Advertisement

MUDA Scam: ತೀರ್ಪಿನ ಬಳಿಕ ರಾಜ್ಯ ಬಿಜೆಪಿಯಿಂದ ಮತ್ತೊಂದು ಹೋರಾಟ?

12:55 AM Sep 05, 2024 | Team Udayavani |

ಬೆಂಗಳೂರು: ಮುಡಾ ಪ್ರಕರಣದಲ್ಲಿ ಹೈಕೋರ್ಟ್‌ ತೀರ್ಪು ಆಧರಿಸಿ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮತ್ತೂಂದು ಸುತ್ತಿನ ಹೋರಾಟ ನಡೆಸುವ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಚಿಂತನೆ ನಡೆದಿದೆ.

Advertisement

ಮುಡಾ ಪಾದಯಾತ್ರೆ ಪ್ರಾರಂಭವಾದ ಕಾಲದಿಂದಲೂ ಇದೊಂದು ಚರ್ಚೆ ಬಿಜೆಪಿಯಲ್ಲಿ ಇದೆ. ವಿಶೇಷವಾಗಿ ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ನಾಯಕರು ಈ ಪ್ರಸ್ತಾವವನ್ನು ಇಟ್ಟಿದ್ದಾರೆ. ಆದರೆ, ಇದರಿಂದ ಆಂತರಿಕ ಭಿನ್ನಾಭಿಪ್ರಾಯ ಸ್ಫೋಟವಾಗಬಹುದೆಂಬ ಕಾರಣಕ್ಕೆ ಹೈಕಮಾಂಡ್‌ ಇನ್ನೂ ಒಪ್ಪಿಗೆ ನೀಡಿಲ್ಲ. ಹೀಗಾಗಿ ನ್ಯಾಯಾಲಯ ತೀರ್ಪಿನ ಬಳಿಕ ಈ ಎರಡೂ ಅಭಿಪ್ರಾಯಕ್ಕೂ ಮನ್ನಣೆ ನೀಡುವ ತಂತ್ರಗಾರಿಕೆಯ ಭಾಗವಾಗಿ ಹೋರಾಟಕ್ಕೆ ಅನುವು ನೀಡಬಹುದು ಎಂದು ಹೇಳಲಾಗುತ್ತಿದೆ.

ಒಂದೊಮ್ಮೆ ಹೈಕೋರ್ಟ್‌ನಲ್ಲಿ ಸಿದ್ದರಾಮಯ್ಯ ಅವರಿಗೆ ರಿಲೀಫ್ ಸಿಕ್ಕರೆ ವಾಲ್ಮೀಕಿ ಅಭಿವೃದ್ಧಿ ನಿಗಮದ ವಿಚಾರವನ್ನು ಪ್ರಧಾನವಾಗಿಟ್ಟುಕೊಂಡು ಹೋರಾಟ ನಡೆಸಬಹುದು.

ಸಿದ್ದು ರಾಜೀನಾಮೆ ಖಚಿತ: ವಿಜಯೇಂದ್ರ
ಬೆಂಗಳೂರು: ಬಿಜೆಪಿ ಕಚೇರಿಯಲ್ಲಿ ಬುಧವಾರ ಸದಸ್ಯತ್ವಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಾಗ ಹಗರಣವೇ ನಡೆದಿಲ್ಲ ಎಂದವರು. ಈಗ 87 ಕೋಟಿ ರೂ. ಅವ್ಯವಹಾರವಾಗಿದೆ ಎನ್ನುತ್ತಿದ್ದಾರೆ. ಮುಡಾ ಹಗರಣದಲ್ಲಿ ಈಗ ಹಿಂದಿನ ಆಯುಕ್ತರನ್ನು ಅಮಾನತು ಮಾಡಿ ತಪ್ಪು ಒಪ್ಪಿಕೊಂಡಂತಾಗಿದೆ. ಸಿಎಂ ರಾಜೀನಾಮೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತೀರ್ಪಿನ ಬಳಿಕ ಸಿದ್ದು ರಾಜೀನಾಮೆ ಖಚಿತ: ಬಿಎಸ್‌ವೈ
ಶಿವಮೊಗ್ಗ: ಮುಡಾ ಹಗರಣದ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ತೀರ್ಪು ಬಂದ ಬಳಿಕ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾಗುತ್ತದೆ. ತೀರ್ಪು ಬರುವ ಮುನ್ನವೇ ರಾಜೀನಾಮೆ ನೀಡಿದರೆ ಗೌರವ ಉಳಿಯುತ್ತದೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಪತ್ರಕರ್ತರ ಜತೆ ಮಾತನಾಡಿ, ಸಿದ್ದರಾಮಯ್ಯ ಅವರ ತಪ್ಪು ಸಾಬೀತಾಗುತ್ತಿದೆ. ಅವರ ಪದತ್ಯಾಗ ನೂರಕ್ಕೆ ನೂರು ಖಚಿತವಾಗಿದೆ.

Advertisement

ಶೀಘ್ರ ಮತ್ತೊಂದು ಪಾದಯಾತ್ರೆ: ಜೋಶಿ
ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್‌ ಸರಕಾರದ ಭ್ರಷ್ಟಾಚಾರ ವಿರುದ್ಧ ಬಿಜೆಪಿ ಮತ್ತೊಂದು ಪಾದಯಾತ್ರೆ ನಡೆಸುವ ಮೂಲಕ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಅವರು ಮಾತನಾಡಿ, ರಾಜ್ಯ ಸರಕಾರದ ಭ್ರಷ್ಟಾಚಾರ ವಿರುದ್ಧ ಬಿಜೆಪಿ ಹೋರಾಟ ಸರಿಯಾದ ದಿಕ್ಕಿನಲ್ಲೇ ನಡೆಯುತ್ತಿದೆ. ರಾಜ್ಯದ ಎಲ್ಲ ನಾಯಕರ ಮುಂದಾಳತ್ವದಲ್ಲೇ ಮತ್ತೂಂದು ಪಾದಯಾತ್ರೆ ನಡೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next