ಬೆಂಗಳೂರು: ಮುಡಾ ಹಗರಣದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (CM Siddaramiah ) ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದ ಬೆನ್ನಲ್ಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬುಧವಾರ ಮೈಸೂರು ಲೋಕಾಯುಕ್ತ ಪೊಲೀಸರು ಮುಡಾ ಹಗರಣದ ತನಿಖೆ ನಡೆಸಬೇಕೆಂದು ಆದೇಶಿಸಿದ್ದು, ಈ ನಡುವೆ ಸಿಎಂ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಗುರುವಾರ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಹಗರಣದ ಆರೋಪ ಹೊತ್ತು ನ್ಯಾಯಾಲಯದಲ್ಲಿ ತನಿಖೆಗೆ ತೀರ್ಪು ಬಂದರೂ ಅಧಿಕಾರಕ್ಕೆ ಅಂಟಿಕೊಂಡು ಕುಳಿತ ಭಂಡ ಮುಖ್ಯಮಂತ್ರಿ ಎಂಬ ಕಪ್ಪು ಚುಕ್ಕೆಯನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿಸಿದ ಐತಿಹಾಸಿಕ ಪ್ರಮಾದಕ್ಕೆ ಕಾರಣರಾಗಬೇಡಿ, ನಿಮ್ಮ ಭಂಡತನದ ನಡೆಯನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸಲಾರರು ಎಂದು ವಾಗ್ದಾಳಿ ನಡೆಸಿದರು.
‘ನೈತಿಕತೆಯ ರಾಜಕೀಯ’ ಎಂದೋ ಮೂಲೆಗೆ ಸರಿಸಿರುವ ಕಾಂಗ್ರೆಸ್ ಹೈಕಮಾಂಡ್ ತನ್ನ ಅಜೆಂಡಾ ಏನಿದ್ದರೂ ಭ್ರಷ್ಟರ ರಕ್ಷಿಸುವುದು, ದೇಶದ ಕಾನೂನನ್ನು ಉಲ್ಲಂಘಿಸುವವರನ್ನು ಉತ್ತೇಜಿಸುವುದೇ ತಮ್ಮ ಆದ್ಯತೆ ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕರಣದಲ್ಲೂ ತೋರಿಸಿಕೊಟ್ಟಿದೆ. ವಾಲ್ಮೀಕಿ ನಿಗಮದ ತನಿಖೆ ತಾರ್ಕಿಕ ಅಂತ್ಯಕ್ಕೆ ಹೋದರೆ ಹೈ ಕಮಾಂಡ್ ಬುಡಕ್ಕೆ ಬರುತ್ತದೆ ಅಂತಾ ಕಾಂಗ್ರೆಸ್ ಹೈಕಮಾಂಡ್ಗೆ ಗೊತ್ತಿದೆ. ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ಭ್ರಷ್ಟ ಸಿಎಂ ಬೆನ್ನಿಗೆ ನಿಲ್ಲುತ್ತಿದೆ ಎಂದು ಆರೋಪಿಸಿದರು.
ಘನತೆವೆತ್ತ ರಾಜ್ಯಪಾಲರನ್ನು ಪಕ್ಷಪಾತಿಗಳೆಂದು ಜರಿದಿರಿ, ಅದಕ್ಕೆ ಉಚ್ಚ ನ್ಯಾಯಾಲಯವೇ ನಿನ್ನೆ ಉತ್ತರಕೊಟ್ಟಿತು, ನಿಮ್ಮ ಮೇಲಿನ ಆರೋಪದಲ್ಲಿ ಹುರುಳಿದೆ ಎಂಬುದನ್ನೂ ಉಲ್ಲೇಖಿಸಿತು. ಇಂದು ನಿಮ್ಮನ್ನು ಆರೋಪಿಯನ್ನಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಎರಡೂ ನ್ಯಾಯಾಲಯಗಳ ಆದೇಶವು ನೀವು ತಪ್ಪಿತಸ್ಥರೆಂಬ ಭಾವ ರಾಜ್ಯದ ಜನತೆಯಲ್ಲಿ ಮೂಡಲು ಪೂರಕವಾಗಿವೆ. ಇಷ್ಟಾಗಿಯೂ ‘ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬಂತೆ ನಡೆದು ಕೊಳ್ಳುತ್ತಿದ್ದೀರಿ, ಈಗಾಗಲೇ ಕಳಂಕದ ಕಪ್ಪುಮಸಿ ನಿಮ್ಮನ್ನು ಆವರಿಸಿಕೊಂಡಿದೆ ಇನ್ನಾದರೂ ರಾಜ್ಯದ ನೈತಿಕ ರಾಜಕಾರಣದ ಪರಂಪರೆಯ ಘನತೆ ಕುಗ್ಗದಂತೆ ನಡೆದುಕೊಳ್ಳಿ ಎಂದು ಬಿವೈವಿ ಆಗ್ರಹಿಸಿದರು.
ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ಮಾಡುತ್ತೇವೆ. ಯಾವುದೇ ತನಿಖೆಗೆ ಸಿದ್ಧ ಎಂದು ಸಿಎಂ ಹೇಳಿದ್ದಾರೆ. ಸಿಎಂ ವಿರುದ್ಧ ತನಿಖೆ ನಡೆಸುವಂತೆ ಮೈಸೂರು ಲೋಕಾಯುಕ್ತ ಎಸ್ಪಿಗೆ ಆದೇಶಿಸಿದೆ. ತಕ್ಷಣ ಎಫ್ಐಆರ್ ದಾಖಲಿಸಿ ತನಿಖೆ ಮಾಡಬೇಕು. ಲೋಕಾಯುಕ್ತ ಪೊಲೀಸರಿಂದ ನ್ಯಾಯಯುತ ತನಿಖೆ ಅಸಾಧ್ಯ. ಹೀಗಾಗಿ ಸಿಬಿಐನಿಂದಲೇ ತನಿಖೆ ಆಗಬೇಕು. ಸಿಬಿಐ ತನಿಖೆಗೆ ಆದೇಶಿಸಿದರೆ ಗೌರವ ಮತ್ತಷ್ಟು ಹೆಚ್ಚಾಗುತ್ತೆ ಎಂದು ಹೇಳಿದರು.