ಮುದಗಲ್ಲ: 14ನೇ ಹಣಕಾಸು ಯೋಜನೆಯಡಿ ಕ್ರಿಯಾ ಯೋಜನೆ ಮಂಜೂರಾತಿ ದೊರೆತ ಬಳಿಕ ಕಾಮಗಾರಿ ನಿರ್ವಹಿಸಿ 6ತಿಂಗಳ ಗತಿಸಿದರೂ ಕಾಮಗಾರಿ ಮೊತ್ತ ಪಾವತಿ ಮಾಡದ್ದಕ್ಕೆ ಗ್ರಾಪಂ ಸದಸ್ಯರು ಗರಂ ಆದ ಪ್ರಸಂಗ ಸಮೀಪದ ತಲೇಖಾನ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಜರುಗಿತು.
ಸಭೆಯಲ್ಲಿ 14ನೇ ಹಣಕಾಸು ಬಗ್ಗೆ ಚರ್ಚೆಯಾಗುತ್ತಿದ್ದಂತೆ ಗ್ರಾಪಂ ಸದಸ್ಯ ಶ್ರೀನಿವಾಸ ಚವ್ಹಾಣ, ಪತ್ಯಪ್ಪ ರಾಠೊಡ, ಮಹಿನುದ್ದೀನ್ ಭೋಗಾಪುರ, ವೆಂಕನಗೌಡ ಹಡಗಲಿ ಮಾತನಾಡಿ, ಕಳೆದ ವರ್ಷದ ಅನುದಾನ ಇದೇ ರೀತಿ ತಡ ಮಾಡಿದ್ದಕ್ಕೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈಗ ಈ ಯೋಜನೆಯಡಿ ಕಾಮಗಾರಿ ನಿರ್ವಹಿಸಿ ಇಂಜನಿಯರ್ ಅಳತೆ ಪುಸ್ತಕದಲ್ಲಿ ಬಿಲ್ ರೆಕಾರ್ಡ್ ಮಾಡಿದ್ದರೂ ಸಂಬಂಧಿಸಿದವರಿಗೆ ಹಣ ಪಾವತಿಯಾಗುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದರು. 14ನೇ ಹಣಕಾಸು ಯೋಜನೆಯಡಿ ಕಾಮಗಾರಿ ಸೂಚಿಸುವ ಅಧಿಕಾರವೇ ಗ್ರಾಪಂ ಸದಸ್ಯರಿಗೆ ಇಲ್ಲದಂತೆ ಮಾಡಲಾಗುತ್ತಿದೆ ಎಂದು ಸದಸ್ಯ ವೆಂಕನಗೌಡ ದೂರಿದರು.
ಪಿಡಿಒ ಮಂಜುಳಾ ಪಂಚಾಳ ಮಾತನಾಡಿ, ಈ ಬಾರಿ 14ನೇ ಹಣಕಾಸು ಯೋಜನೆ ಅನುದಾನ ಬಳಕೆಗೆ (ಪ್ರಿಯಾಸಾಫ್ಟ್ ) ಆನ್‌ಲೈನ್ ಮೂಲಕ ಗುತ್ತಿಗೆದಾರರಿಗೆ ಹಣ ಪಾವತಿಸಬೇಕು. ಆದರೆ ತಂತ್ರಾಂಶದ ತೊಂದರೆಯಿಂದ ಇಡೀ ತಾಲೂಕಿನಲ್ಲಿ ಸಮಸ್ಯೆಯಾಗಿದೆ. ಹಿರಿಯ ಅಧಿಕಾರಿಗಳು ಸರಿಮಾಡಿದಾಗ ಬಿಲ್ ಮೊತ್ತ ಪಾವತಿಸಲು ಅನುಕೂಲವಾಗುತ್ತದೆ ಎಂದರು. ನಂತರ 2018-19ನೇ ಸಾಲಿನ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 18 ಹಾಗೂ ಬಸವ ವಸತಿ ಯೋಜನೆಯಡಿ 20 ಮನೆಗಳ ಗುರಿ ನಿಗದಿ ಮಾಡಲಾಗಿದೆ. ಪಿಎಂವೈ ಮನೆಗಳಿಗೆ ಡಾಟಾ ಸರ್ವೇಯಲ್ಲಿರುವ ಫಲಾನುಭವಿಗಳನ್ನು ಸೂಚಿಸಬೇಕು. ಬಸವ ವಸತಿ ಮನೆಗಳ ಫಲಾನುಭವಿಗಳನ್ನು ಗ್ರಾಮಸಭೆ ಮೂಲಕ ಆಯ್ಕೆ ಮಾಡಬೇಕಿದೆ ಎಂದು ಪಿಡಿಒ ಸಭೆಗೆ ತಿಳಿಸಿದರು.
