Advertisement

MUDA Scam: ಸಿಎಂ ರಾಜೀನಾಮೆಗೆ ಕೋಳಿವಾಡ ಆಗ್ರಹ; ಕಾಂಗ್ರೆಸ್‌ ನಾಯಕರ ಭಿನ್ನರಾಗ

10:16 AM Sep 27, 2024 | Team Udayavani |

ಬೆಂಗಳೂರು: ಮುಡಾ ಹಗರಣದ ತನಿಖೆಗೆ ನ್ಯಾಯಾಲಯ ಆದೇಶಿಸಿದ ಅನಂತರ ಒಗ್ಗಟ್ಟಿನ ಮಂತ್ರ ಜಪಿಸಿದ್ದ ಕಾಂಗ್ರೆಸ್‌ನಲ್ಲಿ ಇದೀಗ ಸಣ್ಣದೊಂದು ಭಿನ್ನಧ್ವನಿಯ ಕಿಡಿ ಹೊತ್ತಿಕೊಂಡಿದ್ದು, ಸಿದ್ದರಾಮಯ್ಯ ರಾಜೀನಾಮೆಗೆ ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಆಗ್ರಹಿಸಿದ್ದಾರೆ.

Advertisement

ಗುರುವಾರ ಬೆಂಗಳೂರಿನ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆ ಇದೆ. ಸಿದ್ದರಾಮಯ್ಯ ವಿಚಾರ ಇಟ್ಟುಕೊಂಡು ಬಿಜೆಪಿಯವರು ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಕ್ಷದ ಹಿತದೃಷ್ಟಿಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಒಳ್ಳೆಯದು ಎಂದರು.

ನಾನು 50 ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದೇನೆ. ಅನೇಕ ಸಿಎಂಗಳನ್ನು ನೋಡಿದ್ದೇನೆ. ವಿಪಕ್ಷದವರ ಕುತಂತ್ರದಿಂದ ಸಿದ್ದರಾಮಯ್ಯ ಮೇಲೆ ಸುಳ್ಳು ಆಪಾದನೆ ಬಂದಿದೆ. ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿದ ನಂ.1 ಸಿಎಂ ಅವರು. ಆದರೆ ಪರಿಸ್ಥಿತಿಯ ದುರುಪಯೋಗ ಪಡೆದುಕೊಂಡು ಬಿಜೆಪಿ ಆರೋಪಗಳನ್ನು ಹೊರಿಸುತ್ತಿದೆ. ಪ್ರಧಾನಿ ಮೋದಿ ಕೂಡ ಕಾಂಗ್ರೆಸನ್ನು ಮುಜುಗರಕ್ಕೆ ಈಡು ಮಾಡುವ ಕುತಂತ್ರ ನಡೆಸುತ್ತಿದ್ದಾರೆ. 136 ಶಾಸಕರು ಸಿದ್ದರಾಮಯ್ಯ ಪರವಾಗಿಯೇ ಇದ್ದಾರೆ. ಆದರೆ ಸಿದ್ದರಾಮಯ್ಯ ಎಷ್ಟೇ ಕಳಂಕರಹಿತರಾಗಿದ್ದರೂ ಪಕ್ಷದ ಹಿತದೃಷ್ಟಿಯಿಂದ ರಾಜೀನಾಮೆ ನೀಡಲಿ. ತನಿಖೆಯಲ್ಲಿ ನಿಷ್ಕಳಂಕಿತರಾಗಿ ಹೊರ ಬಂದ ಬಳಿಕ ಮತ್ತೆ ಸಿಎಂ ಆಗಲಿ ಎಂದು ಪ್ರತಿಪಾದಿಸಿದರು.

