ಮುದಗಲ್ಲ: ಪಟ್ಟಣ ಸೇರಿದಂತೆ ಬಹುತೇಕ ಹಳ್ಳಿಗಳಲ್ಲಿ ಶಂಕಿತ ಡೆಂಘೀ ಜ್ವರ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.
ತಿಮ್ಮಾಪುರ, ಮಹಿಬೂಬ್‌ನಗರ, ತಿಮ್ಮಾಪುರ ತಾಂಡಾ, ರಾಮಪ್ಪನ ತಾಂಡಾ ಸೇರಿದಂತೆ ಕೆಲ ಗ್ರಾಮ ಮತ್ತು ತಾಂಡಾ ಹಾಗೂ ಗೊಲ್ಲರಹಟ್ಟಿಗಳಲ್ಲಿ ಡೆಂಘೀ ಪ್ರಕರಣಗಳು ಬೆಳಕಿಗೆ ಬಂದಿವೆ. ಮೆದಕಿನಾಳ, ಮುದಗಲ್ಲ ಹಾಗೂ ಮಾಕಾಪುರ ಸೇರಿದಂತೆ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಡೆಂಘೀ ಜ್ವರಕ್ಕೆ ಚಿಕಿತ್ಸೆ ಸಿಗದೇ ರೋಗಿಗಳು ಬಾಗಲಕೋಟೆ, ಬಳ್ಳಾರಿ, ರಾಯಚೂರು, ಲಿಂಗಸುಗೂರು, ಸಿಂಧನೂರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಟಣ ಹೊರವಲಯದ ಕಲ್ಲು ಗಣಿಗಾರಿಕೆ ಪ್ರದೇಶದ ಅನತಿ ದೂರದಲ್ಲಿರುವ ಮಹಿಬೂಬ್ ನಗರದಲ್ಲಿ ಸುಮಾರು 50 ಕುಟುಂಬಗಳು ವಾಸಿಸುತ್ತಿವೆ. ಇಲ್ಲಿನ ಬಂದೆನವಾಜ್ ಎಂಬುವರ ಒಂದೇ ಕುಟುಂಬದಲ್ಲಿ 7 ಜನರಲ್ಲಿ ಡೆಂಘೀ ಜ್ವರ ಕಾಣಿಸಿಕೊಂಡಿದ್ದು, ಲಿಂಗಸುಗೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಿಮ್ಮಾಪುರದಲ್ಲಿ ಕೆಲವರು ಕಳೆದ ಒಂದು ತಿಂಗಳಿಂದ ಜ್ವರ ಕಾಣಿಸಿಕೊಂಡಿದ್ದು ಬಾಗಲಕೋಟೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಿಮ್ಮಾಪುರ ತಾಂಡಾ ಹಾಗೂ ತಿಮ್ಮಾಪುರ ಗೊಲ್ಲರಹಟ್ಟಿಯಲ್ಲಿ ಡೆಂಘೀ ಜ್ವರ ಕಾಣಿಸಿಕೊಂಡಿದ್ದು, ಪ್ರತಿ ಮನೆಯಲ್ಲೂ ಜ್ವರದಿಂದ ಬಳಲುತಿದ್ದಾರೆ. ಮೆದಕಿನಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ಶಂಕಿತ ಜ್ವರ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ತಿಮ್ಮಾಪುರದ ದುರುಗಪ್ಪ, ಹನುಮಂತ, ಬಸವರಾಜ, ಮಾನಪ್ಪ ಆರೋಪಿಸಿದ್ದಾರೆ.
ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ: ತಿಮ್ಮಾಪುರ ಗ್ರಾಮ ಹಾಗೂ ಮಹಿಬೂಬ್ ನಗರಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ರೋಗಿಗಳ ರಕ್ತ ಮಾದರಿ ಸಂಗ್ರಹಿಸಿ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಸಲಹೆ ನೀಡಲಾಗಿದೆ. ಜ್ವರ ಹತೋಟಿಗೆ ಬರುತ್ತಿಲ್ಲ. ಗ್ರಾಪಂ ಆಡಳಿತ ಕುಡಿಯುವ ನೀರು ಸಂಗ್ರಹ ಗುಮ್ಮಿಗಳನ್ನು ಸ್ವಚ್ಛ ಮಾಡಿಸಿ ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮಾಡಿಸಿದ್ದಾರೆ.