ಈಗಾಗಲೇ ಗ್ರಾಮಸಭೆ ಮೂಲಕ ಸಾವಿರಕ್ಕೂ ಅಧಿಕ ಫಲಾನುಭವಿಗಳ ಪಟ್ಟಿ ತಯಾರಿಸಲಾಗಿದೆ. ಆದರೆ ಈಗ 20, 30 ಮನೆ ಬಂದರೆ ಯಾರಿಗೆ ನೀಡಲು ಸಾಧ್ಯವಾಗುತ್ತದೆ. ಗ್ರಾಮಸಭೆಯಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಸಾಕು, ಮನೆಗಳನ್ನು ನೀಡಲಾಗುತ್ತದೆ ಎಂದು ಜನರಿಗೆ ಹೇಳಿದ್ದಿರಿ. ಆದರೆ ಈಗ 20 ಮನೆಗಳನ್ನಿಟ್ಟು ಗ್ರಾಮಸಭೆಗೆ ಹೋದರೆ ಜನರಿಗೆ ಏನು ಹೇಳುವುದು ಎಂದು ಸದಸ್ಯ ಶ್ರೀನಿವಾಸ, ಮಹಿನುದ್ದೀನ್ ಪ್ರಶ್ನಿಸಿದರು. ನಂತರ ಚರ್ಚಿಸಿ ವಾರ್ಡ್‌ವಾರು ಮನೆಗಳನ್ನು ನೀಡಲು ತೀರ್ಮಾನಿಸಲಾಯಿತು.
ಕುಡಿಯುವ ನೀರು: ನಿರುಪಾದೇಶ್ವರ ನಗರದಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಪೈಪ್‌ಲೈನ್ ಮಾಡಿ 4 ತಿಂಗಳು ಗತಿಸಿದರೂ ಕಾಮಗಾರಿ ನಿರ್ವಹಿಸಿದವರಿಗೆ ಹಣ ನೀಡಿಲ್ಲ. 4 ಕಿ.ಮೀ.ದೂರದಲ್ಲಿ ಕೊಳವೆಬಾವಿ ಕೊರೆಸಿ, ಪೈಪ್‌ಲೈನ್ ಮೂಲಕ ನೀರು ನೀಡಲು ಮುಂದಾಗಿದ್ದಿರಿ. ಇದರಿಂದ ತಾಂಡಾದ ಜನತೆಗೆ ಪ್ರಯೋಜನವಿಲ್ಲ, 10 ಲಕ್ಷ ಖರ್ಚು ಮಾಡುವ ಬದಲು 1ಲಕ್ಷ ಖರ್ಚು ಮಾಡಿದರೆ ಸಾಕು ನೀರು ಸಿಗುತ್ತದೆ. ಈ ಕಾಮಗಾರಿ ಬಗ್ಗೆ ನಮ್ಮ ತಕರಾರಿದೆ ಎಂದು ಸದಸ್ಯ ಶ್ರೀನಿವಾಸ ಚವ್ಹಾಣ ಆಕ್ಷೇಪ ವ್ಯಕ್ತಪಡಿಸಿದರು.
ಬೇಸಿಗೆಯಲ್ಲಿ ರಾಮಪ್ಪನ ತಾಂಡಾ, ಹಡಗಲಿ, ಸೋಂಪುರ ತಾಂಡಾ, ರೂಪಚಂದ್ರಪ್ಪನ ತೋಟ, ಯರದೊಡ್ಡಿ ತಾಂಡಾಗಳಿಗೆ ಖಾಸಗಿ ವ್ಯಕ್ತಿಗಳಿಂದ ನೀರು ಪಡೆದು ನೀರಿನ ಸಮಸ್ಯೆ ನೀಗಿಸಲಾಗಿತು.್ತ ಆದರೆ ಈಗ ಖಾಸಗಿ ವ್ಯಕ್ತಿಗಳು ಮುಂಗಾರು ಹಂಗಾಮು ಆರಂಭವಾಗಿರುವುದರಿಂದ ನಮಗೆ ನೀರು ನೀಡಲು ಸಾಧ್ಯವಾಗುವುದಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದರು.
ವಿದ್ಯುತ್ ಸಮಸ್ಯೆ, ನಿರಂತರ ಜ್ಯೋತಿ ಯೋಜನೆ, ಅಕ್ರಮವಾಗಿ ನಳ ಪಡೆದವರ ಬಗ್ಗೆ, ನೀರಗಂಟಿ ಹಾಗೂ ಉದ್ಯೋಗ ಖಾತ್ರಿ, ಸಸಿ ನಡುವ ವಿಷಯ ಕುರಿತು ಚರ್ಚಿಸಲಾಯಿತು. ಗ್ರಾಪಂ ಅಧ್ಯಕ್ಷೆ ಸರೋಜಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶೇಷಪ್ಪ ಗುಡಿಹಾಳ, ಸಂತೋಷ ಕಮಂಡಲದಿನ್ನಿ, ಗ್ಯಾನಪ್ಪ ರಾಠೊಡ, ಪೀಕೆಪ್ಪ ನಾಯ್ಕ, ಹನುಮಂತಪ್ಪ ಬಗ್ಗಲಗುಡ್ಡ, ಕಮಲಮ್ಮ ತಿರುಪತಿ, ಪ್ರತಿಮಾ ತಿಪ್ಪಣ್ಣ, ಶ್ರೀದೇವಿ ಬಾಕ್ಲಿ ಇತರರು ಇದ್ದರು.