Advertisement

MUDA: ಎರಡುವರೆ ತಿಂಗಳ ಹಿಂದೆ ನಿವೇಶನ ವಾಪಸ್‌ ಕೊಟ್ಟಿದ್ರೆ ಇಷ್ಟೆಲ್ಲ ಆಗ್ತಿತ್ತಾ: ಪ್ರತಾಪ್

11:43 PM Oct 01, 2024 | Team Udayavani |

ಮೈಸೂರು: ಮುಡಾ ಹಗರಣದ ವಿಚಾರ ತಿಳಿದು ಎರಡೂವರೆ ತಿಂಗಳ ಹಿಂದೆಯೇ ನಾನು ಸಿಎಂ ಸಿದ್ದರಾಮಯ್ಯರಲ್ಲಿ ನಿಮಗೆ ಬಂದ ನಿವೇಶನಗಳ ವಾಪಸ್ ಕೊಟ್ಟು ಬಿಡಿ ಎಂದು ಹೇಳಿದ್ದೆ. ಸಿದ್ದರಾಮಯ್ಯರಿಗೆ ಗಿಳಿಗೆ ಹೇಳಿದಂತೆ ಹೇಳಿದರೂ ಅದನ್ನು ಕೇಳದೆ, ಕೇವಲ 14 ನಿವೇಶನಕ್ಕಾಗಿ 45 ವರ್ಷದ ವ್ಯಕಿತ್ವವನ್ನೇ ಕಳೆದುಕೊಂಡಿದ್ದಾರೆ ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಎರಡೂವರೆ ತಿಂಗಳ ಹಿಂದೆ ವಾಪಸ್ ಕೊಟ್ಟಿದ್ದರೆ ಇವತ್ತು ಪ್ರಾಸಿಕ್ಯೂಷನ್, ಕೇಸ್ ಏನೂ ಆಗುತ್ತಿರಲಿಲ್ಲ. ಕುರ್ಚಿಯೂ ಅಲುಗಾಡುತ್ತಿರಲಿಲ್ಲ. ಹೊಗಳು ಭಟ್ಟರು ಬಹುಪರಾಕ್ ಹಾಕುವವರ ಇಟ್ಟುಕೊಂಡಿರುವ ಪರಿಣಾಮ ಸಿಎಂ ಸಿದ್ದರಾಮಯ್ಯಗೆ ಈ ಸ್ಥಿತಿ ಬಂತು.  ಅಧಿಕಾರದಲ್ಲಿದ್ದಾಗ ಕುಟುಂಬದವರ ಹತ್ತಿರವಿಟ್ಟುಕೊಂಡರೆ, ಮಕ್ಕಳ ಬೆಳೆಸಲು ಮುಂದಾದರೆ ಅದೇ ಕುಟುಂಬ ನಿಮ್ಮ ಹೆಸರಿಗೆ ಕಳಂಕ ತರುತ್ತೆ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆ ಎಂದು ಪ್ರತಾಪ್ ಸಿಂಹ ಟೀಕಿಸಿದ್ದಾರೆ.

ಕದ್ದ ಒಡವೆ ವಾಪಸ್ ಕೊಟ್ರೆ ಕೇಸ್ ಮುಗಿಯುತ್ತಾ?
ಒಡವೆ ಕದ್ದ ಕಳ್ಳ ವಾಪಸ್ ಕೊಟ್ಟರೆ ಕೇಸ್ ಮುಗಿಯುತ್ತಾ? ಇಲ್ಲ‌ ಅಲ್ವಾ? ಸಿಎಂ ತಮ್ಮ ಸೈಟ್‌ಗೆ 62 ಕೋಟಿ ರೂಪಾಯಿ ಕೇಳಿದ ದಿನವೇ ಸಿಎಂ ಮೇಲಿನ ಗೌರವ, ವಿಶ್ವಾಸ ನೆಲ ಕಚ್ಚಿತು. ಈಗ ಸಿಎಂ ಪತ್ನಿ ನಿವೇಶನ ವಾಪಸ್ ಕೊಟ್ಟರೂ ಅಷ್ಟೇ, ಕೊಡದಿದ್ದರೂ ಅಷ್ಟೇ, ತನಿಖೆ ಆಗಲೇಬೇಕು ಅಂತ ಪ್ರತಾಪ್ ಸಿಂಹ ಆಗ್ರಹಿಸಿದರು.

