Advertisement

MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್‌ ಕೊಟ್ಟ ಸ್ನೇಹಮಯಿ ಕೃಷ್ಣ!

08:20 PM Sep 28, 2024 | Team Udayavani |

ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ದ ರಾಜ್ಯಪಾಲರಿಗೆ ದೂರು ನೀಡಿ ಕೋರ್ಟ್ ನಲ್ಲೂ ಮೇಲುಗೈ ಸಾಧಿಸಿ  ಮೈಸೂರು ಲೋಕಾಯುಕ್ತದಲ್ಲಿ ಎಫ್​ಐಆರ್ ದಾಖಲಾದರೂ ಬೆನ್ನು ಬಿಡದ ದೂರುದಾರ ಸ್ನೇಹಮಯಿ‌ ಕೃಷ್ಣ (Snehamayi Krishna) ಸಾಮಾಜಿಕ ಜಾಲತಾಣದಲ್ಲಿ 2011ರಲ್ಲಿ ವಿಪಕ್ಷ ನಾಯಕರಾಗಿದ್ದಾಗ ಸಿದ್ದರಾಮಯ್ಯ ಮಾತನಾಡಿದ್ದ ವಿಡಿಯೋ ಹಾಕಿ ರಾಜ್ಯಪಾಲರ ಅಧಿಕಾರ ವ್ಯಾಪ್ತಿ ಕುರಿತು ಹೇಳಿಕೆ ನೀಡಿದ್ದ ಸಿಎಂ ಸಿದ್ದರಾಮಯ್ಯಗೆ ಟಾಂಗ್‌  ಕೊಟ್ಟಿದ್ದಾರೆ.

Advertisement

ವಿಡಿಯೋದಲ್ಲಿ ಏನಿದೆ?
ಸ್ನೇಹಮಯಿ‌ ಕೃಷ್ಣ ಹಂಚಿಕೊಂಡಿರುವ ವಿಡಿಯೋದಲ್ಲಿ ಸಿದ್ದರಾಮಯ್ಯ ಮಾತನಾಡಿ ನನ್ನ ಪ್ರಕಾರ ರಾಷ್ಟ್ರಪತಿಗಳು ಸಂವಿಧಾನದ ಮುಖ್ಯಸ್ಥರು. ಅವರ ಪ್ರತಿನಿಧಿಗಳಾಗಿ ರಾಜ್ಯಪಾಲರುಗಳು ಪ್ರತಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಾರೆ. ಒಂದು ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂದು ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲೆ ಇರುತ್ತದೆ. ಹಾಗೆಯೇ ಸರ್ಕಾರ ತಪ್ಪು ಮಾಡಿದಾಗ ಎಚ್ಚರಿಕೆ ಕೊಡುವ ಅವರ ಮೇಲೆ ಕ್ರಮ ತೆಗೆದುಕೊಳ್ಳುವ, ಬುದ್ದಿ ಹೇಳುವ ಅಧಿಕಾರ ರಾಜ್ಯಪಾಲರಿಗೆ ಇದೆ. ಹೀಗಿರುವಾಗ ಅವರು ಅಧಿಕಾರವನ್ನು ಚಲಾಯಿಸಿದಾಗ, ಅದನ್ನು ರಾಜಕೀಯ ಪ್ರೇರಿತ, ದುರುದ್ದೇಶ ಪೂರಿತ, ವಿರೋಧ ಪಕ್ಷದವರು ಮಾಡುತ್ತಿದ್ದಾರೆ ಎಂದು ಹೇಳಿದರೆ, ಜನ ಅದನ್ನು ನಂಬಲ್ಲ ಎಂದಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಟಾಂಗ್​ ಕೊಟ್ಟಿದ್ದಾರೆ.

ಮುಡಾ ಪ್ರಕರಣ ಸಿಬಿಐ ತನಿಖೆಗೆ ವರ್ಗಾಯಿಸಲು ಹೈಕೋರ್ಟ್​ಗೆ ಅರ್ಜಿ
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಗುರುವಾರ (ಸೆ.27) ಎಫ್​ಐಆರ್​ ದಾಖಲಾಗಿದೆ. ಕೋರ್ಟ್ ಆದೇಶದಂತೆ ಮೈಸೂರು ಲೋಕಾಯುಕ್ತ ಎಸ್​ಪಿ ಕಚೇರಿಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಸಿದ್ದರಾಮಯ್ಯ ಎ1 ಆರೋಪಿಯಾಗಿದ್ದಾರೆ. ಆದರೆ, ದೂರುದಾರ ಸ್ನೇಹಮಯಿ ಕೃಷ್ಣ ಮುಡಾ ಹಗರಣ ಸಿಬಿಐ ತನಿಖೆಗೆ ವರ್ಗಾಯಿಸುವಂತೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಕೇಂದ್ರ ಸಚಿವ ಎಚ್‌ಡಿಕೆ, ಬಿಜೆಪಿಯಿಂದಲೂ ಟೀಕೆ:
2011ರಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದಾಗ ಸಿದ್ದರಾಮಯ್ಯ, ಗವರ್ನರ್ ಬಗ್ಗೆ ಯಾವ ರೀತಿ ಮಾತನಾಡಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ವಿಡಿಯೋ ಬಿಡುಗಡೆ ಮಾಡುವ ಮೂಲಕ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ರಾಜ್ಯಪಾಲರ ವಿಚಾರದಲ್ಲಿ ಸಿದ್ದರಾಮಯ್ಯ ಉಪದೇಶ ಮಾಡಿದ್ದಾರೆ, ಉತ್ತರ ಕೊಡಲಿ ಎಂದು ವಿಡಿಯೋ ಸಮೇತ ಸವಾಲು ಹಾಕಿದರು. ಇದಕ್ಕೆ ಕೌಂಟರ್ ಕೊಟ್ಟ ಸಿಎಂ ಸಿದ್ದರಾಮಯ್ಯ, ಅವರು ಹೇಳಿದ್ದಕ್ಕೆ ಉತ್ತರ ಕೊಡಬೇಕು ಎಂದು ಎಲ್ಲಿದೆ ಅಂತಾ ಗರಂ ಆಗಿದ್ದಾರೆ.

Advertisement

ಈ ಬಗ್ಗೆ ರಾಜ್ಯ ಬಿಜೆಪಿಯೂ ಕೂಡ ತನ್ನ ಎಕ್ಸ್‌ ಖಾತೆಯಲ್ಲಿ ವಿಡಿಯೋ ಹಾಕಿ ಅಧಿಕಾರ ಇಲ್ಲದಿದ್ದಾಗ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರ ಕಾರ್ಯವ್ಯಾಪ್ತಿ, ಅಧಿಕಾರ ಎಲ್ಲವೂ ನೆನಪಿತ್ತು. ಆದರೆ ಅಧಿಕಾರಕ್ಕೆ ಬಂದು, ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತು ಭ್ರಷ್ಟಾಚಾರ, ಅಕ್ರಮದ ಸುಳಿಯಲ್ಲಿ ಸಿಲುಕಿದಾಗ ರಾಜ್ಯಪಾಲರ ನಡೆ ರಾಜಕೀಯದಂತೆ ಕಂಡು ಬರುತ್ತಿರುವುದು ವಿಪರ್ಯಾಸ ! ಎಂದು ಬಿಜೆಪಿ ಟೀಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next