ಕೋಳಿವಾಡ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ಅವರಾದಿಯಾಗಿ ಬಹುತೇಕ ಸಂಪುಟ ಸದಸ್ಯರು ತಳ್ಳಿ ಹಾಕಿದ್ದು, ಅದು ವೈಯಕ್ತಿಕ ಅಭಿಪ್ರಾಯ ಇರಬಹುದು. ಪಕ್ಷದ ಅಭಿಪ್ರಾಯ ಬೇರೆಯೇ ಇದೆ. ಸಿದ್ದರಾಮಯ್ಯ ರಾಜೀನಾಮೆಯ ಆವಶ್ಯಕತೆ ಇಲ್ಲ ಎಂದು ಸಿಎಂ ಪರ ನಿಂತಿದ್ದಾರೆ.

“ಕೋಳಿವಾಡ ಅವರ ಅಭಿಪ್ರಾಯ ಹೇಳಿದ್ದಾರೆ. ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ. ಏಕೆಂದರೆ ಈ ಪ್ರಕರಣದಲ್ಲಿ ನಾನೇನೂ ತಪ್ಪು ಮಾಡಿಲ್ಲ.”
– ಸಿದ್ದರಾಮಯ್ಯ, ಸಿಎಂ

Advertisement

“ಅವರೇನು ಶಿಸ್ತು ಸಮಿತಿ ಅಧ್ಯಕ್ಷರಲ್ಲ. ರೆಹಮಾನ್‌ ಖಾನ್‌ ಅಧ್ಯಕ್ಷರಿದ್ದಾರೆ. ರಾಜೀನಾಮೆ ಕೊಡುವ ಆವಶ್ಯಕತೆ ಇಲ್ಲ. ಇದೆಲ್ಲ ರಾಜಕೀಯ ಷಡ್ಯಂತ್ರ. ಇದನ್ನು ಕಾನೂನಿನ ದೃಷ್ಟಿಯಿಂದಲೂ ಎದುರಿಸುತ್ತೇವೆ. ರಾಜಕೀಯವಾಗಿ ಎದುರಿಸಲು ಸಿದ್ಧರಿದ್ದೇವೆ.”
– ಡಿ.ಕೆ. ಶಿವಕುಮಾರ್‌, ಡಿಸಿಎಂ

“ಅದು ವೈಯಕ್ತಿಕ ಅಭಿಪ್ರಾಯ ಇರಬಹುದು. ಪಕ್ಷವಾಗಲೀ, ಸಂಪುಟವಾಗಲೀ, ಹೈ ಕಮಾಂಡ್‌ ಆಗಲೀ ರಾಜೀನಾಮೆ ಕೇಳಿಲ್ಲ. ಎಲ್ಲರೂ ಜತೆಗಿದ್ದೇವೆ.” – ಪ್ರಿಯಾಂಕ್‌ ಖರ್ಗೆ, ಸಚಿವ

ಕೋಳಿವಾಡ ಅವರ ವಯಸ್ಸೆಷ್ಟು? ಅವರಿಗೆ ಬೆಳಗ್ಗೆ ಹೇಳಿದ್ದು ಮಧ್ಯಾಹ್ನ ಜ್ಞಾಪಕ ಇರುವುದಿಲ್ಲ. ಮಧ್ಯಾಹ್ನ ಹೇಳಿದ್ದು ಸಂಜೆ ನೆನಪಿರುವುದಿಲ್ಲ. – ಕೆ.ಎನ್‌. ರಾಜಣ್ಣ, ಸಹಕಾರ ಸಚಿವ

“ಕೋಳಿವಾಡ ಹಿರಿಯರಿರಬಹುದು. ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದಾರೆ. ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ರಾಜೀನಾಮೆ ಕೊಡುವ ಪ್ರಶ್ನೆ ಬರುವುದಿಲ್ಲ. ಸಿದ್ದರಾಮಯ್ಯರದ್ದು ಯಾವ ತಪ್ಪೂ ಇಲ್ಲ.”
– ಎಂ.ಬಿ. ಪಾಟೀಲ್‌, ಕೈಗಾರಿಕಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next