Advertisement

ಬಾಡಿದ ಬಾಳೆ-ಪಪ್ಪಾಯಿ ಬೆಳೆ

11:30 AM May 12, 2019 | Naveen |

ಮುದಗಲ್ಲ: ಸಮೀಪದ ಹಡಗಲಿ ತಾಂಡಾ, ದೇಸಾಯಿ ಬೋಗಾಪುರ, ತಲೇಖಾನ, ಛತ್ತರ, ನಾಗಲಾಪುರ, ಯರದೊಡ್ಡಿ ಗ್ರಾಮದ ತೋಟಗಳ ಕೊಳವೆಬಾವಿಗಳಲ್ಲಿ ನೀರಿಲ್ಲದ್ದಕ್ಕೆ ಬಾಳೆ, ಪಪ್ಪಾಯಿ ಹಾಗೂ ದಾಳಿಂಬೆ ಬೆಳೆಗಳು ಒಣಗಿ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.

Advertisement

ಒಣಬೇಸಾಯದಿಂದ ಬೇಸತ್ತ ರೈತರು ಜಮೀನುಗಳಲ್ಲಿ ಕೊಳವೆಬಾವಿ ಕೊರೆಸಿ ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಬಾಳೆ, ಪಪ್ಪಾಯಿ ಬೆಳೆಯಲು ಮುಂದಾಗಿದ್ದರು. ಆದರೆ ಬೇಸಿಗೆಯಲ್ಲಿ ಅಂತರ್ಜಲಮಟ್ಟ ಕುಸಿದ ಕಾರಣ ಭೂಮಿಯಲ್ಲಿ ತೇವಾಂಶ ಕೊರತೆಯಿಂದ ಬೆಳೆಗಳು ಒಣಗಿವೆ.

ಆರಂಭದಲ್ಲಿ ಕೊಳವೆಬಾವಿಯಲ್ಲಿ ನೀರು ಬಿದ್ದಿದ್ದರಿಂದ ಚೆನ್ನಾಗಿ ಹುರುಪಿನಿಂದ ದಾಳಿಂಬೆ, ಬಾಳೆ, ಪಪ್ಪಾಯಿ ಬೆಳೆಯಲು ಮುಂದಾದ ಬೆಳೆಗಾರರು ಮಾದರಿ ರೈತರಾಗುವ ಕನಸು ಕಂಡಿದ್ದರು. ಆದರೆ ಸಮರ್ಪಕ ಮಳೆ ಆಗದ್ದಕ್ಕೆ ಅಂತರ್ಜಲ ಕುಸಿದಿದ್ದರಿಂದ ನೀರು ಹರಿಸಲಾಗದೇ ಇದೀಗ ಬೆಳೆಗಳು ಬಾಡಿವೆ.

ಯರದೊಡ್ಡಿ ಗ್ರಾಮದ ಶಿವಬಸಪ್ಪ ಹನುಮಂತಪ್ಪ ಗುಂಡದ ಎಂಬವರು 3 ಎಕರೆ ಜಮೀನಿನಲ್ಲಿ ಕೊರೆಸಿದ ಕೊಳವೆಬಾವಿಯಲ್ಲಿ ನೀರು ಬಿದ್ದ ಕಾರಣ ಬಾಳೆ ನಾಟಿ ಮಾಡಿದ್ದರು. ಆದರೆ 8 ತಿಂಗಳ ಬಳಿಕ ಅಂತರ್ಜಲ ಕುಸಿದಿದ್ದರಿಂದ ಬಾಳೆ ಬೆಳೆ ಕೈಗೆ ಬರುವ ಮುನ್ನ ಒಣಗಿ ನಿಂತಿದ್ದು ಸುಮಾರು 5 ಲಕ್ಷ ರೂ. ನಷ್ಟವಾಗಿದೆ ಎಂದು ರೈತ ಶಿವಬಸಪ್ಪ ಗುಂಡದ ಅಳಲು ತೋಡಿಕೊಂಡಿದ್ದಾರೆ.

