ಬೆಂಗಳೂರು: ಮುಡಾ ಹಗರಣದ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ಹೈಕೋರ್ಟ್ ಎತ್ತಿಹಿಡಿದ ಬೆನ್ನಲ್ಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬುಧವಾರ (ಸೆ.25) ಮೈಸೂರು ಲೋಕಾಯುಕ್ತ ಪೊಲೀಸರು ಮುಡಾ ಹಗರಣದ ತನಿಖೆ ನಡೆಸಬೇಕೆಂದು ಆದೇಶ ನೀಡಿದೆ.
ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್, CrPC 156(3) ಅಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಿ 24-12-2024ರೊಳಗೆ ವರದಿ ಸಲ್ಲಿಸುವಂತೆ ಆದೇಶ ನೀಡಿದ್ದಾರೆ.
ಮುಡಾ ಹಗರಣದಲ್ಲಿ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯನ್ನು ಎತ್ತಿಹಿಡಿದಿದ್ದ ಹೈಕೋರ್ಟ್ ತನಿಖೆ ನಡೆಸುವಂತೆ ತೀರ್ಪು ನೀಡಿದ ಬೆನ್ನಲ್ಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೂಡಾ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಬೇಕೆಂದು ಆದೇಶ ನೀಡುವ ಮೂಲಕ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ತನಿಖೆಗೆ ಹೆದರುವುದಿಲ್ಲ, ತನಿಖೆ ಎದುರಿಸುವೆ: ಸಿಎಂ
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪಿನ ಕುರಿತು ಸಿಎಂ ಸಿದ್ದರಾಮಯ್ಯ ಸುದ್ದಿಗಾರರ ಜತೆ ಮಾತನಾಡುತ್ತ ಪ್ರತಿಕ್ರಿಯೆ ನೀಡಿದ್ದು, ನಿನ್ನೆ ಹೈಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಕೋರ್ಟ್ ಈ ಆದೇಶ ನೀಡಿದೆ. ನಾನು ಎಲ್ಲಾ ರೀತಿಯ ತನಿಖೆ ಎದುರಿಸಲು ಸಿದ್ಧ. ನನಗೆ ಕೋರ್ಟ್ ಆದೇಶದ ಪ್ರತಿ ಸಿಕ್ಕ ನಂತರ ವಿವರವಾಗಿ ನಾಳೆ (ಗುರುವಾರ ಸೆ.26) ಮಾತನಾಡುತ್ತೇನೆ. ವಕೀಲರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.