ಬೆಂಗಳೂರು: ” ಪಾರ್ವತಿ ಅವರು ಸಿಎಂ ಸಿದ್ದರಾಮಯ್ಯ ಅವರ ಪತ್ನಿಯಾದ ಮಾತ್ರಕ್ಕೆ ತನ್ನ ಹಕ್ಕನ್ನು ಕಳೆದುಕೊಳ್ಳಬೇಕಾ? ತನ್ನ ಅಣ್ಣ ಕೊಟ್ಟ ಜಮೀನನ್ನು ಉಳಿಸಿಕೊಂಡು ತನ್ನ ಮಕ್ಕಳ ಭವಿಷ್ಯ ರಕ್ಷಣೆ ಮಾಡಿಕೊಳ್ಳುವುದು ತಪ್ಪಾ?” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸಚಿವ ಸಂಪುಟ ಸಭೆಯ ತೀರ್ಮಾನದ ಬಗ್ಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಸಿಎಂ, ಪಾರ್ವತಿ ಅವರು ಸಾಮಾನ್ಯ ಮಹಿಳೆಯಲ್ಲ,ಅವರು ಮುಖ್ಯಮಂತ್ರಿಗಳ ಧರ್ಮಪತ್ನಿಯಾಗಿದ್ದು, ಈ ಪ್ರಕರಣದಲ್ಲಿ ಸ್ವಜನಪಕ್ಷಪಾತವಾಗಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದರು.
“ಮುಖ್ಯಮಂತ್ರಿಗಳ ಪತ್ನಿಯಾದ ಮಾತ್ರಕ್ಕೆ ತನ್ನ ಹಕ್ಕನ್ನು ಕಳೆದುಕೊಳ್ಳಬೇಕಾ? ತನ್ನ ಅಣ್ಣ ಕೊಟ್ಟ ಜಮೀನನ್ನು ಉಳಿಸಿಕೊಂಡು ತನ್ನ ಮಕ್ಕಳ ಭವಿಷ್ಯ ರಕ್ಷಣೆ ಮಾಡಿಕೊಳ್ಳುವುದು ತಪ್ಪಾ? ಸಿದ್ದರಾಮಯ್ಯ ಅವರು 40 ವರ್ಷಗಳ ರಾಜಕಾರಣ ಮಾಡಿದ್ದು, ಮಂತ್ರಿ, ಉಪಮುಖ್ಯಮಂತ್ರಿಯಾಗಿದ್ದಾರೆ, 7 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಆದರೂ ಅವರ ಪತ್ನಿ ಎಂದಿಗೂ ಸಾರ್ವಜನಿಕವಾಗಿ ಗುರುತಿಸಿಕೊಂಡಿಲ್ಲ. ತಮ್ಮ ಅಧಿಕಾರವನ್ನು ಬಳಸಿಕೊಂಡು ವೇದಿಕೆ ಹಂಚಿಕೊಂಡಿಲ್ಲ. ಅವರಿಗೆ ಅಧಿಕಾರ ಇದ್ದರೂ ಅದನ್ನು ಬಳಸಿಕೊಂಡಿಲ್ಲ. ನಾವು ಅವಕಾಶ ಸಿಕ್ಕಾಗ ನಮ್ಮ ಮನೆಯವರನ್ನು ಕರೆದುಕೊಂಡು ಹೋಗಿದ್ದೇವೆ. ಆದರೆ ಪಾರ್ವತಿ ಅವರು ಎಂದಿಗೂ ಅಧಿಕಾರವನ್ನು ಬಳಸಿಕೊಂಡವರಲ್ಲ. ಈ ವಿಚಾರವಾಗಿ ಆಕೆಯನ್ನು ಪ್ರತಿಯೊಬ್ಬರೂ ಪ್ರಶಂಸಿಸಬೇಕು. ಆಕೆ ತನ್ನ ತವರಿನಿಂದ ಬಂದ ಆಸ್ತಿಯನ್ನು ಉಳಿಸಿಕೊಳ್ಳುವ ಎಲ್ಲಾ ಹಕ್ಕು ಇದೆ” ಎಂದು ತಿಳಿಸಿದರು.
ಇದನ್ನೂ ಓದಿ:CMಗೆ ನೀಡಿರುವ ಶೋಕಾಸ್ ನೋಟಿಸ್ ಹಿಂಪಡೆಯುವಂತೆ ಸಂಪುಟದಿಂದ ರಾಜ್ಯಪಾಲರಿಗೆ ಸಲಹೆ
“ನಮ್ಮ ಮುಖ್ಯಮಂತ್ರಿಗಳ ಧರ್ಮಪತ್ನಿ ಪಾರ್ವತಿ ಅವರ ಸಹೋದರ ಡಿನೋಟಿಫಿಕೇಷನ್ ಆದ ಐದಾರು ವರ್ಷಗಳ ನಂತರ ಖರೀದಿ ಮಾಡಿ ಅದನ್ನು ತವರು ಮನೆಯ ಅರಿಶಿನ ಕುಂಕುಮದ ಕಾಣಿಕೆಯಾಗಿ ದಾನ ಪತ್ರದ ಮೂಲಕ ನೀಡಿದ್ದಾರೆ. ಈ ಜಮೀನನ್ನು ಮುಡಾ ಮರುನೋಟಿಫಿಕೇಶನ್ ಮಾಡದೇ, ಬಳಸಿಕೊಂಡಿದೆ. ಆ ಮೂಲಕ ಈ ಜಾಗವನ್ನು ಮುಡಾ ಒತ್ತುವರಿ ಮಾಡಿಕೊಂಡಿದೆ. ಆಗ ಪಾರ್ವತಿ ಅವರು ಅಕ್ರಮವಾಗಿ ನಮ್ಮ ಜಾಗ ಒತ್ತುವರಿ ಮಾಡಿ ಬೇರೆಯವರಿಗೆ ಹಂಚಿಕೆ ಮಾಡಲಾಗಿದೆ ಹೀಗಾಗಿ ನಮಗೆ ಪರಿಹಾರ ನೀಡಿ ಎಂದು ಕೇಳುತ್ತಾರೆ” ಎಂದರು.