Advertisement

‘4 ವರ್ಷಗಳ ಬಳಿಕ ಮನೆ ನಿರ್ಮಾಣ ಪರವಾನಿಗೆ ಸಮಸ್ಯೆ ಪರಿಹಾರ’

12:39 PM Sep 26, 2018 | Team Udayavani |

ಮೂಡಬಿದಿರೆ: ನಗರ ಯೋಜನಾ ಪ್ರಾಧಿಕಾರದ ಬಿಗಿ ನಿಯಮಾವಳಿಗಳಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಮನೆ ಕಟ್ಟಲು ಪರವಾನಿಗೆ ದೊರೆಯದೆ ಬಹಳ ಸಮಸ್ಯೆಯಾಗುತ್ತಿರುವುದನ್ನು ಮನಗಂಡು ಈಗ ಸತತ ಎರಡು ತಿಂಗಳ ಹೋರಾಟದ ಫಲವಾಗಿ ಮೂಡಬಿದಿರೆಗೆ ಮಂಗಳೂರು ಮುಡಾ ಝೋನಲ್‌ ರೆಗ್ಯುಲೇಶನ್‌ ಅನ್ವಯಿಸಲು ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕರು ಅವಕಾಶ ಕಲ್ಪಿಸಿದ್ದು, ಇನ್ನು ಮುಂದೆ ಮೂಡಬಿದಿರೆಯಲ್ಲಿ ಮನೆ ನಿರ್ಮಾಣಕ್ಕೆ ಪರವಾನಿಗೆ ಪಡೆಯಲು ನಿಯಮಗಳನ್ನು ಸರಳಗೊಳಿಸಲಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಮೂಡಬಿದಿರೆ ವ್ಯಾಪ್ತಿಯಲ್ಲಿದ್ದ ಸಮಸ್ಯೆಗಳ ಬಗ್ಗೆ ನುರಿತ ವಕೀಲರೊಂದಿಗೆ ಚರ್ಚಿಸಿದಾಗ ‘ಮುಡಾ’ ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ತೊಂದರೆಯಾಗಿರುವುದು ತಿಳಿದುಬಂದಿತು. ಈ ಬಗ್ಗೆ ತಾನು ಸೆ. 19ರಂದು ಬೆಂಗಳೂರಿನಲ್ಲಿ ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕರು, ದ.ಕ. ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ಇರುವ ಅಧಿಕಾರಿ ಪೊನ್ನುರಾಜ್‌ ಅವರಿಗೆ ಮನವರಿಕೆ ಮಾಡಿದಾಗ ಅವರು ಸಮಸ್ಯೆಯ ಮೂಲವನ್ನು ತಿಳಿದು ಕೊಂಡರು ಹಾಗೂ ಕೂಡಲೇ ದ.ಕ. ಜಿಲ್ಲಾಧಿಕಾರಿ ಮತ್ತು ಮೂಡಬಿದಿರೆ ನಗರ ಯೋಜನಾ ಪ್ರಾಧಿಕಾರದ ಮುಖ್ಯಸ್ಥರಿಗೆ ಇದುವರೆಗೆ ಮೂಡಬಿದಿರೆಯಲ್ಲಿ ಅನುಸರಿಸಲಾಗುತ್ತಿರುವ ನಿಯಮಾವಳಿಗಳ ಬದಲಾಗಿ ಮಂಗಳೂರು ಮುಡಾ ಅಳವಡಿಸಿರುವ ಝೋನಲ್‌ ರೆಗ್ಯುಲೇಶನ್‌ ಜಾರಿಗೊಳಿಸಿ, ಮನೆ ಕಟ್ಟಬಯಸುವವರಿಗೆ ಪರವಾನಿಗೆ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು ಎಂದರು.

ಇದಕ್ಕೆ ಎಲ್ಲ ಅಧಿಕಾರಿಗಳಿಗೆ ಶಾಸಕರು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು. ಪುರಸಭಾ ಸದಸ್ಯರಾದ ಪ್ರಸಾದ್‌ ಕುಮಾರ್‌, ನಾಗರಾಜ ಪೂಜಾರಿ, ಲಕ್ಷ್ಮಣ ಪೂಜಾರಿ, ದಿನೇಶ್‌ ಪೂಜಾರಿ, ಬಿಜೆಪಿ ಮುಖಂಡರಾದ ಮೇಘನಾಥ್‌ ಶೆಟ್ಟಿ, ಗೋಪಾಲ್‌ ಶೆಟ್ಟಿಗಾರ್‌, ರಾಜೇಶ್‌ ಮಲ್ಯ, ಅಶೋಕ ಮಲ್ಯ, ಜಾಯ್‌ ಲೊಸ್‌ ತಾಕೋಡೆ ಉಪಸ್ಥಿತರಿದ್ದರು. 

ಪುರಸಭೆಗೆ ನಷ್ಟ
ಮೂಡಬಿದಿರೆ ಪುರಸಭೆಯಲ್ಲಿ ಯಾವುದೇ ಕನ್ವರ್ಷನ್‌ ಸೈಟ್‌ಗಳಿಗೆ ಖಾತೆ ನೀಡದೆ ಜನರಿಗೆ ಬಹಳ ತೊಂದರೆಯಾಗಿತ್ತು. ಪುರಸಭೆಗೆ ಒಂದು ಕೋಟಿ ರೂ. ಗೂ ಅಧಿಕ ನಷ್ಟವುಂಟಾಗಿತ್ತು. ನೋಂದಣಿ ಕಚೇರಿಯಲ್ಲಿ ವಹಿವಾಟು ನಡೆಯದೆ, ಸರಕಾರದ ಖಜಾನೆಗೂ ಲಕ್ಷಾಂತರ ರೂ. ನಷ್ಟವಾಗಿತ್ತು.
 - ಉಮಾನಾಥ ಕೋಟ್ಯಾನ್‌,
    ಶಾಸಕ, ಮೂಲ್ಕಿ-ಮೂಡಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next