ಬೆಂಗಳೂರು: ಮುಡಾ ಹಗರಣ ಸಂಬಂಧ ಸಿಎಂ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿದ ಬಳಿಕ ರಾಜ್ಯದಲ್ಲಿ ನಡೆದ ಬೆಳವಣಿಗೆ, ರಾಜಕೀಯ ನಾಯಕರ ಹೇಳಿಕೆ, ಗುಪ್ತಚರ ಇಲಾಖೆಯ ಎಚ್ಚರಿಕೆ ವರದಿ ಸಹಿತ ರಾಜ್ಯದ ಕಾನೂನು -ಸುವ್ಯವಸ್ಥೆಗೆ ಸಂಬಂಧಿಸಿ ರಾಜ್ಯಪಾಲರು ರಾಷ್ಟ್ರಪತಿ ಭವನ, ಪ್ರಧಾನಿ ಕಾರ್ಯಾಲಯ ಹಾಗೂ ಕೇಂದ್ರ ಗೃಹ ಸಚಿವಾಲಯಕ್ಕೆ ವಿಶೇಷ ವರದಿ ಕಳುಹಿಸಿದ್ದಾರೆ.
ಇದರೊಂದಿಗೆ ಮುಡಾ ಪ್ರಕರಣ ಇನ್ನೊಂದು ಮಜಲಿಗೆ ಹೊರಳಿಕೊಂಡಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದ ಮಧ್ಯೆ ಸಂಗ್ರಾಮ ಸೃಷ್ಟಿಸುವ ಸಾಧ್ಯತೆ ಇದೆ. 2 ದಿನಗಳ ಹಿಂದಷ್ಟೇ ರಾಜ್ಯಪಾಲರು ಈ ವರದಿಯನ್ನು ರವಾನೆ ಮಾಡಿದ್ದಾರೆ. ಕಾಂಗ್ರೆಸ್ ಎಂಎಲ್‌ಸಿ ಐವನ್ ಡಿ’ಸೋಜಾ ಹೇಳಿಕೆ, ಸಚಿವ ಸಂಪುಟ ಸಹೋದ್ಯೋಗಿಗಳ ಟೀಕೆಯ ಜತೆಗೆ ರಾಜ್ಯಪಾಲರು, “ತಾನು ಬುಲೆಟ್ ಫ್ರೂಪ್ ಕಾರಿನಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂಬ ಗಂಭೀರ ಟಿಪ್ಪಣಿಯನ್ನು ಮಾಡಿದ್ದು, ಕಾನೂನು -ಸುವ್ಯವಸ್ಥೆಯ ಬಗ್ಗೆ ಈಗ ಪ್ರಶ್ನೆ ಎತ್ತಿದ್ದಾರೆ.
ಸಾಮಾನ್ಯವಾಗಿ ರಾಜಭವನದಿಂದ ಕೇಂದ್ರ ಗೃಹ ಸಚಿವಾಲಯಕ್ಕೆ ಮಾಸಿಕ ವರದಿ ಕಳುಹಿಸಿ ಕೊಡಲಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಮಾತ್ರ ರಾಜಭವನ ವಿಶೇಷ ವರದಿಯನ್ನು ರಾಷ್ಟ್ರಪತಿ, ಪ್ರಧಾನಿ ಕಚೇರಿ ಹಾಗೂ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸುತ್ತದೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿದ ಬಳಿಕ ರಾಜ್ಯಪಾಲರ ವಿರುದ್ಧ ಆಡಳಿತ ಪಕ್ಷದ ನಾಯಕರ ಹೇಳಿಕೆಗಳು, ಪತ್ರಿಕಾಗೋಷ್ಠಿಗಳು, ಸಚಿವ ಸಂಪುಟ ಸಭೆ ನಿರ್ಣಯ, ಬಾಂಗ್ಲಾ ಮಾದರಿ ಹೋರಾಟದ ಎಚ್ಚರಿಕೆ, ಗುಪ್ತಚರ ಇಲಾಖೆ ಸೂಚನೆಯ ಬಳಿಕ ಭದ್ರತೆ ಹೆಚ್ಚಳ, ಅಭಿಯೋಜನೆ ವಿಷಯದಲ್ಲಿ ಸರಕಾರದ ನಿಲುವು, ಮುಡಾ ಹಗರಣದ ಮಾಹಿತಿಯನ್ನು ದಾಖಲೆ ಸಹಿತ ರಾಷ್ಟ್ರಪತಿಯವರಿಗೆ ವರದಿ ಮಾಡಲಾಗಿದೆ. ಈ ವರದಿಯ ಒಂದು ಪ್ರತಿಯನ್ನು ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರಿಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಇಂದು ರಾಜ್ಯ ಬಿಜೆಪಿ
ನಾಯಕರು ದಿಲ್ಲಿಗೆ!
ಬೆಂಗಳೂರು: ರಾಜ್ಯ ಬಿಜೆಪಿ ನಾಯಕರು ಈಗ ಮತ್ತೆ ವರಿಷ್ಠರ ಭೇಟಿಗಾಗಿ ಮಂಗಳವಾರ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕರಾದ ಅಶೋಕ್, ಛಲವಾದಿ ನಾರಾಯಣಸ್ವಾಮಿ, ಪಿ.ಸಿ. ಮೋಹನ್, ನಂದೀಶ್ ರೆಡ್ಡಿ ವರಿಷ್ಠರೊಂದಿಗೆ ಸಂಘಟನಾತ್ಮಕ ವಿಚಾರ ಚರ್ಚಿಸಲಿದ್ದಾರೆ ಎನ್ನಲಾಗಿದೆ. ಆದರೆ, ರಾಜ್ಯದಲ್ಲಿ ತುರುಸಿನ ರಾಜಕೀಯ ವಿದ್ಯ ಮಾನ ನಡೆಯುತ್ತಿರುವಾಗಲೇ ಇವರ ದಿಲ್ಲಿ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.