ಮುದಗಲ್ಲ: ಇತ್ತೀಚೆಗೆ ಆದಾಪುರ ಗಣಿ ಪ್ರದೇಶದಲ್ಲಿ ಚಿರತೆಯೊಂದು ಆಡಿನ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿತ್ತು. ಇದೀಗ ಮತ್ತೇ ಎರಡು ಚಿರತೆಗಳು ಮಂಗಳವಾರ ಸಂಜೆ ಸಮೀಪದ ಹುನೂರು ಗ್ರಾಮದಲ್ಲಿ ಕಂಡುಬಂದಿದ್ದು ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಎರಡು ವಾರಗಳ ಹಿಂದೆ ಆದಾಪುರ ಗ್ರಾಮದಲ್ಲಿ ಚಿರತೆಯೊಂದು ಆಡಿನ ಮೇಲೆ ದಾಳಿ ನಡೆಸಿತ್ತು. ಇದನ್ನು ನೋಡಿದ ಕುರಿಗಾಹಿ ಚೀರಾಡಿದ್ದರಿಂದ ಮತ್ತು ಜನ ಸೇರಿದ್ದರಿಂದ ಚಿರತೆ ಓಡಿ ಹೋಗಿತ್ತು.
ಚಿರತೆ ಹೆಜ್ಜೆ ಗುರತು ಪತ್ತೆ ಹಚ್ಚಿದ ಆರಣ್ಯ ಇಲಾಖೆ ಆದಾಪುರ ಗುಡ್ಡದಲ್ಲಿ ಚಿರತೆ ಸೆರೆಗೆ ಬೋನು ಇರಿಸಿತ್ತು. ಆದರೆ ಚಿರತೆ ಈವರೆಗೆ ಬೋನಿಗೆ ಬಿದ್ದಿಲ್ಲ. ಈಗ ಮತ್ತೆ ಪಟ್ಟಣ ಸಮೀಪದ ಆಮದಿಹಾಳ, ಹೂನೂರ, ಗೀಗ್ಯಾನಾಯ್ಕ ತಾಂಡಾ, ಕೆಂಪು ತಿಪ್ಪಣ್ಣನ ತಾಂಡಾ ಸೇರಿದಂತೆ ಅಲ್ಲಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎನ್ನಲಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಮಂಗಳವಾರ ಸಂಜೆ ಹುನೂರು ಗ್ರಾಮದಲ್ಲಿ ಎರಡು ಚಿರತೆಗಳು ಕಂಡುಬಂದಿವೆ.
ಗ್ರಾಮದ ಸಂಗಪ್ಪ ಚಲುವಾದಿ ಮತ್ತು ಇಬ್ಬರು ದಾರಿ ಹೋಕರು ಈ ಚಿರತೆಗಳ ಮೇಲೆ ಕಲ್ಲು ಎಸೆದಿದ್ದರಿಂದ ಅವು ಕಲ್ಲು ಕ್ವಾರಿ ಕಡೆ ಹೋದವು ಎನ್ನಲಾಗಿದೆ. ಆದಾಪುರು ಗ್ರಾಮದಲ್ಲಿ ಸೋಮವಾರ ರಾಜಶೇಖರಪ್ಪ ಪಾಗದ ಎಂಬುವರ ಎತ್ತಿನ ಮೇಲೆ ಚಿರತೆ ದಾಳಿ ಮಾಡಿದ್ದು ಎತ್ತು ಗಾಯಗೊಂಡಿದೆ ಗ್ರಾಮಸ್ಥರು ತಿಳಿಸಿದ್ದಾರೆ.
ಎರಡು ವಾರದ ಹಿಂದೆ ಆದಾಪುರ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಈಗ ಅದೇ ಗ್ರಾಮದಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಐದು ದಿನಗಳ ಹಿಂದೆ ಆದಾಪುರ ಗ್ರಾಮದ ಬಳಿ ಚಿರತೆ ಮೇಕೆಯನ್ನು ಬಲಿ ಪಡೆದಿದೆ. ಚಿರತೆ ದಿನನಿತ್ಯ 10ರಿಂದ 15 ಕಿ.ಮೀ.ಸಂಚಾರ ಮಾಡುತ್ತಿದೆ. ಸೋಮವಾರ ಅರಣ್ಯ ಇಲಾಖೆ ಅಧಿಕಾರಿಗಳು ಆಶಿಹಾಳ ಗ್ರಾಮದ ಪಕ್ಕದಲ್ಲಿರುವ ಗೀಗ್ಯಾ ನಾಯ್ಕ ತಾಂಡಾ ಬಳಿ ಚಿರತೆಯ ಹೆಜ್ಜೆ ಗುರುತು ಪತ್ತೆ ಹಚ್ಚಿದ್ದಾರೆ.
ಸುಮಾರು ಒಂದು ವಾರದಿಂದ ಆದಾಪುರು ಗ್ರಾಮದಲ್ಲಿ ಬೋನ್ ಇಟ್ಟರೂ ಕೂಡಾ ಬೋನಿಗೆ ಚಿರತೆ ಬಿದ್ದಿಲ್ಲ.
ತಲೆ ಬಿಸಿ: ಸುತ್ತಲಿನ ಗ್ರಾಮಗಳಲ್ಲಿ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸುತ್ತಿರುವ ಚಿರತೆ ಸೆರೆ ಹಿಡಿಯುವುದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆಬಿಸಿಯಾಗಿದೆ. ಚಿರತೆಗೆ ಬೇರೆ ಆಹಾರ ಸಿಗುತ್ತಿದೆ. ಚಿರತೆಗೆ ಹಸಿವು ಆದರೆ, ಆಹಾರ ಸಿಗದಿದ್ದರೆ ಮಾತ್ರ ಬೋನಿನತ್ತ ಧಾವಿಸುತ್ತಿದೆ. ಆದರೆ ಸುತ್ತಲೂ ಗುಡ್ಡ ಇರುವ ಕಾರಣ ಹಂದಿ, ನಾಯಿ, ಕೋಳಿ ಅಲ್ಲದೇ ಇತರೆ ಪ್ರಾಣಿ ಪಕ್ಷಿಗಳು ಚಿರತೆಗೆ ಆಹಾರವಾಗುತ್ತಿವೆ. ಚಿರತೆ ತನ್ನ ಮೂಲ ವಾಸದಿಂದ 15-20 ಕಿ.ಮೀ.ವರೆಗೆ ಕ್ರಮಿಸಿ ಆಹಾರ ಹುಡುಕುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಕಾಂಬಳೆ ತಿಳಿಸಿದ್ದಾರೆ.
ಒತ್ತಾಯ: ಸತತ 15-20 ದಿನಗಳಿಂದ ಆಮದಿಹಾಳ, ಆದಾಪುರ, ಕೋಮಲಾಪುರ, ಹೂನೂರ, ಮಾಕಾಪುರ ಸೇರಿದಂತೆ ಅಲ್ಲಲ್ಲಿ ಚಿರತೆ ಕಾಣಿಸಿಕೊಂಡಿದ್ದರಿಂದ ಜನತೆ ಭಯಭೀತರಾಗಿದ್ದಾರೆ. ಜಿಲ್ಲಾಡಳಿತ ಚಿರತೆಗಳ ಸೆರೆಗೆ ಕ್ರಮ ವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.