Advertisement

MUDA Scam: ನಿವೇಶನ ಹಿಂಪಡೆದ ಮುಡಾ ಆಯುಕ್ತರ ಬಂಧಿಸಿ: ಎಚ್‌.ಡಿ.ಕುಮಾರಸ್ವಾಮಿ

03:08 AM Oct 03, 2024 | Team Udayavani |

ಬೆಂಗಳೂರು: ಮೈಸೂರು ಮಹಾನಗರ ಅಭಿವೃದ್ಧಿ ಪಾಲಿಕೆ (ಮುಡಾ) ಅಕ್ರಮಕ್ಕೆ ಸಂಬಂಧಿಸಿದಂತೆ ಸಾಕ್ಷ್ಯನಾಶ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಹುನ್ನಾರ ನಡೆಯುತ್ತಿದ್ದು ನ್ಯಾಯಾಲಯಗಳ ಆದೇಶ ಉಲ್ಲಂಘಿಸಿ ಮುಖ್ಯಮಂತ್ರಿ ಅವರ ಪತ್ನಿ ಅವರಿಂದ ನಿವೇಶನಗಳನ್ನು ವಾಪಸ್‌ ಪಡೆದಿರುವ ಮುಡಾ ಆಯುಕ್ತರನ್ನು ಕೂಡಲೇ ಬಂಧಿಸಬೇಕು ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಹಗರಣವನ್ನು ಮುಚ್ಚಿ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌, ಲೋಕಾಯುಕ್ತ ಅಧಿಕಾರಿಗಳು ಹಾಗೂ ಮುಡಾ ಅಧಿಕಾರಿಗಳು ವ್ಯವಸ್ಥಿತವಾಗಿ ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಹಗರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಅವರ ಪತ್ನಿ ವಾಪಸ್‌ ಮಾಡಿರುವ 14 ನಿವೇಶನಗಳನ್ನು ಹಿಂದಕ್ಕೆ ಪಡೆದಿರುವುದು ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆ ಮತ್ತು ನ್ಯಾಯಾಂಗ ನಿಂದನೆ.

ನಿವೇಶನಗಳನ್ನು ಹಿಂದಕ್ಕೆ ಕೊಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಸಾಕ್ಷ್ಯನಾಶಕ್ಕೆ ಪ್ರಯತ್ನಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿರುವ ಅವರು ತಮ್ಮ ಅಧಿಕಾರದ ಪ್ರಭಾವದಿಂದ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಇದೆಲ್ಲವನ್ನೂ ಮಾಡುತ್ತಿದ್ದಾರೆ ಎಂದವರು ಹೇಳಿದರು. ಮುಡಾ ತನಿಖೆಯನ್ನು ಜಾರಿ ನಿರ್ದೇಶನಾಲಯ ಕೈಗೆತ್ತಿಕೊಂಡು ಈಸಿಐಆರ್‌ ದಾಖಲು ಮಾಡಿದ ಕೂಡಲೇ ಬಿರುಸಿನ ಬೆಳವಣಿಗೆಗಳು ನಡೆದಿವೆ.

ಮಂಗಳವಾರದ ದಿನ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರೇ ಖುದ್ದು ಮುಡಾ ಕಚೇರಿಗೆ ಬಂದು ನಿವೇಶನ ವಾಪಸ್‌ ನೀಡುವುದಾಗಿ ಹೇಳಿದ್ದರು. ಈ ಹೇಳಿಕೆ ಹೊರಬಿದ್ದ ಅನಂತರ ಎಲ್ಲ ನಿವೇಶನಗಳು ಮುಡಾ ವಶಕ್ಕೆ ಹೋಗಿವೆ. 14 ನಿವೇಶನಗಳ ಕ್ರಯಪತ್ರಗಳು ರದ್ದಾಗಿವೆ ಎಂದು ಮುಡಾ ಆಯುಕ್ತರೇ ಹೇಳಿಕೆ ಕೊಟ್ಟಿದ್ದಾರೆ. ಇದೆಲ್ಲ ರಾಕೆಟ್‌ ವೇಗದಲ್ಲಿ ಆಗಿರುವುದು ಸಂಶಯಾಸ್ಪದವಾಗಿದೆ ಎಂದು ಹೇಳಿದರು. ನನ್ನ ಮೇಲೆ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ನಾನ್ಯಾಕೆ ರಾಜೀನಾಮೆ ನೀಡಲಿ, ನನಗೆ ತಲೆ ಕೆಟ್ಟಿದೆಯಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next