ಮುದಗಲ್ಲ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಇತ್ತೀಚೆಗೆ ಸುರಿದ ಮಳೆಗೆ ಸಜ್ಜೆ ಬೆಳೆ ಹಾಳಾಗಿದ್ದು, ರೈತರು ಕಂಗಾಲಾಗಿದ್ದಾರೆ. ಈ ಬಾರಿ ಮುಂಗಾರು ಮಳೆ ತಡವಾಗಿ ಆರಂಭವಾದರೂ, ಆಗಾಗ ಸುರಿದ ಅಲ್ಪಸ್ವಲ್ಪ ಮಳೆಗೆ ರೈತರು ಸಜ್ಜೆ ಬಿತ್ತಿದ್ದರು. ಫಸಲು ಉತ್ತಮವಾಗಿ ಬಂದಿತ್ತು. ಆದರೆ ರೈತರು ಕಟಾವು ಮಾಡಿ ಗೂಡು ಹಾಕುವ ಹಂತದಲ್ಲಿ ಮಳೆ ಸುರಿದ ಪರಿಣಾಮ ಮಳೆ ನೀರಿಗೆ ಸಜ್ಜೆ ತೋಯ್ದು ಹಾಳಾಗಿದೆ.
ಕಟಾವಿಗೆ ಬಂದ ಸಜ್ಜೆ ತನೆ ಸತತ ಮಳೆಗೆ ಕಪ್ಪಗಾದರೇ, ಕಟಾವು ಮಾಡಿ ನೆಲಕ್ಕೆ ಹಾಕಿದ ಸಜ್ಜೆ ತನೆ ಮೊಳಕೆಯೊಡೆದಿದೆ. ಜಾನುವಾರುಗಳಿಗೆ ಆಹಾರವಾಗಬೇಕಾದ ಸೊಪು ಕಪ್ಪಾಗಿದ್ದು, ಜಾನುವಾರುಗಳ ಉಪಯೋಗಕ್ಕೆ ಬಾರದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಸಜ್ಜೆ ಬಿತ್ತನೆಯಾದಾಗಿನಿಂದ ಹಸಿ ಮಳೆಯಾಗದೇ ರೈತರು ಕಣ್ಣೀರು ಹಾಕುವಂತಾಗಿತ್ತು. ಅರೆಬರೆ ಹಸಿಯಲ್ಲಿ ಬಿತ್ತನೆ ಮಾಡಿದ ಸಜ್ಜೆ ಬೆಳೆಯನ್ನು ಕಟಾವು ಮಾಡಿ ಕಾಳು, ಮೇವು ಜೋಪಾನ ಮಾಡಬೇಕು ಎನ್ನುವಷ್ಟರಲ್ಲಿ ವರುಣನ ಅಟ್ಟಹಾಸಕ್ಕೆ ರೈತರ ಬಾಳು ಹಾಳಾಗಿದೆ.
ಬಾಬಾಕಟ್ಟೆ, ಜಕ್ಕರಮಡು, ಕನ್ನಾಳ, ಹಡಗಲಿ, ವೇಣ್ಯಪ್ಪನ ತಾಂಡಾ, ಕಿಲಾರಹಟ್ಟಿ, ತೊಡಕಿ, ಹೂನೂರ, ಮಾಕಾಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕಟಾವು ಮಾಡಿದ ಸಜ್ಜೆ ಬೆಳೆ ಮಂಗಳವಾರ, ಬುಧವಾರ ಮತ್ತು ಗುರುವಾರ ಸುರಿದ ಮಳೆಗೆ ತೋಯ್ದು ಹಾಳಾಗಿದೆ.
ಕೃಷಿ ಇಲಾಖೆ ಮಾಹಿತಿ ಪ್ರಕಾರ 41,805 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿತ್ತು. ಇದರಲ್ಲಿ ಸಜ್ಜೆ 19,416 ಹೆಕ್ಟೇರ್ ಪ್ರದೇಶ ಬಿತ್ತನೆ ಆಗಿದ್ದರೆ, ತೊಗರಿ 17,772 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.