Advertisement

MUDA Scam: ಡಿ.ಕೆ. ಶಿವಕುಮಾರ್‌ ಅವರ ಆಸ್ತಿ ಕೇಳಲು ಬಂದಿಲ್ಲ: ಆರ್‌. ಅಶೋಕ್‌

12:32 AM Aug 07, 2024 | Team Udayavani |

ಮಂಡ್ಯ: ವಾಲ್ಮೀಕಿ ಹಗರಣ 187 ಕೋಟಿ ರೂ. ಹಾಗೂ ಮುಡಾದ 14 ನಿವೇಶನ ಲೂಟಿಯ ಬಗ್ಗೆ ಕೇಳಲು ಬಂದಿದ್ದೇವೆ. ಡಿ.ಕೆ. ಶಿವಕುಮಾರ್‌ ಅವರ ಆಸ್ತಿ ಕೇಳಲು ಬಂದಿಲ್ಲ ಎಂದು ವಿಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದರು.

Advertisement

ಮದ್ದೂರಿನಲ್ಲಿ ಪಾದಯಾತ್ರೆ ಸಂದರ್ಭ ಮಾತನಾಡಿದ ಅವರು, ಡಿಕೆಶಿ ಆಸ್ತಿಯನ್ನು ಕೇಳುತ್ತಲೇ ಇದ್ದೇವೆ. ಸಿದ್ದರಾಮಯ್ಯ ಎಲ್ಲಿಯೂ ಬರುತ್ತಿಲ್ಲ. ಡಿಕೆಶಿ ಒಬ್ಬರೇ ಬರುತ್ತಿದ್ದಾರೆ. ಬೇಗ ಸಿದ್ದರಾಮಯ್ಯ ಅವರನ್ನು ಇಳಿಸಿ ಬಿಡಿ ಎಂದು ಬರುತ್ತಿದ್ದಾರೆ. ನಮ್ಮ ಪಾದಯಾತ್ರೆಗೆ ಅಲ್ಲಲ್ಲಿ ಪೊಲೀಸ್‌ ನಿಯೋಜಿಸಿ ಬ್ಯಾರಿಕೇಡ್‌ ಅಳವಡಿಸಿದ್ದರು. ಇದೀಗ ಡಿಕೆಶಿ ಬರುತ್ತಿರುವುದರಿಂದ ನಮಗೆ ಸುಲಭ ಮಾಡಿದ್ದಾರೆ. ಅಂದರೆ ಸಿದ್ದರಾಮಯ್ಯ ಅವರನ್ನು ಬೇಗ ಇಳಿಸಿಬಿಡಿ ಎಂಬುದು ಅವರ ಆಸೆಯಾಗಿದೆ ಎಂದರು.

ಎಲ್ಲರಿಗೂ ಮನೆ ಕಟ್ಟಲು ಒಂದು ಸೈಟ್‌ ಬೇಕು. ಆದರೆ ಸಿದ್ದರಾಮಯ್ಯ ಅವರಿಗೆ ಯಾಕೆ 14 ಸೈಟ್‌ ಬೇಕು. ಧೈರ್ಯ ಇದ್ದರೆ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಬೇಕಾಗಿತ್ತು. ಓಡಿ ಹೋಗಿದ್ದಾರೆ. ಸಿದ್ದರಾಮಯ್ಯ ಪಲಾಯನ ಮಾಡುತ್ತಿದ್ದಾರೆ. ನಮ್ಮ ಮುಂದೆ ಮಾಡುತ್ತಿರುವ ಸಭೆಗಳಿಗೆ ಸಿದ್ದರಾಮಯ್ಯ ಬರಬೇಕಾಗಿತ್ತು. ಆದರೆ ಬರುತ್ತಿಲ್ಲ. ಮಳೆ ಬಂದು ತಿಂಗಳಾದ ಅನಂತರ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಇಲ್ಲಿಗೆ ಬಂದರೆ ಮಾಧ್ಯಮದವರು 14 ಸೈಟು ಯಾಕೆ ಎಂದು ಕೇಳಿದರೆ ಉತ್ತರ ಕೊಡಲು ಆಗದೆ ಬರುತ್ತಿಲ್ಲ ಎಂದು ಆರೋಪಿಸಿದರು.