ಹಡಗಲಿ ತಾಂಡಾದ ಜೇಮಲಪ್ಪ ರೂಪಲೆಪ್ಪ, ಅಮರೇಶ ರೂಪಲೆಪ್ಪ ಚವ್ಹಾಣ ತಲಾ 3 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದು ಪ್ರತಿ ವರ್ಷ ನಷ್ಟ ಅನುಭವಿಸುತ್ತಿದ್ದರು. ಹೀಗಾಗಿ ಸಾಂಪ್ರದಾಯಿಕ ಬೆಳೆಗಳಿಗೆ ತಿಲಾಂಜಲಿ ಹಾಡಿದ ಈ ಸಹೋದರರು ಪಪ್ಪಾಯಿ ಮತ್ತು ದಾಳಿಂಬೆ ಮಿಶ್ರ ಬೆಳೆ ಬೆಳೆದಿದ್ದರು. ಆದರೆ ಪಪ್ಪಾಯಿ ಕಟಾವಿಗೆ ಬರುವ ಮುನ್ನ ಕೊಳವೆಬಾವಿಯಲ್ಲಿ ನೀರು ಬತ್ತಿದ ಕಾರಣ ಟ್ಯಾಂಕರ್‌ ಮೂಲಕ ತೋಟಕ್ಕೆ ನೀರು ಹಾಯಿಸಿದರು. ಆದರೂ ಸಮರ್ಪಕ ಫಸಲು ಬಾರದೆ ನಷ್ಠ ಅನುಭವಿಸುವಂತಾಗಿದೆ.

Advertisement

ಯರದೊಡ್ಡಿ ಗ್ರಾಮದ ಗೌರಮ್ಮ ಶಿವಮೂರ್ತಯ್ಯ ಸೊಪ್ಪಿಮಠ ಎಂಬವರು 5 ಎಕರೆ ಜಮೀನಿನಲ್ಲಿ ಎರಡು ಕೊಳವೆಬಾವಿ ಕೊರೆಸಿದ್ದಾರೆ. ಒಂದು ಬೋರಿನಲ್ಲಿ ಅಲ್ಪ ನೀರು ಬಂದಿದ್ದರಿಂದ ಪಪ್ಪಾಯಿ ಬೆಳೆದಿದ್ದಾರೆ. ಪಪ್ಪಾಯಿ ಕಟಾವಿಗೆ ಬಂದಿದೆ. ಆದರೆ ಬೋರ್‌ನಲ್ಲಿ ನೀರು ಕಡಿಮೆಯಾಗಿದ್ದರಿಂದ ಮತ್ತೂಂದು ಬೋರ್‌ ಕೊರೆಸಿ ತೋಟಕ್ಕೆ ನೀರು ಹಾಯಿಸಿದರೂ ನೀರು ಸಾಲುತಿಲ್ಲ, ಬೇರೆ ಕಡೆಯಿಂದ ಟ್ಯಾಂಕರ್‌ ನೀರು ತಂದು ಗಿಡಗಳಿಗೆ ಬಿಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಆಗ್ರಹ: ತೋಟಗಾರಿಕೆ ಬೆಳೆಗಳನ್ನು ನಂಬಿದ ರೈತರು ನೀರಿನ ಕೊರತೆಯಿಂದಾಗಿ ಬೆಳೆ ಒಣಗಿ ನಷ್ಟ ಅನುಭವಿಸುವಂತಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಬೆಳೆ ಹಾನಿಗೊಳಗಾದವರಿಗೆ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಭೀಕರ ಬರ ರೈತರನ್ನು ತಲ್ಲಣಗೊಳಿಸಿದೆ. ತೋಟಗಾರಿಕೆ ಬೆಳೆಗಳಿಗೆ ಜೋತು ಬಿಳುತ್ತಿದ್ದ ರೈತರು ಈ ಬಾರಿ ಅಂತರ್ಜಲ ಮಟ್ಟ ಕುಸಿತದಿಂದ ವಾಣಿಜ್ಯ ಬೆಳೆಗಳಿಗೆ ಮನಸು ಮಾಡುತ್ತಿಲ್ಲ.
••ವಿಶ್ವನಾಥ ಸೊಪ್ಪಿಮಠ,
ಹನಿ ನೀರಾವರಿ ಸಾಮಗ್ರಿ ವಿತರಕ.

ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next