ತಮ್ಮದೇ ಪಕ್ಷದ ಮಾಜಿ ಸಿಎಂಗೂ ಪರೋಕ್ಷ ಟಾಂಗ್‌!
ವರುಣಾ ಚುನಾವಣೆ ಸಂದರ್ಭದಲ್ಲೇ ನನಗೆ ಈ ನಿವೇಶನಗಳ ದಾಖಲೆಗಳ ಬಂದಿತ್ತು. ಆದರೆ ಅವರ ಪತ್ನಿ ಹೆಸರಿದೆ, ಹಾಗಾಗಿ ವೈಯಕ್ತಿಕ ದಾಳಿ ಬೇಡ ಅಂತಾ ಸುಮ್ಮನಿದ್ದೆ. ರಾಜಕಾರಣಿಗಳೇ, ನಿಮ್ಮ ಪತ್ನಿ, ಮಕ್ಕಳನ್ನು ಹದ್ದು ಬಸ್ತಿನಲ್ಲಿಟ್ಟುಕೊಳ್ಳಿ. ಈ ಹಿಂದೆ ಸಿಎಂಗಳಾಗಿ ಜೈಲಿಗೆ ಹೋಗಿದ್ದು ಅವರ ಕುಟುಂಬದ, ಮಕ್ಕಳ ಕಾರಣಕ್ಕಾಗಿ ಎಂಬುದು ನೆನಪಿರಲಿ ಅಂತ ಸಿದ್ದರಾಮಯ್ಯರನ್ನು ಟೀಕಿಸುತ್ತಲೇ ಮತ್ತೊಬ್ಬ ಮಾಜಿ ಸಿಎಂಗೆ ಪರೋಕ್ಷವಾಗಿ ಟಾಂಗ್ ನೀಡಿದರು.

 ಹೈಕೋರ್ಟ್‌ನಲ್ಲಿ ಫೈಟ್ ಮಾಡಿದ್ದು ಯಾಕೆ?
ಈಗ ಸಿಎಂ ಪತ್ನಿಯ ಭಾವನಾತ್ಮಕ ಕಾರ್ಡ್ ವರ್ಕ್ ಆಗಲ್ಲ. ಪಾರ್ವತಮ್ಮ ಅವರಿಗೆ ತಮ್ಮ ಪತಿಯ ತಪಸ್ಸಿನ ರೀತಿಯ ರಾಜಕಾರಣಕ್ಕಿಂತಾ ನಿವೇಶನ ಮುಖ್ಯವಾಗಿ ಇಷ್ಟು ದಿನ ಹಠ ಹಿಡಿದು ಕೂತಿದ್ದೆ ಬಹುದೊಡ್ಡ ತಪ್ಪು. ನಿವೇಶನ ವಾಪಸ್ ಕೊಡುವುದಾಗಿದ್ದರೆ ಹೈಕೋರ್ಟ್‌ನಲ್ಲಿ ಯಾಕೆ ಈ ಬಗ್ಗೆ ಫೈಟ್ ಮಾಡಿದ್ರಿ? ಎಂದು  ಪ್ರತಾಪ್ ಸಿಂಹ ಪ್ರಶ್ನಿಸಿದರು.

Advertisement

ಸಿಎಂ, ಡಿಸಿಎಂಗೆ ಹಂದಿ ಅಂತ ಕರೆದಿದ್ದರೆ ಸುಮ್ಮನೆ ಇರುತ್ತಿದ್ದರೆ?’
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಯಾವುದೇ ಅಧಿಕಾರಿ ಹಂದಿ ಎಂದು ಕರೆದಿದ್ದರೆ ಸುಮ್ಮನೆ ಇರುತ್ತಿದ್ದರೆ? ಕುಮಾರಸ್ವಾಮಿ ಅವರ ಬಗ್ಗೆ ಏನೇನೋ ಮಾತಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ  ಕಿಡಿಕಾರಿದರು. ಕೇಂದ್ರ ಸಚಿವ ಎಚ್‌. ಡಿ. ಕುಮಾರಸ್ವಾಮಿ ಮತ್ತು ಲೋಕಾಯುಕ್ತ ಎಡಿಜಿಪಿ ನಡುವಿನ ಜಟಾಪಟಿ ಕುರಿತು ಮಾತನಾಡಿ, ಮಿಸ್ಟರ್‌ ಚಂದ್ರಶೇಖರ್‌, ಭಾಷೆ ಮೇಲೆ ಹಿಡಿತ ಇರಲಿ. ಹಂದಿಗಳು ಬೇಕಿದ್ದರೆ ಆಂಧ್ರಕ್ಕೆ ಹೋಗಿ, ಅಲ್ಲೇ ಜಾಸ್ತಿ ಹಂದಿಗಳಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next