ಶ್ರೀರಾಮುಲು ನೇತೃತ್ವದಲ್ಲಿ ದುರ್ಗದಿಂದ ಪಾದಯಾತ್ರೆ: ವಿಪಕ್ಷ ನಾಯಕ ಛಲವಾದಿ
ಚಿತ್ರದುರ್ಗ: ಮುಡಾ ಹಗರಣ ಖಂಡಿಸಿ ಬೆಂಗಳೂರಿನಿಂದ ಮೈಸೂರಿಗೆ ನಡೆಯುತ್ತಿರುವ ಪಾದಯಾತ್ರೆ ಮಾದರಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣ ವಿರೋಧಿಸಿ ಶ್ರೀರಾಮುಲು ನೇತೃತ್ವದಲ್ಲಿ ಚಿತ್ರದುರ್ಗದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಎಸ್‌ಸಿ-ಎಸ್‌ಟಿ ಸಮುದಾಯ ಹೆಚ್ಚಾಗಿರುವ ಚಿತ್ರದುರ್ಗ, ಬಳ್ಳಾರಿ, ರಾಯಚೂರು ಭಾಗದಲ್ಲಿ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಚಿತ್ರದುರ್ಗದಿಂದಲೇ ಪಾದಯಾತ್ರೆ ಪ್ರಾರಂಭವಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಕೇಂದ್ರ ನಾಯಕರ ಜತೆಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Advertisement

ಡಿಕೆಶಿ ಹಾವು ಇದೆ ಎಂದರಾಗದು, ಹೊರಗೆ ಬಿಡಲಿ:  ಎಸ್‌.ಆರ್‌. ವಿಶ್ವನಾಥ್‌
ಬೆಂಗಳೂರು: “ಹಾವು ಇದೆ ಅಂತ ಬರೀ ಹೇಳಿ ಹೆದರಿಸುವುದು ಬೇಡ. ಅದನ್ನು ಬಹಿರಂಗ ಪಡಿಸಲಿ. ಕೋವಿಡ್‌ ಹಗರಣವನ್ನೂ ಬಿಚ್ಚಿಡಲಿ’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಸವಾಲು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಡಿಕೆಶಿ ಅವರು ಕುಮಾರಸ್ವಾಮಿ ಬಗ್ಗೆ ಮಾತನಾಡು ವುದು ಬೇಡ. ಹಗರಣಗಳ ದಾಖಲೆಗಳಿದ್ದರೆ ಬಹಿರಂಗಪಡಿಸಲಿ. ಕುಮಾರಸ್ವಾಮಿ ವಿರುದ್ಧವೂ ಆಗಿರಲಿ ಅಥವಾ ಕೋವಿಡ್‌ ಅವಧಿಯದ್ದೂ ಆಗಿರಲಿ’ ಎಂದು ಸವಾಲು ಹಾಕಿದರು.

ಇದೇ ವೇಳೆ ವಿಧಾನ ಪರಿಷತ್ತಿನ ಸದಸ್ಯ ಟಿ.ಎ. ಶರವಣ ಮಾತನಾಡಿ, “ಕಾಂಗ್ರೆಸ್‌ ಮಾಡಿರುವ ಹಗರಣಗಳ ಗಲೀಜು ಶುದ್ಧೀಕರಣವನ್ನು ಮೈತ್ರಿ ಪಕ್ಷ ಮಾಡುತ್ತಿದೆ. ಪಾದಯಾತ್ರೆಗೆ ಯಶಸ್ಸು ಸಿಕ್ಕಿದೆ. ಮೈಸೂರಿನಲ್ಲಿ 10ರಂದು ಸಮಾವೇಶ ನಡೆಯಲಿದೆ. ಅಷ್ಟರಲ್ಲಿ ಸಿಎಂ ರಾಜೀನಾಮೆ ನೀಡಿದರೆ ಅವರಿಗೂ ಗೌರವ’ ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next