Advertisement

MUDA Case: ಇಂದು ವಿಧಾನಸೌಧದಲ್ಲಿ ಪ್ರತಿಭಟನೆಗೆ ಬಿಜೆಪಿ ಸಜ್ಜು, ಸಿಎಂ ಮನೆಗೆ ಮುತ್ತಿಗೆ

01:20 AM Sep 26, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷ ನಾಯಕ ಆರ್‌. ಅಶೋಕ್‌ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ 10.30ಕ್ಕೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿ ಬಳಿಕ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಬಿಜೆಪಿ ನಿರ್ಧರಿಸಿದೆ.

Advertisement

ಈ ಬಗ್ಗೆ ವಿಪಕ್ಷ ನಾಯಕ ಆರ್‌. ಅಶೋಕ್‌ ಸುದ್ದಿಗಾರರ ಜತೆಗೆ ಮಾತನಾಡಿ, ಬಿಜೆಪಿಯ ಎಲ್ಲ ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರು, ಮಾಜಿ ಶಾಸಕರು ಭಾಗವಹಿಸಲಿದ್ದಾರೆ ಎಂದರು. ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ರಾಜ್ಯಕ್ಕೆ ಮಾದರಿಯಾಗಲಿ. ತಾವು ಸಜ್ಜನ ಎಂದು ಯಾವಾಗಲೂ ಹೇಳಿಕೊಳ್ಳುತ್ತಾರೆ. ಅಂತಹ ಸಜ್ಜನರಾಗುವ ಅವಕಾಶ ಎಂದರೆ ಅದು ರಾಜೀನಾಮೆ. ಹೈಕೋರ್ಟ್‌ ಆದೇಶ ಬಂದಾಗಲೇ ರಾಜೀನಾಮೆ ನೀಡಬೇಕಿತ್ತು ಅಥವಾ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದ ಕೂಡಲೇ ರಾಜೀನಾಮೆ ಕೊಡಬೇಕಿತ್ತು. ಎಫ್ಐಆರ್‌ ಆದ ಬಳಿಕ ಪೊಲೀಸರ ಮುಂದೆ ನಿಲ್ಲಲು ಸಿದ್ದರಾಮಯ್ಯಗೆ ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟರು.

ಬಿಜೆಪಿಯಿಂದ ಸದನದಲ್ಲಿ ಈ ಕುರಿತು ಹೋರಾಟ ಮಾಡಿದಾಗ, ಇದು ಬಿಜೆಪಿ ಪ್ರೇರಿತ, ಇದು ಷಡ್ಯಂತ್ರ ಎಂದು ಸಚಿವರು ಆರೋಪ ಮಾಡಿದ್ದರು. ರಾಜಭವನಕ್ಕೆ ಮುತ್ತಿಗೆ ಹಾಕಿದ ಶಾಸಕರು, ಬಾಂಗ್ಲಾ ಮಾದರಿ ಹೋರಾಟ ಮಾಡುತ್ತೇವೆಂದು ಬೆದರಿಕೆ ಹಾಕಿದ್ದರು. ಈಗ ಇದು ತನಿಖೆಗೆ ಸೂಕ್ತ ಎಂದು ನ್ಯಾಯಾಂಗದಿಂದಲೇ ತಿಳಿದುಬಂದಿದೆ. ಅದಕ್ಕೆ ಸ್ಪಷ್ಟವಾದ ಕಾರಣವನ್ನೂ ನ್ಯಾಯಾಲಯ ಹೇಳಿದೆ ಎಂದರು.

ಬೇರೆ ದಾರಿ ಇಲ್ಲ
ಈಗ ಸಿದ್ದರಾಮಯ್ಯನವರಿಗೆ ಬೇರೆ ದಾರಿಯಿಲ್ಲ. ಅವರು ಯಾವುದಕ್ಕೆ ಕಾಯುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಬಿಜೆಪಿಯವರು ಪ್ರಕರಣ ದಾಖಲಿಸಿಲ್ಲ. ದೂರು ದಾಖಲಿಸಿದ್ದು ಆರ್‌ ಟಿಐ ಕಾರ್ಯಕರ್ತರು ಹಾಗೂ ಹೋರಾಟಗಾರರು. ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆ ಎಂದು ಆಪಾದನೆ ಮಾಡಿದ್ದರು. ಈಗ ನ್ಯಾಯಾಲಯಕ್ಕೆ ಯಾವ ರೀತಿಯ ಆಪಾದನೆ ಮಾಡುತ್ತಾರೆ? ಎಂದು ಅಶೋಕ್‌ ಪ್ರಶ್ನಿಸಿದರು.

ಎರಡೂ ಕೋರ್ಟ್‌ಗಳಲ್ಲಿ ಅವರಿಗೆ ಹಿನ್ನಡೆಯಾಗಿದೆ. ಮೇಲಿನ ಕೋರ್ಟ್‌ಗೆ ಹೋಗುವ ಅವಕಾಶ ಇದ್ದೇ ಇದೆ. ಬಿಜೆಪಿ ಏನೂ ಹೇಳಿಲ್ಲ. ಎಲ್ಲವನ್ನೂ ಕೋರ್ಟ್‌ ಹೇಳಿದೆ. ಲೋಕಾಯುಕ್ತ ತನಿಖೆಗೆ ವಹಿಸಿರುವುದರಿಂದ ಎಫ್ಐಆರ್‌ ಆಗಲಿದೆ. ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾದರೂ ಪೊಲೀಸರು, ಪೊಲೀಸ್‌ ಇಲಾಖೆಯಡಿಯಲ್ಲೇ  ಬರುತ್ತಾರೆ. -ಆರ್‌. ಅಶೋಕ್‌, ವಿಪಕ್ಷ ನಾಯಕ

Advertisement
Advertisement

Udayavani is now on Telegram. Click here to join our channel and stay updated with the latest news.

Next