Advertisement

MUDA Case: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಲ್ಲಿಕಾರ್ಜುನ ಖರ್ಗೆ ಬಲ

12:31 AM Sep 28, 2024 | Team Udayavani |

ಬೆಂಗಳೂರು: ಮುಡಾ ಪ್ರಕರಣದಲ್ಲಿ ಕಾನೂನು ಅದರ ಕ್ರಮವನ್ನು ವಹಿಸುತ್ತದೆ. ಸಂದರ್ಭ ಬಂದಾಗ ನಾವೂ ಪರಿಶೀಲಿಸುತ್ತೇವೆ. ಈಗಂತೂ ಏನೇನೂ ಇಲ್ಲ. ನಾವೀಗ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತೇವೆ. ಏಕೆಂದರೆ ಅವರು ನಮ್ಮ ಪಕ್ಷವನ್ನು ಪ್ರತಿನಿಧಿಸುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾರ್ಮಿಕವಾಗಿ ಹೇಳಿದ್ದಾರೆ.

Advertisement

ಪ್ರಕರಣ ಸಂಬಂಧ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಉದ್ಯಮಿಗಳು 16 ಲಕ್ಷ ಕೋಟಿ ರೂ.ಗಳನ್ನು ನುಂಗಿ ಹಾಕಿದ್ದಾರೆ. ಬಿಜೆಪಿಯವರು ಅದನ್ನು ಬಿಟ್ಟು ಇದೊಂದು ಸಣ್ಣ ವಿಷಯ ಇಟ್ಟುಕೊಂಡು ಹೋರಾಡುತ್ತಿದ್ದಾರೆ. ಇದರಲ್ಲೇನು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆಯೇ ಅಥವಾ ಶಿಕ್ಷೆಗೆ ಗುರಿಪಡಿಸಲಾಗಿದೆಯೇ ಎಂದು ಪ್ರಶ್ನಿಸಿದರು.

ಗೋಧ್ರಾ ಘಟನೆ ನಡೆದಾಗ ನರೇಂದ್ರ ಮೋದಿ ರಾಜೀನಾಮೆ ಕೊಟ್ಟಿದ್ದರೆ? ಆ ಸಂದರ್ಭದಲ್ಲಿ ಅಮಿತ್‌ ಶಾ ವಿರುದ್ಧವೂ ಕೆಲವು ಪ್ರಕರಣಗಳು ಬಾಕಿ ಇದ್ದವು ಎಂದಿರುವ ಖರ್ಗೆ, ಕಾನೂನು ಅದರ ಕ್ರಮವನ್ನು ವಹಿಸುತ್ತದೆ. ಆದರೂ ನಿತ್ಯವೂ ಮುಡಾ… ಮುಡಾ ಎಂದು ಅದರದ್ದೇ ಸುದ್ದಿ ಕೇಳಿ ಕೇಳಿ ಬೇಜಾರಾಗಿದೆ ಎಂದರು.

ಸಿದ್ದರಾಮಯ್ಯ ನಮ್ಮ ಪಕ್ಷದ ಪ್ರತಿನಿಧಿ
ಎಫ್ಐಆರ್‌ ಆದರೂ ಸಿಎಂ ಬೆನ್ನಿಗೆ ಹೈಕಮಾಂಡ್‌ ಇರುತ್ತದೆಯೋ ಇಲ್ಲವೋ ಎಂಬುದು ಊಹಾತ್ಮಕವಾದ ಪ್ರಶ್ನೆ. ನಾವೀಗ ಅವರ ಬೆನ್ನಿಗೆ ಇದ್ದೇವೆ. ಬೆಂಬಲಿಸುತ್ತೇವೆ. ಅವರು ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ನೂರಾರು ಜನರನ್ನು ಕೊಂದ ವೀರಪ್ಪನ್‌, ಕೋಟ್ಯಂತರ ರೂ. ಲೂಟಿ ಮಾಡಿ ಸರಕಾರಕ್ಕೆ ವಂಚಿಸಿದ ಕರೀಂ ಲಾಲ್‌ ತೆಲಗಿ ಪ್ರಕರಣಗಳನ್ನು ನಾನೇ ಸಿಬಿಐಗೆ ಶಿಫಾರಸು ಮಾಡಿದ್ದೆ. ಅದಕ್ಕೇ ವಿರೋಧ ಬಂದಿತ್ತು ಎಂದರಲ್ಲದೆ, ಪಿಎಂ ಮೋದಿ ಎತ್ತಿರುವ ಪ್ರಶ್ನೆಗಳಿಗೆ ಹರಿಯಾಣದಲ್ಲೇ ಉತ್ತರ ಕೊಡುತ್ತೇನೆ. ಎಂದು ಹೇಳಿದರು.

ವ್ಯಕ್ತಿ ಇರಲಿ, ಬಿಡಲಿ ಪಕ್ಷ ಮುಂದುವರಿಯುತ್ತದೆ: ಖರ್ಗೆ
ವೈಯಕ್ತಿಕವಾಗಿ ಒಬ್ಬ ವ್ಯಕ್ತಿಯನ್ನು ಗುರಿ ಮಾಡಿ ಆತನ ವ್ಯಕ್ತಿತ್ವದ ಹರಣ ಮಾಡಬೇಡಿ. ಆತನ ಮೂಲಕ ಪಕ್ಷಕ್ಕೂ ಧಕ್ಕೆ ಆಗುತ್ತದೆ. ಕಾಂಗ್ರೆಸ್‌ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಬೇಕೆಂಬುದು ಅವರ ಆಸಕ್ತಿಯೇ ಹೊರತು, ವ್ಯಕ್ತಿ ಅಲ್ಲ. ವ್ಯಕ್ತಿ ಇರಲಿ, ಬಿಡಲಿ ಪಕ್ಷ ಮುಂದುವರಿಯುತ್ತದೆ. ಕಾಂಗ್ರೆಸ್‌ ಪಕ್ಷ ಮತ್ತು ಮೂಲಭೂತ ಮತಗಳನ್ನು ನಾಶಪಡಿಸುವುದೇ ಅವರ ಆಸಕ್ತಿ. ಹೀಗಾಗಿಯೇ ಅವರು ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next