Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮಗೆ ಜಮೀನು ನೀಡಿರುವುದು ಅಕ್ರಮವಲ್ಲ. ಅದು ಅವರ ಹಕ್ಕಿನಂತೆ ನೀಡಿರುವುದು. ಇದಕ್ಕೂ ಮುಡಾ ಹಗರಣಕ್ಕೂ ತಳಕು ಹಾಕುವುದು ಬೇಡ. ನಿಜವಾಗಿಯೂ ಹಗರಣ ಯಾವುದು ಅಂದರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧಿಯೊಬ್ಬರಿಗೆ ಜಮೀನಿನ ದಾಖಲೆ ಇಲ್ಲದೆ 50:50ರ ಅನುಪಾತದಲ್ಲಿ ಮುಡಾದಲ್ಲಿ ಬದಲಿ ಜಮೀನು ಮಂಜೂರು ಮಾಡಲಾಗಿದೆ. ಅದೇ ರೀತಿ, ಜೆಡಿಎಸ್ ಪ್ರಮುಖ ನಾಯಕನಿಗೆ ಅತ್ಯಂತ ಹತ್ತಿರವಾದ ವ್ಯಕ್ತಿಗೂ ಇದೇ ರೀತಿ ಲಭ್ಯವಿಲ್ಲದ ಜಮೀನಿಗೆ ಪ್ರತಿಯಾಗಿ 50:50ರ ಅನುಪಾತದಲ್ಲಿ ಜಮೀನನ್ನು ಪಡೆದಿದ್ದಾರೆ. ಇದಕ್ಕೆ ಎರಡೂ ಪಕ್ಷಗಳ ನಾಯಕರು ಉತ್ತರ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಮೈಸೂರಿನ ಎಸ್.ಸಿ. ರಾಜೇಶ್ ಬಿನ್ ಚಂದ್ರಪ್ಪ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತಂಗಿ ಮಗ. ಬಿ.ವೈ. ವಿಜಯೇಂದ್ರ ಅವರಿಗೆ ಮಾವ ಆಗಬೇಕು. ಇವರು ಒಬ್ಬ ನಕಲಿ ವ್ಯಕ್ತಿಯನ್ನು ಸೃಷ್ಟಿಸಿ ಆ ವ್ಯಕ್ತಿಯಿಂದ 50:50ರ ಅನುಪಾತದಲ್ಲಿ ಮೈಸೂರು ತಾಲೂಕು ಕಸಬಾ ಹೋಬಳಿ ಇನಕಲ್ ಗ್ರಾಮ ಸರ್ವೇ ಸಂಖ್ಯೆ 255/3ರಲ್ಲಿ 33 ಗುಂಟೆ ಜಮೀನನ್ನು ಪ್ರಾಧಿಕಾರ ಭೂಸ್ವಾಧೀನಪಡಿಸಿಕೊಳ್ಳದೆ ಉಪಯೋಗಿಸಿಕೊಂಡಿದ್ದಾರೆ. ವಿಚಿತ್ರವೆಂದರೆ ಆ ಜಮೀನಿನ ಭೂಸ್ವಾಧೀನಕ್ಕೆ ಸಂಬಂಧಿಸಿದ ಮೂಲ ಕಡತವೇ ಲಭ್ಯವಿಲ್ಲ. ಅಂದರೆ ಜಾಗವೇ ಇಲ್ಲದೆ 50:50 ಅನುಪಾತದಲ್ಲಿ ಅಂದಿನ ಮುಡಾ ಆಯುಕ್ತರು ನಕಲಿ ವ್ಯಕ್ತಿಗೆ 33 ಗುಂಟೆ ಜಾಗಕ್ಕೆ ಬದಲಿಯಾಗಿ 9 ಸಾವಿರ ಚದರಡಿ ನಿವೇಶನ ನೀಡಿದ್ದಾರೆ. ಆ ನಕಲಿ ವ್ಯಕ್ತಿಯಿಂದ ರಾಜೇಶ್ ಬಿನ್ ಚಂದ್ರಪ್ಪ ಅವರು ನಿವೇಶನ ಖರೀದಿಸಿದ್ದಾರೆ ಎಂದು ದೂರಿದರು.