Advertisement
ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅನಂತರ ಕಾಲ್ನಡಿಗೆಯಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಯಿತು.
ಹಿಂದೆ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ತನಿಖೆ ಆಗುವಾಗ ನೀವು ಏನ್ ಹೇಳಿಕೆ ಕೊಟ್ಟಿದ್ದೀರಿ? ಆದರೆ ಈಗ ಯಡಿಯೂರಪ್ಪ ಪ್ರಕರಣ ಬೇರೆ, ನಮ್ಮ ಪ್ರಕರಣ ಬೇರೆ ಅನ್ನುತ್ತಿದ್ದೀರಿ. ಈಶ್ವರಪ್ಪ ಪ್ರಕರಣದಲ್ಲಿ ಏನು ಹೇಳಿದ್ದೀರಿ? ಆಗ ತನಿಖೆ ಆಗಿತ್ತಾ? ಆದರೆ ನೀವು ಈಶ್ವರಪ್ಪ ರಾಜೀನಾಮೆಗೆ ಕುಸ್ತಿ ಮಾಡಿದ್ದೀರಿ. ಈಗ ಯಾಕೆ ರಾಜೀನಾಮೆ ನೀಡುತ್ತಿಲ್ಲ? ನಿಮಗೆ ಸೈಟ್ ತೆಗೆದುಕೊಳ್ಳುವಂತೆ ಮೋದಿಯವರು ಹೇಳಿದ್ದರಾ? ಎಂದು ಅಶೋಕ್ ಪ್ರಶ್ನಿಸಿದರು.
Related Articles
Advertisement
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಸಿದ್ದರಾಮಯ್ಯನವರೇ ನೀವು ರಾಜೀನಾಮೆ ನೀಡಿ. ಇಲ್ಲವೆಂದರೆ ಗೋಸುಂಬೆಯಂತೆ ಬಣ್ಣ ಬದಲಿಸುತ್ತೇನೆ ಎಂದು ಒಪ್ಪಿಕೊಳ್ಳಿ. ನೀವು ಪರಿಶುದ್ಧರಲ್ಲ. ನಿಮ್ಮ ಆಡಳಿತ ಪರಿಶುದ್ಧ ಇಲ್ಲ ಎಂದರ್ಥ ಎಂದು ಟೀಕಿಸಿದರು. ನಿಮ್ಮ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿದಾಗ ನಿಮ್ಮವರು ರಾಜ್ಯಪಾಲರ ಫೋಟೋಕ್ಕೆ ಚಪ್ಪಲಿ ಹಾಕಿದ್ದೀರಿ.
ಬಾಂಗ್ಲಾ ಮಾದರಿಯಲ್ಲಿ ದಂಗೆ ನಡೆಯುತ್ತದೆ ಎಂದಿದ್ದೀರಿ. ನಿಮಗೆ ಸಂವಿಧಾನದಲ್ಲಿ ನಂಬಿಕೆ ಇದ್ದರೆ ರಾಜೀನಾಮೆ ನೀಡಿ. ಸಚಿವರಾದ ಜಮೀರ್ ರೀತಿ ಹೊಗಳು ಭಟರ ಮಾತು ಕೇಳಬೇಡಿ. ನೀವು ಕೆಳಗೆ ಬಿದ್ದಾಗ ಮೊದಲು ತುಳಿಯೋದೇ ಅವರು. ಅವರ ಲಾಭ ಮಾಡಿಕೊಳ್ಳುವುದಕ್ಕೆ ಹೊಗಳುತ್ತಾರೆ. ಆದರೆ ರಾಜ್ಯದ ಮರ್ಯಾದೆ ಕಾಪಾಡೋಕೆ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು.
ನಮ್ಮ ಪಕ್ಷದವರ್ಯಾರೂ ಮುಖ್ಯಮಂತ್ರಿ ಕುರ್ಚಿ ಮೇಲೆ ಕರ್ಚಿಫ್ ಹಾಕಿಲ್ಲ. ನಿಮ್ಮ ಪಕ್ಷದವರೇ, ನೀವು ಹೇಳಿದವರೇ ಮುಖ್ಯಮಂತ್ರಿಯಾಗುವುದು. ಕ್ಲೀನ್ ಚಿಟ್ ಸಿಕ್ಕ ಮೇಲೆ ನೀವೇ ಮತ್ತೆ ಮುಖ್ಯಮಂತ್ರಿಯಾಗಿ ಎಂದು ಕಿವಿಮಾತು ಹೇಳಿದರು.
