ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಖಡಕ್ ನುಡಿ. ದಿನೇ ದಿನೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿರುವ ಮುಡಾ ಪ್ರಕರಣ ಲೋಕಾಯುಕ್ತ ತನಿಖೆಗೆ ನ್ಯಾಯಾಲಯದಿಂದ ಶಿಫಾರಸುಗೊಂಡಿದ್ದು, ಎಫ್ಐಆರ್ ದಾಖಲಾದರೂ ರಾಜೀನಾಮೆ ಕೊಡುವುದಿಲ್ಲ ಎಂದು ಸಿದ್ದರಾಮಯ್ಯ ಪಟ್ಟುಹಿಡಿದ್ದಾರೆ.
Advertisement
ಬುಧವಾರ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶ ಹೊರಬೀಳುತ್ತಿದ್ದಂತೆ ಆದೇಶ ಪ್ರತಿಯನ್ನು ಅವಲೋಕಿಸಿ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದರು. ಅನಂತರ ಕೇರಳಕ್ಕೆ ತೆರಳಿದ್ದ ಅವರು ಕಾರ್ಯಕ್ರಮವೊಂದರಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ರಾತ್ರಿ ಬೆಂಗಳೂರಿಗೆ ವಾಪಸಾದರು. ಗುರುವಾರ ಬೆಳಗ್ಗೆ ಕಾನೂನು ಸಚಿವ ಎಚ್.ಕೆ. ಪಾಟೀಲ್, ಕಾನೂನು ಸಲಹೆಗಾರ ಪೊನ್ನಣ್ಣ, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸೇರಿದಂತೆ ಹಲವರೊಂದಿಗೆ ಸಮಾಲೋಚನೆ ನಡೆಸಿದರು. ಮಧ್ಯಾಹ್ನ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ. ಏಕೆಂದರೆ ಈ ಪ್ರಕರಣದಲ್ಲಿ ನಾನೇನೂ ತಪ್ಪು ಮಾಡಿಲ್ಲ ಎಂದರು.
ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ ಮೋದಿ ವಿರುದ್ಧ ಎಫ್ಐಆರ್ ಆಗಿತ್ತಲ್ಲಾ? ನೂರಾರು ಜನ ಸತ್ತಿದ್ದರಲ್ಲಾ? ಆಗ ಅವರು ರಾಜೀನಾಮೆ ಕೊಟ್ಟಿದ್ದರೇ? ಈಗ ಪ್ರಧಾನಿ ನರೇಂದ್ರ ಮೋದಿ ಸರಕಾರದಲ್ಲಿ ಮಂತ್ರಿಯಾಗಿದ್ದಾರಲ್ಲ ಎಚ್.ಡಿ. ಕುಮಾರಸ್ವಾಮಿ, ಅವರೂ ಜಾಮೀನಿನ ಮೇಲಿದ್ದಾರೆ. ಕುಮಾರಸ್ವಾಮಿ ಯಾರ ಮಂತ್ರಿಮಂಡಲದಲ್ಲಿದ್ದಾರೆ? ಪ್ರಧಾನಿ ಯಾರು? ಯಾವ ಪಕ್ಷದ ಸರಕಾರ ಇದೆ? ಕುಮಾರಸ್ವಾಮಿ ರಾಜೀನಾಮೆ ಕೊಟ್ಟಿದ್ದಾರೆಯೇ? ಅವರು ಕೊಡಬೇಕಲ್ಲವೇ? ಹಾಗಿದ್ದರೆ ಅವರಿಗೆ ಮುಜುಗರ ಆಗುವುದಿಲ್ಲವೇ? ನಾನೇನೂ ತಪ್ಪು ಮಾಡಿಲ್ಲ. ರಾಜೀನಾಮೆ ಕೊಡುವ ಅಗತ್ಯವಿಲ್ಲ. ಕಾನೂನಾತ್ಮಕವಾಗಿಯೇ ಹೋರಾಟ ನಡೆಸುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಕಾಂಗ್ರೆಸ್ ಅಧ್ಯಕ್ಷನಾಗಿ ನಾನು ಹೇಳುತ್ತಿದ್ದೇನೆ: ಡಿಕೆಶಿ
ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಾನು ಹೇಳುತ್ತಿದ್ದೇನೆ, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಸ್ತಾವನೆ ಪಕ್ಷದ ಮುಂದಿಲ್ಲ. ನಮ್ಮ ಗ್ಯಾರಂಟಿ ಅನುಷ್ಠಾನವನ್ನು ಬಿಜೆಪಿಯವರಿಂದ ಸಹಿಸಲಾಗುತ್ತಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ದೊಡ್ಡ ರಾಜ್ಯ ಕರ್ನಾಟಕ. ಹೀಗಾಗಿ ಸಹಿಸಲಾಗುತ್ತಿಲ್ಲ. ಷಡ್ಯಂತ್ರಗಳನ್ನು ನಡೆಸುತ್ತಿದ್ದಾರೆ. ಹಳ್ಳಿಯಿಂದ ದಿಲ್ಲಿಯವರೆಗೆ ಪಕ್ಷ ಹಾಗೂ ಜನರು ಸಿಎಂ ಪರವಾಗಿದ್ದೇವೆ. ಕೇಂದ್ರ ಸರ್ಕಾರದಲ್ಲಿರುವ ಎಷ್ಟು ಜನರ ಮೇಲೆ ಆರೋಪಗಳಿಲ್ಲ? ಮೊದಲು ಅವರೆಲ್ಲಾ ರಾಜೀನಾಮೆ ಕೊಡಲಿ, ಆಮೇಲೆ ನೋಡೋಣ ಎಂದಿದ್ದಾರೆ.
Related Articles
Advertisement
“ಕುಮಾರಸ್ವಾಮಿ ವಿರುದ್ಧವೂ ಆರೋಪಗಳಿವೆ. ಅವರೂ ಜಾಮೀನಿನ ಮೇಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧವೂ ಆರೋಪಗಳಿವೆ. ಚುನಾವಣೆ ಬಾಂಡ್ ವಿಚಾರದಲ್ಲಿ ಇಡೀ ಕೇಂದ್ರ ಸರಕಾರದ ವಿರುದ್ಧವೇ ಆಪಾದನೆಗಳಿವೆ. ಹಾಗೆ ನೋಡಿದರೆ ಇಡೀ ಕೇಂದ್ರ ಸರಕಾರದ ಸಂಪುಟದಲ್ಲಿರುವ ಎಲ್ಲ ಸಚಿವರೂ ರಾಜೀನಾಮೆ ಕೊಡಬೇಕು. ಕೊಟ್ಟಿದ್ದಾರೆಯೇ?” – ಸಂತೋಷ್ ಲಾಡ್, ಕಾರ್ಮಿಕ ಸಚಿವ