ದೇವಪ್ಪ ರಾಠೊಡ
ಮುದಗಲ್ಲ: ಗುಡಿಸಲು ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಸರಕಾರ ಬಸವ ವಸತಿ, ಡಾ| ಬಿ.ಆರ್. ಅಂಬೇಡ್ಕರ್ ವಸತಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ಅನೇಕ ವಸತಿ ಯೋಜನೆ ಜಾರಿಗೆ ತಂದಿದೆ. ಗುಡಿಸಲು ವಾಸಿ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಿದೆ. ಆದರೆ ಮನೆ ನಿರ್ಮಿಸಿಕೊಂಡರು ಅನುದಾನ ಬಾರದೇ ಫಲಾನುಭವಿಗಳು ಕಚೇರಿ-ಕಚೇರಿ ಅಲೆದಾಡುವಂತಾಗಿದೆ.
ವಿವಿಧ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ 4 ಹಂತದಲ್ಲಿ ಹಣ ಮಂಜೂರು ಮಾಡಲಾಗುತ್ತದೆ. ಮನೆ ನಿರ್ಮಿಸಿಕೊಂಡು ಎರಡು ವರ್ಷ ಕಳೆದರೂ ಕಂತಿನ ಹಣ ಜಮೆ ಮಾಡಿಲ್ಲ ಎನ್ನಲಾಗಿದೆ.
ಬೆಂಗಳೂರಿನ ರಾಜೀವ ಗಾಂಧಿ ವಸತಿ ನಿಗಮ 2016-17, 2017-18 ಹಾಗೂ 2018-19ನೇ ಸಾಲಿಗೆ ಲಿಂಗಸುಗೂರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಮನೆ ಮಂಜೂರು ಮಾಡಿದೆ. ಡಾ| ಬಿ.ಆರ್.ಅಂಬೇಡ್ಕರ್ ಹಾಗೂ ಬಸವ ವಸತಿ ಯೋಜನೆ ಫಲಾನುಭವಿಗಳು ತಳಪಾಯ ಮತ್ತು ಗೋಡೆ ಹಂತದವರೆಗೆ ಮನೆ ನಿರ್ಮಿಸಿಕೊಂಡಿದ್ದಾರೆ. ನಿಯಮಗಳಂತೆ ಗ್ರಾಪಂ ಅಧಿಕಾರಿಗಳು ಫೋಟೋ ಸೆರೆ ಹಿಡಿದು ಜಿಪಿಎಸ್ ಮಾಡಿದ್ದಾರೆ. ಆದರೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಬಿಡಿಗಾಸು ಅನುದಾನ ಜಮೆ ಆಗಿಲ್ಲ. ಈ ಕುರಿತು ರಾಜೀವ ಗಾಂಧಿ ವಸತಿ ನಿಗಮದ ಉಚಿತ ಕರೆ ಸಂಖ್ಯೆ 08023118888ಗೆ ಕರೆ ಮಾಡಿದರೆ ಸರಕಾರದಲ್ಲಿ ದುಡ್ಡಿಲ್ಲ, ದುಡ್ಡು ಬಂದ ನಂತರ ಕಂತುಗಳನ್ನು ಜಮೆ ಮಾಡುವುದಾಗಿ ಹೇಳುತ್ತಾರೆಂದು ದೇಸಾಯಿ ಭೋಗಾಪುರದ ಫಲಾನುಭವಿ ಶಂಕ್ರಪ್ಪ ಅಳಲು ತೋಡಿಕೊಂಡರು.
ಲಿಂಗಸುಗೂರ ತಾಲೂಕಿಗೆ ಡಾ| ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಡಿ 18,700 ಮನೆ ಮಂಜೂರಾಗಿವೆ. ಇದರಲ್ಲಿ 12000 ಮನೆಗಳ ಕಾಮಗಾರಿ ನಡೆಯುತ್ತಿದ್ದು ಜಿಪಿಎಸ್ ಸೆರೆ ಹಿಡಿಯಲಾಗಿದೆ. ಉಳಿದಂತೆ 6700 ಮನೆಗಳ ಮಾಲೀಕರು ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆಂದು ತಾಪಂ ಮೂಲಗಳಿಂದ ತಿಳಿದು ಬಂದಿದೆ. ಬಸವ ವಸತಿ ಯೋಜನೆ ಕೂಡ ಇದಕ್ಕೆ ಹೊರತಲ್ಲ.
ಸಾಲದ ಹೊರೆ: ವಸತಿ ಫಲಾನುಭವಿಗಳು ಸಾಲ ಮಾಡಿ ಸಿಮೆಂಟ್, ಮರಳು, ಇಟ್ಟಿಗೆ, ಕಿಟಕಿ, ಬಾಗಿಲು ತಂದು ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಕೆಲ ಫಲಾನುಭವಿಗಳು ಮನೆ ನಿರ್ಮಿಸಿಕೊಂಡು ವರ್ಷಗಳೇ ಗತಿಸಿದರೂ ಅವರಿಗೆ ಅನುದಾನ ಜಮೆ ಆಗಿಲ್ಲ. ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಕೇಳಿದರೆ ರಾಜೀವಗಾಂಧಿ ವಸತಿ ನಿಗಮದ ಅಧಿಕಾರಿಗಳಿಗೆ ಕೇಳಿ, ಗ್ರಾಪಂಗೆ ಯಾವುದೇ ಹಣಕಾಸಿನ ಅಧಿಕಾರ ಇಲ್ಲ ಎಂದು ಜಾರಿಕೊಳ್ಳುತ್ತಾರೆ. ಅನುದಾನ ಬಾರದ್ದರಿಂದ ಕೆಲವರ ಮನೆ ಕಾಮಗಾರಿ ಅರ್ಧಕ್ಕೆ ನಿಂತಿವೆ. ಹೀಗಾಗಿ ಫಲಾನುಭವಿಗಳು ದಿಕ್ಕು ತೋಚದಂತಾಗಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಮನೆ ನಿರ್ಮಿಸಿಕೊಂಡವರಿಗೆ ಅನುದಾನ ಬಿಡುಗಡೆಮಾಡಬೇಕು ಎಂದು ತಲೇಖಾನ ಗ್ರಾಪಂ ಮಾಜಿ ಅಧ್ಯಕ್ಷೆ ಉಮ್ಮವ್ವ ರಾಠೊಡ ಆಗ್ರಹಿಸಿದ್ದಾರೆ.