Advertisement

ಅವಸಾನದತ್ತ ಮುದಗಲ್ಲ ಕೋಟೆ

01:00 PM Feb 11, 2020 | Suhan S |

ಮುದಗಲ್ಲ: ಏಳು ರಾಜವಂಶಸ್ಥರ ಆಳ್ವಿಕೆ ಕಂಡು ಐತಿಹಾಸಿಕ ಖ್ಯಾತಿ ಪಡೆದಿರುವ ಮುದಗಲ್ಲನ ಎರಡು ಸುತ್ತಿನ ಕೋಟೆ ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷ್ಯದಿಂದಾಗಿ ಇಂದು ಅವಸಾನದ ಅಂಚಿಗೆ ತಲುಪಿದೆ.

Advertisement

ಕರ್ನಾಟಕ ಇತಿಹಾಸದಲ್ಲಿ ವಿಶೇಷವಾಗಿ ಗುರುತಿಸಿಕೊಂಡ, ವಿಶಿಷ್ಠವಾದ ದೊಡ್ಡ ಕಲ್ಲು, ಚಿತ್ತಾರದಿಂದ ನಿರ್ಮಾಣಗೊಂಡಿರುವ ಮುದಗಲ್ಲ ಕೋಟೆ ಏಳು ರಾಜವಂಶಸ್ಥರಿಗೆ ರಾಜಧಾನಿಯಾಗಿದ್ದು ವಿಶೇಷ. ಆದರೆ ಇಂತಹ ಐತಿಹಾಸಿಕ ಪ್ರತೀಕವಾಗಿರುವ ಕೋಟೆ ಮೇಲೆ ಜಾಲಿಗಿಡಗಳು ಬೆಳೆದಿವೆ. ಕೋಟೆ ಗೋಡೆ  ಕೆಲವೆಡೆ ಕುಸಿದಿದೆ. ಇನ್ನು ಕೆಲ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಪಾರಂಪರಿಕ ಪಟ್ಟಣ ಎಂಬ ಹಿರಿಮೆಗೆ ಗುರಿಯಾಗಿದ್ದ ಮುದಗಲ್ಲ ಕೋಟೆ ಕಂದಕ ಈಗ ಕೊಳಚೆ ನೀರು ಸಂಗ್ರಹ ತಾಣವಾಗಿದೆ. ನೀರು ಪಾಚಿಗಟ್ಟಿ ದುರ್ವಾಸನೆ ಬೀರುತ್ತಿದೆ.  ಕೋಟೆ ಸುತ್ತಮುತ್ತಲಿನ ಜಾಗ ಬಯಲುಶೌಚಕ್ಕೆ ಮೀಸಲಾಗಿದೆ. ಪುರಸಭೆ, ಸಾರ್ವಜನಿಕರು ಹಾಕುವ ಕಸ-ಕಡ್ಡಿ ಸೇರಿದಂತೆ ಇತರ ತ್ಯಾಜ್ಯದಿಂದ ಕೋಟೆ ಅಂದಕ್ಕೆ ಧಕ್ಕೆ ಹಾಕಿದ್ದು, ಹಾಳು ಕೊಂಪೆಯಂತೆ ಕಾಣುತ್ತಿದೆ.

ಸಂಶೋಧನೆ: ಕಲ್ಯಾಣ ಚಾಲುಕ್ಯರು, ಯಾದವರು, ಕರಡಕಲ್ಲಿನ ಕದಂಬರು, ವಿಜಯನಗರ ಅರಸರು ಮತ್ತು ಬಹುಮನಿ ಆದಿಲ್‌ಶಾಹಿಗಳ, ಮೊಗಲರು ಹಾಗೂ ಹೈದ್ರಾಬಾದ ನವಾಬರು ಸೇರಿದಂತೆ ಅನೇಕ ರಾಜರ ದಾಳಿಗೆ ತುತ್ತಾಗುವುದರ ಜೊತೆಗೆ ವಿವಿಧ ರಾಜವಂಶಸ್ಥರ ಆಳ್ವಿಕೆಯನ್ನು ಮುದಗಲ್ಲ ಕೋಟೆ ಕಂಡಿದೆ. ಕೋಟೆ ಮತ್ತು ಇಲ್ಲಿನ ಶಾಸನಗಳ ಬಗ್ಗೆ ಅನೇಕ ಸಂಶೋಧನೆ ನಡೆದಿದೆ.

ಪ್ರವಾಸಿ ತಾಣ: ಐತಿಹಾಸಿಕ ಮುದಗಲ್ಲ ಕೋಟೆಗೆ ರಾಯಚೂರು ಜಿಲ್ಲೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರವಾಸಿಗಳು, ಶಾಲಾ ಮಕ್ಕಳು ಶೈಕ್ಷಣಿಕ ಪ್ರವಾಸಕ್ಕೆ ಆಗಮಿಸುತ್ತಾರೆ. ಆದರೆ ಕೋಟೆಯಲ್ಲಿನ ಅವ್ಯವಸ್ಥೆ, ಸುತ್ತಲಿನ ಪರಿಸರ ಕಂಡು ಪ್ರವಾಸಿಗರು ಬೇಸರಪಡುವಂತಾಗಿದೆ. ಇನ್ನು ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕುಡಿಯುವ ನೀರು, ಇತರೆ ಸೌಲಭ್ಯವಿಲ್ಲ. ಇದು ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಕೋಟೆ ಒಳಗಡೆ ಹಾಗೂ ಹೊರಗಡೆ ಪ್ರವಾಸಿಗರಿಗೆ ಕೋಟೆಯ ಇತಿಹಾಸ ಮತ್ತು ಮಹತ್ವ ತಿಳಿಸುವ ಮಾಹಿತಿ ನೀಡುವ ಫಲಕಗಳಿಲ್ಲ. ಇದರಿಂದ ಮುದಗಲ್ಲ ಕೋಟೆ ಇತಿಹಾಸ ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ ತಿಳಿಯದಂತಾಗಿದೆ.

