ನತ್ತ ಸೆಳೆದು ಅಧಿಕಾರ ಹಿಡಿಯಲು ಸಾಧ್ಯವೇ ಎಂಬುದು ರಾಜಕೀಯ ವಲಯದಲ್ಲಿ ಪ್ರಶ್ನೆ ಕಾಡುತ್ತಿದೆ.

ಒಟ್ಟಾರೆ ಕಳೆದ 18 ತಿಂಗಳಿಂದ ಯಾವುದೇ ಅಧಿಕಾರ ವಹಿಸಿಕೊಳ್ಳದೆ ಗೊಂದಲದಲ್ಲಿದ್ದ ಚುನಾಯಿತ ಪುರಸಭೆ ಸದಸ್ಯರಿಗೆ ಅಧಿಕಾರ ವಹಿಸಿಕೊಳ್ಳುವ ಕಾತುರ ಹೆಚ್ಚಾಗಿದೆ. ಆಡಳಿತದ ಜವಾಬ್ದಾರಿ ಯಾರಾದರೂ ತೆಗೆದುಕೊಳ್ಳಲಿ ಮೊದಲು ಅಭಿವೃದ್ಧಿ ಕೆಲಸಕ್ಕೆ ಚಾಲನೆ ಸಿಗಲಿ ಎಂಬುದು ಅನೇಕ ಸದಸ್ಯರ ಅಭಿಪ್ರಾಯವಾಗಿದೆ.

ಚುನಾಯಿತ ಸದಸ್ಯರ ಮತ್ತು ಪಕ್ಷದ ಮುಖಂಡರ ಸಭೆ ಕರೆದು ಚರ್ಚಿಸಿದ ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗೆ ಯಾರನ್ನು ಆಯ್ಕೆ ಮಾಡಬೇಕೆಂಬುದನ್ನು ತೀರ್ಮಾನಿಸುತ್ತೇವೆ.
ಡಿ.ಎಸ್‌.ಹೂಲಗೇರಿ
ಶಾಸಕರು ಲಿಂಗಸುಗೂರ.

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಅಧಿಸೂಚನೆ ಪ್ರಕಟವಾಗಿದೆ. ಅಧಿಕಾರಕ್ಕೆ ಯಾರನ್ನು ಕೂಡಿಸಬೇಕು ಎನ್ನುವ ಕುರಿತು ಯಾವುದೇ ಚರ್ಚೆಯಾಗಿಲ್ಲ. ಶಾಸಕರು ಬೆಂಗಳೂರಲ್ಲಿ ಇದ್ದು ಮುಂದಿನ ದಿನಗಳಲ್ಲಿ ಶಾಸಕರ ನಿರ್ಣಯದಂತೆ ತೀರ್ಮಾನ ಕೈಗೊಳ್ಳಲಾಗುವುದು.
ಶರಣಪ್ಪ ಒಡ್ಡರ್‌,
ಪುರಸಭೆ ಸದಸ್ಯ

ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next