ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ವಾಪಸ್ ನೀಡಿರುವ 14 ನಿವೇಶನಗಳ ಸಹಿತ ಮುಡಾದಲ್ಲಿ ಇಲ್ಲಿಯ ವರೆಗೆ 50:50 ಅನುಪಾತದಲ್ಲಿ ನಡೆದಿರುವ ನಿವೇಶನಗಳ ಅಕ್ರಮ ಹಂಚಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಮುಡಾ ಕಚೇರಿಯನ್ನು ಜಾಲಾಡಿ ಸಂಗ್ರಹಿಸಿರುವ ಇ.ಡಿ.ಅಧಿಕಾರಿಗಳು ಅವುಗಳನ್ನು ಎರಡು ಪೆಟ್ಟಿಗೆಗಳಲ್ಲಿ ಒಯ್ದಿದ್ದಾರೆ.
Advertisement
ಅಧಿಕಾರಿಗಳ ವಿಚಾರಣೆಇ.ಡಿ. ಅಧಿಕಾರಿಗಳು ಮುಡಾದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಹಂತದ ಅಧಿಕಾರಿ, ಸಿಬಂದಿ ಹಾಗೂ ನೌಕರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಯಾವ ಯಾವ ಆಯುಕ್ತರು, ಅಧ್ಯಕ್ಷರ ಅವಧಿಯಲ್ಲಿ 50:50 ಅನುಪಾತದ ಎಷ್ಟೆಷ್ಟು ನಿವೇಶನಗಳನ್ನು ಹಂಚಲಾಗಿದೆ ಎಂಬ ವಿವರಗಳು, ದಾಖಲೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ, ಡೆವಲಪರ್ ಹಾಗೂ ಗುತ್ತಿಗೆದಾರರನ್ನು ಹೊರತುಪಡಿಸಿ ಮುಡಾ ಕಚೇರಿಯಲ್ಲಿ ಹೆಚ್ಚು ಓಡಾಡುತ್ತಿದ್ದ ವ್ಯಕ್ತಿಗಳ ಬಗ್ಗೆ ಕೂಡ ಕೆಳ ಹಂತದ ನೌಕರರನ್ನು ವಿಚಾರಿಸಿದ್ದಾರೆ ಎನ್ನಲಾಗಿದೆ.
ಕೆಲವು ನೌಕರರ ಮೊಬೈಲ್ ವಶಕ್ಕೆ ಪಡೆದು ದತ್ತಾಂಶ, ಸಂಪರ್ಕ ಸಂಖ್ಯೆಗಳು, ಕರೆ ದಾಖಲೆ, ಸಂದೇಶಗಳ ಮಾಹಿತಿಗಳನ್ನು ಸಂಗ್ರ ಹಿಸಿ ದ್ದಾರೆ. ಇ.ಡಿ.ಯವರ ಪ್ರಶ್ನೆಗಳ ಬಾಣಕ್ಕೆ ತತ್ತರಿಸಿ ಮುಡಾ ಸಿಬಂದಿ ಉತ್ತರಿಸಲು ತಡಬಡಾಯಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಮುಡಾದಲ್ಲಿ ಇ.ಡಿ. ಅಧಿಕಾರಿಗಳು 29 ತಾಸು ಕಾಲ ಕಡತಗಳನ್ನು ಪರಿಶೀಲಿಸಿದ್ದಾರೆ. ಶುಕ್ರವಾರ ಬೆಳಗ್ಗೆ 10.45ರ ಸುಮಾರಿಗೆ ಮುಡಾ ಕಚೇರಿಗೆ ದಾಳಿ ಮಾಡಿದ ಇ.ಡಿ. ಅಧಿಕಾರಿಗಳು ಮೊದಲ ದಿನ 12 ತಾಸು ಕಾಲ ವಿಚಾರಣೆ ನಡೆಸಿದ್ದಾರೆ. ಎರಡನೇ ದಿನವಾದ ಶನಿವಾರ ಬೆಳಗ್ಗೆ 9.40ಕ್ಕೆ ವಿಆರಂಭಿಸಿ ರವಿವಾರ ಬೆಳಗಿನ ಜಾವ 2.40ಕ್ಕೆ ಅಂತ್ಯಗೊಳಿಸಿದ್ದಾರೆ. ಅಂದರೆ ಸತತವಾಗಿ 17 ತಾಸು ಕಾಲ ದಾಖಲೆಗಳನ್ನು ಪರಿಶೋಧಿಸಿದ್ದಾರೆ. ಎರಡು ದಿನಗಳಲ್ಲಿ ಒಟ್ಟು 29 ತಾಸು ಪರಿಶೀಲನೆ ನಡೆಸಿದ್ದಾರೆ. ಮುಡಾ ಸ್ಥಾಪನೆಯಾದ ಬಳಿಕ ತನಿಖಾ ಸಂಸ್ಥೆಗಳಿಂದ ಇಷ್ಟು ದೊಡ್ಡ ದಾಳಿ ಇದೇ ಮೊದಲ ಬಾರಿ ಆಗಿದೆ.