Advertisement

ಭರವಸೆ ಮೂಡಿಸಿದ ಸಜ್ಜೆ-ತೊಗರಿ

12:43 PM Sep 09, 2019 | Naveen |

ಮುದಗಲ್ಲ: ಈ ಭಾಗದಲ್ಲಿ ಮುಂಗಾರು ಮಳೆ ವಿಳಂಬದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದ ರೈತರಿಗೆ ಸಜ್ಜೆ, ತೊಗರಿ ಬೆಳೆ ಕೈ ಹಿಡಿಯುವ ಲಕ್ಷಣ ತೋರಿದ್ದು, ಸಮಾಧಾನ ಮೂಡಿಸಿದೆ.

Advertisement

ಮುಂಗಾರು ಆರಂಭದಲ್ಲಿ ಅಸಮರ್ಪಕ ಮಳೆಗೆ ಬಿತ್ತನೆ ಕ್ಷೇತ್ರ ವಿಸ್ತಾರವಾಗಿರಲಿಲ್ಲ, ನಾಗರಹಾಳ, ಕಾಚಾಪುರ, ಬಯ್ನಾಪುರ, ಆಮದಿಹಾಳ, ಜಕ್ಕರಮಡು, ಮಾರಲದಿನ್ನಿ, ಅಡವಿಬಾವಿ ಮಸ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೂನ್‌ ತಿಂಗಳಲ್ಲಿ ಸ್ವಲ್ಪ ಮಟ್ಟಿಗೆ ಉತ್ತಮ ಮಳೆ ಸುರಿದಿತ್ತು. ಆ ಭಾಗದಲ್ಲಿ ರೈತರು ಬಿತ್ತನೆ ನಡೆಸಿದ್ದರು. ಉಳಿದಂತೆ ಬನ್ನಿಗೋಳ, ಹೂನೂರ, ನಾಗಲಾಪುರ, ಕನ್ನಾಳ, ತಲೇಖಾನ, ಮಟ್ಟೂರ ಸೇರಿದಂತೆ ವಿವಿಧೆಡೆ ಮಳೆ ಕೊರತೆ ಆಗಿತ್ತು. ಆದರೆ ಜುಲೈ ತಿಂಗಳಲ್ಲಿ ಅಲ್ಪ ಮಳೆ ಸುರಿಯಿತು. ಬದಲಾದ ಪರಿಸ್ಥಿತಿಗೆ ಬಹುತೇಕ ರೈತರು ತೊಗರಿ, ಸಜ್ಜೆ ಬಿತ್ತನೆ ಮಾಡಿದ್ದರು. ಇದೀಗ ರೈತರ ನಿರೀಕ್ಷೆಯಂತೆ ಬೆಳೆ ಹಸಿರಿನಿಂದ ನಳನಳಿಸುತ್ತಿದೆ. ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಸುರಿದ ಮಳೆ ರೈತರ ಆತಂಕ ದೂರ ಮಾಡಿದೆ. ಸಜ್ಜೆ ಕಾಳು ಕಟ್ಟುವ ಹಂತದಲ್ಲಿದ್ದರೆ, ತೊಗರಿ ಹೂವು ಬಿಡುವ ಹಂತದಲ್ಲಿದೆ. ಆಗಾಗ ಊದರುವ ಜಿಟಿಜಿಟಿ ಹನಿಗೆ ತೊಗರಿ ಮತ್ತು ಸಜ್ಜೆ ಬೆಳೆ ಕಳೆ ಕಟ್ಟಿದೆ.

ಬಿತ್ತನೆ ಪ್ರದೇಶ: ಕೃಷಿ ಇಲಾಖೆ ಮಾಹಿತಿ ಪ್ರಕಾರ 41,805 ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿತ್ತು. ಇದರಲ್ಲಿ 19,416 ಹೆಕ್ಟೇರ್‌ನಲ್ಲಿ ಸಜ್ಜೆ, 17,772 ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆ ಆಗಿದೆ.

ವಾಡಿಕೆ ಮಳೆ: 2019-20ರ ಜನವರಿಯಿಂದ ಸೆ.7ರವರೆಗೆ ವಾಡಿಕೆಯಂತೆ 345 ಎಂ.ಎಂ ಮಳೆಯಾಗಬೇಕಿತ್ತು ಆದರೆ 245 ಎಂ.ಎಂ ಮಳೆಯಾಗಿದೆ. ಶೇ.27 ಮಳೆ ಕೊರತೆ ಆಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾಂತೇಶ ಹವಾಲ್ದಾರ ತಿಳಿಸಿದ್ದಾರೆ.

ಕೆಲವು ವರ್ಷಗಳಿಂದ ಮುಂಗಾರು ಹಂಗಾಮಿಗೆ ಸೂರ್ಯಕಾಂತಿ, ಎಳ್ಳು, ಹೆಸರು ಬೆಳೆಯುಯತ್ತಿದ್ದರು. ಮಳೆ ಕೊರತೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಸೂರ್ಯಕಾಂತಿಗೆ ರೋಗಬಾಧೆ ಕಾಡಿದ ಹಿನ್ನೆಲೆ ಪ್ರಸ್ತಕ ವರ್ಷ ತೊಗರಿ, ಸಜ್ಜೆ ಬೆಳೆಯಲು ರೈತರು ಮುಂದಾಗಿದ್ದಾರೆ. ಸಜ್ಜೆ ಬೆಳೆ ಬಂಪರ್‌ ವರ ನೀಡಿದೆ ಎನ್ನುತ್ತಾರೆ ರೈತರು.

Advertisement
Advertisement

Udayavani is now on Telegram. Click here to join our channel and stay updated with the latest news.

Next