ಸಿದ್ದರಾಮಯ್ಯ ಬಟ್ಟೆ ತುಂಬಾ ಕಪ್ಪು ಇಂಕ್: ಜಗ್ಗೇಶ್ ವ್ಯಂಗ್ಯರಾಜ್ಯಸಭಾ ಸದಸ್ಯ ಜಗ್ಗೇಶ್ ಮಾತನಾಡಿ, ಮುಡಾ ಹಗರಣದ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಸಿದ್ದರಾಮಯ್ಯ ಘನವಾದ ಹೆಸರು ತಂದುಕೊಟ್ಟಿದ್ದಾರೆ. ರಾಹುಲ್ ಗಾಂಧಿಯವರಿಗೆ ತಾವು ಹಿಡಿದಿದ್ದ ಸಂವಿಧಾನಕ್ಕೆ ಎಷ್ಟು ಪುಟ ಇದೆಯೆಂದು ಹೇಳಲು ಸಾಧ್ಯವಾಗಲಿಲ್ಲ. ಅವರನ್ನು ಪ್ರಧಾನಿ ಮಾಡಲು ಕಾಂಗ್ರೆಸ್ ಹೊರಟಿದೆ. ಅಂಥ ನಾಯಕರ ಕೆಳಗೆ ಇರುವ ಸಿದ್ದರಾಮಯ್ಯ ಘನವಾದ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಕ್ಲೀನ್ ನಾಯಕ ಎಂದು ಅಂದುಕೊಂಡಿದ್ದೆ. ಆದರೆ ನ್ಯಾಯಾಲಯಗಳೇ ಅವರ ಪಾತ್ರದ ಬಗ್ಗೆ ಹೇಳಿವೆ ಎಂದು ಟೀಕಿಸಿದರು. ಸಿದ್ದರಾಮಯ್ಯನವರ 40 ವರ್ಷದ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇರಲಿಲ್ಲ. ಈಗ ಇಡೀ ಬಟ್ಟೆ ಕಪ್ಪು ಇಂಕ್‌ನಲ್ಲಿ ತುಂಬಿ ಹೋಗಿದೆ. ರಾಜ್ಯದ ಮಾನ ಮರ್ಯಾದೆ ಈಗಾಗಲೇ ಹರಾಜಾಗಿದೆ. ದೊಡ್ಡ ಮನಸು ಮಾಡಿ ರಾಜಾರೋಷವಾಗಿ ರಾಜೀನಾಮೆ ಕೊಡಿ ಎಂದು ಜಗ್ಗೇಶ್ ವ್ಯಂಗ್ಯವಾಡಿದರು.
ಪ್ರತಿಭಟನೆಗೆ ವಿಜಯೇಂದ್ರ ಗೈರು
ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗೈರು ಹಾಜರಾಗಿದ್ದರು. ಜ್ವರದ ಹಿನ್ನೆಲೆಯಲ್ಲಿ ಅವರು ತೀವ್ರ ಬಳಲಿಕೆಗೆ ಒಳಗಾಗಿದ್ದು, ಈ ಹಿನ್ನೆಲೆಯಲ್ಲಿ ಬಂದಿರಲಿಲ್ಲ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಸಿದ್ದರಾಮಯ್ಯ ನವರೇ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ. ನಿಮ್ಮ ಕಾಲ ಹತ್ತಿರ ಬಂದಿದೆ. ನೀವು ಜೈಲಿಗೆ ಹೋಗಲೇಬೇಕು. ಆವತ್ತು ರೆಡ್ಡಿಗೆ, ಯಡಿಯೂರಪ್ಪಗೆ ಒಂದು ನ್ಯಾಯ, ಇಂದು ನಿಮಗೆ ಒಂದು ನ್ಯಾಯವಾ?
– ಜನಾರ್ದನ ರೆಡ್ಡಿ, ಮಾಜಿ ಸಚಿವ