ಮುದಗಲ್ಲ: ಪಟ್ಟಣ ಸೇರಿದಂತೆ ನಾಗರಹಾಳ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿದ ಪರಿಣಾಮ ಕೃಷಿ ಚಟುವಟಿಕೆ ಆರಂಭವಾಗಿದೆ. ಒಂದೆಡೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದ್ದರೆ, ದುಪ್ಪಟ್ಟು ಕೂಲಿ ರೈತರಿಗೆ ಹೊರೆಯಾಗಿ ಪರಿಣಮಿಸಿದೆ.
Advertisement
ಮುಂಗಾರು ಮಳೆ ಸುಮಾರು ಒಂದು ತಿಂಗಳು ತಡವಾಗಿ ಆರಂಭವಾಗಿದ್ದು, ಇತ್ತೀಚೆಗಷ್ಟೇ ಈ ಭಾಗದಲ್ಲಿ ಉತ್ತಮ ಮಳೆ ಸುರಿದಿದೆ. ಈಗ ಬಿತ್ತನೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಈ ಭಾಗದಲ್ಲಿ ಕೃಷಿಕರು ಹೆಚ್ಚಿರುವುದರಿಂದ ಏಕಕಾಲಕ್ಕೆ ಬಿತ್ತನೆ ಚಟುವಟಿಕೆ ಶುರುವಾಗಿದೆ. ಸಣ್ಣ ರೈತರು ಕುಟುಂಬದ ಸದಸ್ಯರೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರೆ, ದೊಡ್ಡ ದೊಡ್ಡ ರೈತರು ಕೂಲಿಕಾರರನ್ನು ಅವಲಂಬಿಸಿದ್ದಾರೆ. ಹೀಗಾಗಿ ಕಾರ್ಮಿಕರ ಕೊರತೆ ಎದುರಾಗಿದ್ದು, ಸಹಜವಾಗಿಯೇ ಹೆಚ್ಚಿನ ಕೂಲಿಗೆ ಬೇಡಿಕೆ ಇಡುತ್ತಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ, ಬೇಸಾಯ ಹಾಗೂ ಕೂಲಿಗಾಗಿ ಸಾವಿರಾರು ರೂಪಾಯಿ ಮೀಸಲಿಡಬೇಕಾಗಿದೆ. ವರ್ಷದಿಂದ ವರ್ಷಕ್ಕೆ ಕೂಲಿ ದರ ಹೆಚ್ಚುತ್ತಿದ್ದು ರೈತರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ವರ್ಷದ ಹಿಂದೆ 100 ರೂ. ಇದ್ದ ಕೂಲಿ ಈಗ 200, 250ಕ್ಕೆ ತಲುಪಿದೆ ಎನ್ನುತ್ತಾರೆ ಅಡವಿಬಾವಿ ಗ್ರಾಮದ ರೈತ ಬಸನಗೌಡ ಮಾಲಿಪಾಟೀಲ.
Related Articles
Advertisement
ಭೂ ರಹಿತರು ನಗರ ಪ್ರದೇಶಗಳಿಗೆ ಗುಳೆ ಹೋಗಿದ್ದಾರೆ. ಇಲ್ಲಿಯೇ ಇರುವ ಕೆಲ ಕೂಲಿ ಕಾರ್ಮಿಕರು ನರೇಗಾ ಕೆಲಸದಲ್ಲಿ ತೊಡಗಿದ್ದಾರೆ. ಹೀಗಾಗಿ ಕೃಷಿ ಚಟುವಟಿಕೆಗೆ ಕೂಲಿಕಾರರ ಕೊರತೆ ಎದುರಾಗಿದೆ.•ದೇವಪ್ಪ ತೊಂಡಿಹಾಳ ,
ರೈತ ಮುಂಗಾರು ತಡವಾದರೂ ಉತ್ತಮ ಮಳೆಯಾಗಿದ್ದರಿಂದ ಬೆಳೆ ಚೆನ್ನಾಗಿಬಂದಿದೆ. ರೈತರು ಕೃಷಿ ಇಲಾಖೆ ಮಾರ್ಗದರ್ಶನದಲ್ಲಿ ಕೃಷಿಯಲ್ಲಿ ತೊಡಗಿ ಹೆಚ್ಚಿನ ಇಳುವರಿ ಪಡೆಯಬಹುದು.
•ವೆಂಕಟೇಶ ಕುಲಕರ್ಣಿ,
ಕೃಷಿ ಅಧಿಕಾರಿ