ಮುದಗಲ್ಲ: ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ 3.37 ಕೋಟಿ ಅನುದಾನದಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಕಳೆದ ಮಾರ್ಚ್ ತಿಂಗಳಲ್ಲಿ ಶಾಸಕ ಡಿ.ಎಸ್. ಹೂಲಗೇರಿ ಭೂಮಿಪೂಜೆ ನೆರವೇರಿಸಿದ್ದರು. ಆದರೆ ಅಧಿಕಾರಿಗಳು ಈವರೆಗೆ ಕಾಮಗಾರಿ ಆರಂಭಿಸದ್ದರಿಂದ ಇದು ಕೇವಲ ಭೂಮಿಪೂಜೆಗೆ ಸೀಮಿತವಾದಂತಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಗಣೇಶ ಕೆಫೆ ಮುಂದಿನ ಸಿಸಿ ರಸ್ತೆ, ರಾಯಚೂರು-ಬೆಳಗಾವಿ ಹೆದ್ದಾರಿಯಿಂದ ಸಣ್ಣಬಾಳಪ್ಪ ಅಂಗಡಿವರೆಗೆ ಸಿಸಿ ರಸ್ತೆ, ಚರಂಡಿ ನಿರ್ಮಿಸುವುದು, ಕರಿಗಾರ ಓಣಿಯಲ್ಲಿ ಚರಂಡಿ, ಸಿಸಿ ರಸ್ತೆ ನಿರ್ಮಾಣ ಸೇರಿ ಒಟ್ಟು 8 ರಸ್ತೆಗಳು ಮತ್ತು ಚರಂಡಿ ಕಾಮಗಾರಿಗಳಿಗೆ ಶಾಸಕ ಡಿ.ಎಸ್.ಹೂಲಗೇರಿ ಚಾಲನೆ ನೀಡಿ ನಾಲ್ಕು ತಿಂಗಳು ಗತಿಸಿದರೂ ಕಾಮಗಾರಿ ಆರಂಭವಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಗಣೇಶ ಕೆಫೆ ಮುಂಭಾಗದ ರಸ್ತೆ ಸಂಪೂರ್ಣ ಹದೆಗೆಟ್ಟಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಜನಸಂದಣಿಯ ಪ್ರಮುಖ ರಸ್ತೆಯಾದ ಪುರಸಭೆ ಪಕ್ಕದಲ್ಲಿ ಗುಂಡಿ ಬಿದ್ದು ಮಳೆ ನೀರು ಸಂಗ್ರಹವಾಗಿದೆ. ಲಿಂಗಸುಗೂರ ಕೂಡು ರಸ್ತೆಯಲ್ಲಿ ಚರಂಡಿ ನೀರು ರಸ್ತೆಗೆ ಹರಿಯುತ್ತಿದ್ದು, ಪಾದಾಚಾರಿಗಳು, ವಾಹನ ಸವಾರರು ಸಮಸ್ಯೆ ಅನುಭವಿಸುವಂತಾಗಿದೆ. ನೀರು ನಿಲ್ಲದಂತೆ ಕ್ರಮ ವಹಿಸುವಂತೆ ಪುರಸಭೆಗೆ ಕೋರಿದರೆ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿದೆ. ಗುತ್ತಿಗೆದಾರರು ರಸ್ತೆ ನಿರ್ಮಿಸುತ್ತಾರೆ ಎಂದು ಹೇಳಿ ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ. ಆದರೆ ಇಲ್ಲಿಗೆ ಸಂಚರಿಸುವ ನೂರಾರು ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಹೀಗೆ ಹಲವು ರಸ್ತೆ, ಚರಂಡಿ ಕಾಮಗಾರಿ ಆರಂಭವಾಗದ್ದರಿಂದ ಪಟ್ಟಣ ಅಭಿವೃದ್ಧಿಗೆ ಹಿನ್ನಡೆ ಆಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಇತ್ತಕಡೆ ಗಮನಹರಿಸಿ ಕಾಮಗಾರಿ ಶೀಘ್ರ ಆರಂಭಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಟ್ಟಣಕ್ಕೆ ಮಂಜೂರಾದ ನಗರೋತ್ಥಾನ ಯೋಜನೆಯಡಿ ಸುಮಾರು 90 ಲಕ್ಷ ರೂ.ಗಳಲ್ಲಿ ಕಿಲ್ಲಾದಲ್ಲಿ ಶಾಯಿಲ್ ಮನೆಯಿಂದ ಗಂಗಾಧರ ಭಾವಿವರೆಗೆ ಸಿಸಿ ರಸ್ತೆ, ಹುಸೇನ್ ಆಲಂ ದರ್ಗಾದಿಂದ ರಾಯರಮಠದವರೆಗೆ ಸಿಸಿ ರಸ್ತೆ, ವಾರ್ಡ್ ನಂ. 22ರಲ್ಲಿ ಸಿಸಿ ರಸ್ತೆ ಸೇರಿದಂತೆ ಒಟ್ಟು 3 ಸಿಸಿ ರಸ್ತೆಗಳು ಪೂರ್ಣಗೊಂಡಿವೆ. ಗುತ್ತಿಗೆದಾರರು ಕಾಮಗಾರಿ ನಿರ್ವಹಿಸುತ್ತಿದ್ದಾರೆ.
•
ನರಸಿಂಹಮೂರ್ತಿ,
ಪುರಸಭೆ ಮುಖ್ಯಾಧಿಕಾರಿ