ಅನೈತಿಕ ತಾಣ: ನಿರ್ಲಕ್ಷ್ಯಕ್ಕೊಳಗಾದ ಮುದಗಲ್ಲ ಕೋಟೆ ಕುಡುಕರು, ಪುಂಡರಿಗೆ ಅನೈತಿಕ ಚಟುವಟಿಕೆಯ ತಾಣವಾಗುತ್ತಿದೆ. ಈ ಬಗ್ಗೆ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಗಮನಹರಿಸಿ ಕೋಟೆ ರಕ್ಷಣೆಗೆ ಮತ್ತು ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಲು, ಕೋಟೆ ಸುತ್ತ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಕೋಟೆಯಲ್ಲಿ ಏನಿದೆ: ಇತಿಹಾಸ ಸಂಶೋಧನಾಸಕ್ತರ ಕೇಂದ್ರವಾಗಿರುವ ಮುದಗಲ್ಲ ಕೋಟೆಯೊಳಗೆ ಒಳಗೋಡೆಯಲ್ಲಿ 24, ಹೊರಗೋಡೆಯಲ್ಲಿ 34 ಚೌಕಾಕಾರದ ಕೊತ್ತಗಳಿವೆ. ಎರಡು ಸುಭದ್ರ ಬಾಗಿಲಿವೆ. ಪೂರ್ವದಲ್ಲಿ ಮುಳ್ಳ ಅಗಸಿ, ಉತ್ತರಕ್ಕೆ ವಿಜಯದ ಅಗಸಿ ಬಾಗಿಲುಗಳಿವೆ. ಒಳಕೋಟೆಯಲ್ಲಿ 4 ತೋಪುಗಳಿವೆ. ಕಾವಲು ಗೋಪುರ, ಗಗನ ಮಹಲ್‌, ಫತ್ತೆ ಧರ್ವಾಜ,ವಕ್ರಾಣಿ, ತುಪ್ಪದಕೊಳ, ವ್ಯಾಯಾಮ ಶಾಲೆ, ಚಾರ್‌ ಮಹಲ್‌ ಬಾವಿ, ಖಾಸ ಚೌಡಿಬಾವಿ, ಹಲಾಲಖೋರ ಬಾವಿ, ಅರಬಾವಿ ಮುಂತಾದವುಗಳು ಇವೆ.

ಮೊಹರಂ ಪ್ರಸಿದ್ಧಿಯ ಹಜರತ್‌ ಹಸನ್‌ ಆಲಂ ದರ್ಗಾ, 12ನೇ ಶತಮಾನದ ಶ್ರೀ ರಾಮಲಿಂಗೇಶ್ವರ ದೇವಸ್ಥಾನ, ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಸೀದಿ ಒಟ್ಟಿಗೆ ಇದ್ದು, ಭಾವೈಕ್ಯಕ್ಕೆ ಸಾಕ್ಷಿಯಾಗಿವೆ. ಸುಮಾರು 80ಕ್ಕಿಂತ ಹೆಚ್ಚು ಶಾಸನಗಳು ಇಲ್ಲಿ ದೊರಕಿವೆ. ಇವು ಕಲ್ಯಾಣ ಚಾಲುಕ್ಯರ, ಯಾದವರ, ಕರಡಕಲ್ಲಿನ ಕದಂಬರ, ವಿಜಯನಗರ ಮತ್ತು ಬಹುಮನಿ ಆದಿಲ್‌ ಶಾಹಿಗಳ, ಮೊಗಲರ, ಹೈದ್ರಾಬಾದ ನವಾಬರ ಆಳ್ವಿಕೆಗೆ ಸೇರಿದವುಗಳಾಗಿವೆ.

ಪ್ರವಾಸೋದ್ಯಮ ಇಲಾಖೆ ಜವಾಬ್ದಾರಿ ಎರಡು ತಿಂಗಳಾಗಿದೆ. ಮುದಗಲ್ಲ ಕೋಟೆ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಂದಿರುವ ಬಗ್ಗೆ ಮಾಹಿತಿ ಇಲ್ಲ. ಶರಣಬಸವ ಸಹಾಯ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ರಾಯಚೂರು

ಮುದಗಲ್ಲ ಕೋಟೆ ಅಭಿವೃದ್ಧಿಗೆ ಕಾಳಜಿ ವಹಿಸಲಾಗಿದೆ. ಕಳೆದ ಮೈತ್ರಿ ಸರ್ಕಾರದಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದರಿಂದ ಜಲದುರ್ಗ ಕೋಟೆ ಅಭಿವೃದ್ಧಿಗೆ 1 ಕೋಟಿ ರೂ. ಮಂಜೂರಾಗಿದೆ. ಅದರಂತೆ ಮುದಗಲ್ಲ ಕೋಟೆ ಅಭಿವೃದ್ಧಿಗೆ ಮತ್ತು ಉತ್ಸವ ನಡೆಸಲು ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಲಾಗುವುದು.  ಡಿ.ಎಸ್‌. ಹೂಲಗೇರಿ, ಶಾಸಕರು

 

-ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next