ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಲ್ಲಿ ನಡೆದಿದೆ ಎನ್ನಲಾದ ನಿವೇಶನ ಹಂಚಿಕೆ ಹಗರಣದ ತನಿಖೆಗೆ ನೇಮಿಸಲಾಗಿರುವ ನ್ಯಾ| ಪಿ.ಎನ್. ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣ ಆಯೋಗದ ಕಾರ್ಯವ್ಯಾಪ್ತಿ ಮತ್ತು ಷರತ್ತುಗಳನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರಕಾರ 2006ರಿಂದ 2024ರ ಜುಲೈ 15ರ ವರೆಗಿನ ಎಲ್ಲ ಅಕ್ರಮಗಳ ವಿಚಾರಣೆಯ ಹೊಣೆಯನ್ನು ವಹಿಸಿದೆ.
ಅಲ್ಲದೆ ಆರು ತಿಂಗಳೊಳಗಾಗಿ ವಿಚಾರಣೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಆಯೋಗವು ವಿಚಾರಣ ಆಯೋಗಗಳ ಕಾಯ್ದೆ-1952 ಹಾಗೂ ನಾಗರಿಕ ಕಾರ್ಯವಿಧಾನ ಸಂಹಿತೆ’ (ಕೋಡ್ ಆಫ್ ಸಿವಿಲ್ ಪ್ರೊಸಿಜರ್)ಯಲ್ಲಿರುವ ಅವಕಾಶಗಳಡಿ ತನಿಖೆ ನಡೆಸಲು ಎಲ್ಲಾ ಅಧಿಕಾರವನ್ನು ಆಯೋಗ ಹೊಂದಿರುತ್ತದೆ ಎಂದು ಹೇಳಲಾಗಿದೆ.
ಆಯೋಗಕ್ಕೆ ಸಮಗ್ರ ಮಾಹಿತಿ, ದಾಖಲೆಗಳನ್ನು ಒದಗಿಸಿ ಆಯೋಗವು ತನಿಖೆಯನ್ನು ಪೂರ್ಣಗೊಳಿಸಲು ಹಾಗೂ ತಾಂತ್ರಿಕ, ಆರ್ಥಿಕ, ಭೂಸ್ವಾಧೀನ ಮತ್ತು ಆಡಳಿತಾತ್ಮಕ ಸಲಹೆಗಾರರನ್ನು ಒಗದಿಸಲು ನಗರಾಭಿವೃದ್ಧಿ ಇಲಾಖೆ ಸಹಕರಿಸಬೇಕು. ದಾಖಲೆಗಳನ್ನು ಒದಗಿಸುವುದರ ಜತೆಗೆ ಆಯೋಗ ಸ್ಥಳ ತನಿಖೆ ನಡೆಸುವ ಸಂದರ್ಭದಲ್ಲಿ ನಗರಾಭಿವೃದ್ಧಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿ ಗಳು ಖುದ್ದು ಹಾಜರಿದ್ದು, ಆಯೋಗಕ್ಕೆ ಸಂಪೂರ್ಣ ಸಹಕಾರ ನೀಡಬೇಕು.
ಜತೆಗೆ ಆಯೋಗವು ಬೆಂಗಳೂರು ಕೇಂದ್ರ ಸ್ಥಾನದಲ್ಲಿ ಹಾಗೂ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿ ಸಲು ಅನುಕೂಲವಾಗುವಂತೆ ಕಚೇರಿಗೆ ಸ್ಥಳಾವಕಾಶ, ಆಯೋಗದ ಅಧ್ಯಕ್ಷರು, ಕಾರ್ಯದರ್ಶಿ, ಅಧಿಕಾರಿ, ಸಿಬಂದಿಗೆ ವಾಹನ, ಪಿಠೊಪಕರಣ, ದೂರವಾಣಿ ವ್ಯವಸ್ಥೆ ಹಾಗೂ ಆಯೋಗಕ್ಕೆ ನಿಗದಿಪಡಿಸುವ ಗೌರವಧನ ಮತ್ತು ಭತ್ತೆ, ಇತರ ಆರ್ಥಿಕ ಸೌಲಭ್ಯಗಳನ್ನು ಒದಗಿಸಲು ಮುಡಾ ಆಯುಕ್ತರು ಕ್ರಮ ಕೈಗೊಳ್ಳಬೇಕು ಎಂದು ಸರಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 2024ರ ಜುಲೈ 14ರಂದು ಸರಕಾರ ಆಯೋಗ ರಚಿಸಿತ್ತು.